ವಾರ್ಡ್ ಸಮಿತಿಗೆ ಹಿಂದಿನ ಅರ್ಜಿಗಳನ್ನು ಪರಿಗಣಿಸಿ

ward commitee
Published on

ಹುಬ್ಬಳ್ಳಿ: ಅವಳಿ ನಗರದಲ್ಲಿ ವಾರ್ಡ್ ಸಮಿತಿಗಳ ರಚನೆಗೆ ಹೊಸದಾಗಿ ಅರ್ಜಿಗಳನ್ನು ಸ್ವೀಕರಿಸುವ ಜತೆಗೆ ಹಳೇ ಅರ್ಜಿಗಳನ್ನು ಸಹ ಪರಿಗಣಿಸಬೇಕು. ಹು-ಧಾ ಮಹಾನಗರ ಪಾಲಿಕೆಯ ಠರಾವಿನಂತೆ ಆಗಸ್ಟ್ 15ರೊಳಗೆ ವಾರ್ಡ್ ಸಮಿತಿಗಳನ್ನು ರಚಿಸಲು ಪಾಲಿಕೆ ಆಯುಕ್ತರು ಕ್ರಮ ಕೈಗೊಳ್ಳಬೇಕು ಎಂದು ಹು-ಧಾ ವಾರ್ಡ್ ಸಮಿತಿ ಬಳಗದ ಸಂಚಾಲಕ ಲಿಂಗರಾಜ ಧಾರವಾಡಶೆಟ್ಟರ್ ಆಗ್ರಹಿಸಿದರು.

ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2 ವರ್ಷಗಳ ಹಿಂದೆ ನಾಗರಿಕರಿಂದ ಪಾಲಿಕೆಗೆ 626 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇವು ರದ್ದಾಗಿವೆ. ಎಲ್ಲರೂ ಹೊಸದಾಗಿ ಸಲ್ಲಿಸಬೇಕು ಎಂದು ಪಾಲಿಕೆ ಅಧಿಕಾರಿಗಳು ಮೌಖಿಕವಾಗಿ ಹೇಳುತ್ತಿದ್ದಾರೆ. ಈ ಹಿಂದೆ ಅರ್ಜಿ ಸಲ್ಲಿಸಿದವರು ಪುನಃ ಅರ್ಜಿ ಸಲ್ಲಿಸಬೇಕೇ ಎನ್ನುವ ಬಗ್ಗೆ ನಾಗರಿಕರಲ್ಲಿ ಗೊಂದಲವಿದೆ. ಈ ಕುರಿತು ನಾವು ಪಾಲಿಕೆ ಆಯುಕ್ತರಿಂದ ಸ್ಪಷ್ಟನೆ ಬಯಸುತ್ತೇವೆ ಎಂದು ಹೇಳಿದರು.

ಈ ಹಿಂದಿನ ಪಾಲಿಕೆ ಆಯುಕ್ತರು ಹೊಸದಾಗಿ ಅರ್ಜಿ ಸಲ್ಲಿಸಲು ಆಗಸ್ಟ್ 1 ಕೊನೆಯ ದಿನಾಂಕವೆಂದು ನೋಟಿಫಿಕೇಶನ್ ಹೊರಡಿಸಿದ್ದರು. ಈಗಲೂ ಪಾಲಿಕೆಯ ಕೆಲ ವಲಯ ಕಚೇರಿಗಳಲ್ಲಿ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ ಎಂಬ ದೂರುಗಳಿವೆ. ಪಾಲಿಕೆಯು ಒಮ್ಮೆ ಬಿಳಿ ಬಣ್ಣದಲ್ಲಿ, ಮತ್ತೊಮ್ಮೆ ಹಳದಿ ಬಣ್ಣದಲ್ಲಿ ಅರ್ಜಿ ನಮೂನೆಯನ್ನು ಮುದ್ರಿಸಿ ಗೊಂದಲದ ಜತೆಗೆ ವಿಳಂಬ ನೀತಿಯನ್ನು ಅನುಸರಿಸುತ್ತಿದೆ. ಇವರ ಉದ್ದೇಶ ಏನು ಎಂಬುದು ನಮಗೆ ತಿಳಿಯುತ್ತಿಲ್ಲ ಎಂದು ಅಭಿಪ್ರಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಬಳಗದ ಸದಸ್ಯರಾದ ಅಶೋಕ ಬಸವಾ, ಶಿವಾನಂದ ಬೆಳವಟಗಿ, ಶಿವಶಂಕರ ಐಹೊಳಿ, ಜಗದೀಶ ಉಣಕಲ್ಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net