ಸೋಲನ್ನೇ ಗೆಲುವಿನ ಮೆಟ್ಟಿಲಾಗಿ ಪರಿಗಣಿಸಿ: ಶಾಸಕ ಜಿ.ಟಿ.ದೇವೇಗೌಡ

8
Published on

ಮೈಸೂರು: ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದೇವೆ ಎನ್ನುವುದನ್ನು ಮನಸ್ಸಿನಲ್ಲಿಟ್ಟುಕೊಂಡು ಯಾರೂ ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡ. ಸೋಲನ್ನೇ ಗೆಲುವಿನ ಮೆಟ್ಟಿಲು ಎನ್ನುವಂತೆ ಪರಿಗಣಿಸಿ ಜೀವನದಲ್ಲಿ ಗುರಿ ಸಾಧಿಸಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ, ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ವಿಜಯನಗರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಎರಡನೇ ದಶಮಾನೋತ್ಸವ ಹಾಗೂ ಜಾನಪದೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂದಿನ ಸೋಲು, ನಾಳೆಯ ಗೆಲುವಾಗಿರುತ್ತದೆ. ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕು. ಜೀವನದಲ್ಲಿ ಅಡಂಬರ, ಅದ್ದೂರಿತನಕ್ಕೆ ಕಡಿವಾಣ ಹಾಕಿ ಸರಳವಾಗಿ ಬದುಕಬೇಕು ಎಂದು ಸಲಹೆ ನೀಡಿದರು.

ಅಕ್ಕಮಹಾದೇವಿ, ಸಾವಿತ್ರಿಬಾಯಿ ಫುಲೆ ಅಂತಹ ಮಹನೀಯರ ಆದರ್ಶವನ್ನು ಪಾಲಿಸಿ ಭವಿಷ್ಯ ರೂಪಿಸಿಕೊಳ್ಳಬೇಕು. ಧೈರ್ಯ, ಸಾಹಸದ ಜತೆಗೆ ಇಟ್ಟ ಗುರಿಯನ್ನು ತಲುಪುವುದಕ್ಕೆ ಸಂಕಲ್ಪ ಮಾಡಬೇಕು. ಐಷಾರಾಮಿ ಮದುವೆಗೆ ಒಪ್ಪದೆ ಸರಳವಾಗಿ ಮಾದುವೆ ಮಾಡಲು ಪಾಲಕರನ್ನು ಮನವೊಲಿಸಿ. ಆಸ್ತಿ ಮಾರಾಟ ಮಾಡಿ ಮದುವೆಗೆ ಒಪ್ಪಬೇಡಿ ಎಂದರು.

ಅಪ್ಪ-ಅಮ್ಮ ಎಷ್ಟೇ ಒತ್ತಡ ಹೇರಿದರೂ ಸರಳತೆಗೆ ಬೆಲೆ ಕೊಡಿ. ಅದರಲ್ಲಿ ಬರುವ ಆಸ್ತಿಯನ್ನೇ ತಮ್ಮ ಬದುಕಿಗೆ ಇಟ್ಟುಕೊಳ್ಳಬೇಕು. ಸ್ವಾಭಿಮಾನಿ ಬದುಕು ಸಾಗಿಸಿದರೆ ಸಮಾಜದಲ್ಲಿ ಬೆಳೆಯಬಹುದು ಎಂದು ಹೇಳಿದರು.

ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿನಿಯರು ಅತಿ ಹೆಚ್ಚು ತೇರ್ಗಡೆ ಹೊಂದುತ್ತಾರೆ. ಅದೇ ರೀತಿ ಎಲ್ಲ ರಂಗಗಳಲ್ಲೂ ತಮ್ಮದೇ ಆದ ಛಾಪುಮೂಡಿಸಿದ್ದಾರೆ. ಹೆಣ್ಣು ಮಕ್ಕಳು ಬೆಳಗ್ಗೆ ಎದ್ದು ಯೋಗಾಭ್ಯಾಸ ಮಾಡಬೇಕು. ನಿರಂತರ ವ್ಯಾಸಂಗ ಮಾಡಿದರೆ ಸಫಲರಾಗಬಹುದು ಎಂದರು.

ವಿಜಯನಗರ ಕಾಲೇಜಿಗೆ ಮೂಲಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯ ಶಾಲಾ, ಕಾಲೇಜುಗಳ ಅಭಿವೃದ್ಧಿಗೆ ಸಿಎಸ್‌ಆರ್ ನಿಧಿಯನ್ನು ಬಳಸಿ ಮೂಲಸೌಕರ್ಯ ಕಲ್ಪಿಸಲು ಯತ್ನಿಸಲಾಗಿದ್ದು, ಮುಂದೆಯೂ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದರು.

ಹಲವಾರು ವರ್ಷಗಳ ಹಿಂದೆ ರಾಗಿ, ಭತ್ತ, ಕಬ್ಬು ಕಣದಲ್ಲಿ ಇಟ್ಟು ಪೂಜೆ ಮಾಡುವ ಮೂಲಕ ಜಾನಪದ ಸೊಗಡು ಪಸರಿಸುವಂತೆ ಮಾಡಲಾಗುತ್ತಿತ್ತು. ಅಂತಹ ವಾತಾವರಣವನ್ನು ಮತ್ತೆ ಇಂದಿನ ಜಾನಪದೋತ್ಸವದಲ್ಲಿ ಕಂಡು ಬಂದಿದೆ. ಡಾಂಬರಿನ ರಸ್ತೆಯಲ್ಲಿ ಒಕ್ಕಣೆ ಮಾಡುತ್ತಾರೆ.

ಯಾವುದೇ ಒಳ್ಳೆಯ ಕೆಲಸ ಮಾಡಲು ಪ್ರೀತಿ ಇರಬೇಕು. ಸಾಂಪ್ರದಾಯಿಕ ಉಡುಗೆ ತೊಡುಗೆಯಲ್ಲಿ ಸಂಸ್ಕಾರ ಉಳಿಸಿ ಕಲೆ, ಸಾಹಿತ್ಯ, ಸಂಸ್ಕ ೃತಿ ಉಳಿಯಬೇಕು ಎಂದು ನುಡಿದರು.

ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿ, ಮುಂದಿನ ಕಾಲ ಹೆಚ್ಚು ಅಂಕ ಪಡೆದವರಿಗೆ ಭವಿಷ್ಯ ಎನ್ನುವಂತಾಗಿದೆ. ಈಗ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಬಂದು ಉದ್ಯೋಗ ನೀಡುತ್ತಿದ್ದಾರೆ. ನಿಮ್ಮಲ್ಲಿ ನಿಜವಾದ ಜ್ಞಾನ, ಹೆಚ್ಚು ಅಂಕ ಇದ್ದರೆ ಮಾತ್ರ ನಿಮ್ಮ ಭವಿಷ್ಯ ಇರುತ್ತದೆ ಎಂದರು.

ಇನ್ನೂ ಸ್ವಲ್ಪ ವರ್ಷದಲ್ಲಿ ನಿಮ್ಮ ಮನೆಗೆ ಬಂದು ಉದ್ಯೋಗಕ್ಕೆ ಆಯ್ಕೆ ಮಾಡುತ್ತಾರೆ. ಸ್ಮಾರ್ಟ್ ಫೋನ್‌ನಲ್ಲಿ ವಿಶ್ವದ ಎಲ್ಲ ಬೆಳವಣಿಗೆ, ಜ್ಞಾನ ನಿಮ್ಮ ಬೆರಳ ತುದಿಯಲ್ಲಿಯೇ ಇರಲಿದ್ದು, ಇನ್ನಷ್ಟು ಸ್ಮಾರ್ಟ್ ಆಗಲಿದೆ ಎಂದು ಹೇಳಿದರು.

ಪ್ರತಿಯೊಬ್ಬರೂ ಚೆನ್ನಾಗಿ ಓದಿ ಜ್ಞಾನವನ್ನು ನಿಮ್ಮದಾಗಿಸಿಕೊಳ್ಳಿ. ಆಗ ಉಜ್ವಲ ಭವಿಷ್ಯ ನಿಮ್ಮದಾಗುತ್ತದೆ. ನಾವು ಎಂದೂ ನಡೆದ ಬಂದ ದಾರಿ ಮರೆಯಬಾರದು. ಜಾನಪದೋತ್ಸವ ನಮ್ಮ ಹಿರಿಯರು ನಡೆಸಿಕೊಂಡು ಬಂದ ದಾರಿಯಾಗಿದೆ ಎಂದರು.

ಇಂದಿನ ದಿನಗಳಲ್ಲಿ ಪೈಪೋಟಿಯಲ್ಲಿ ಎಲ್ಲರನ್ನೂ ಹಿಂದಕ್ಕೆ ಹಾಕಿ ಮುಂದಕ್ಕೆ ಹೋಗುವುದು ಸ್ಥಿತಿಯಾಗಿದೆ. ಆದರೆ ಜನಪದ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವುದಾಗಿದೆ. ಈ ಕಾಲೇಜು ನಿರ್ಮಾಣಕ್ಕೆ ಜಿ.ಟಿ.ದೇವೇಗೌಡ ಉನ್ನತ ಶಿಕ್ಷಣ ಸಚಿವರಾಗಿ ಇನ್ನೂ ಸ್ವಲ್ಪ ದಿನ ಇದ್ದರೆ ವಿಜಯನಗರ ಕಾಲೇಜಿನ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಹಾಸ್ಟೆಲ್ ನಿರ್ಮಾಣ ಮಾಡುತ್ತಿದ್ದರು. ಪುಸ್ತಕದ ಆಚೆಗೆ ಜ್ಞಾನ ಇರಬೇಕು ಎಂದರು.

ಪ್ರಾಂಶುಪಾಲ ಜಿ.ಆರ್.ನಟರಾಜ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮೀ, ಉಪಾಧ್ಯಕ್ಷೆ ಸುಚಿತ್ರಾ, ಪ್ರಾಧ್ಯಾಪಕ ಪ್ರೊ.ಎಂ.ಎಲ್.ಅನಿತಾ, ಡಾ.ಎಚ್.ಪಿ.ಗೀತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net