

ಅರಕಲಗೂಡು: ನೀರು ಪ್ರಕೃತಿದತ್ತವಾಗಿ ಬಂದ ಅಮೂಲ್ಯ ಕೊಡುಗೆ. ಇದನ್ನು ವ್ಯರ್ಥವಾಗಿ ಪೋಲು ಮಾಡದೆ ಸಂರಕ್ಷಿಸಬೇಕು. ನೀರಿನ ಪ್ರಾಮುಖ್ಯತೆ ಮತ್ತು ಮಿತ ಬಳಕೆ ಬಗ್ಗೆ ಜನರಿಗೆ ನಿರಂತರ ಜಾಗೃತಿ ಮೂಡಿಸಬೇಕು ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎಸ್.ಯೋಗೇಶ್ ಸಲಹೆ ನೀಡಿದರು.
ತಾಲೂಕಿನ ಮುದ್ದನಹಳ್ಳಿ ಗ್ರಾಮದ ಮರಳಕಟ್ಟೆ ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಸೋಮವಾರ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿ, ನೀರಿನ ಪ್ರತಿ ಹನಿಯೂ ಅತ್ಯಂತ ಅಮೂಲ್ಯ ಎಂದರು.
ಇಂದು ನೀರಿನ ಪ್ರಮಾಣ ಕಡಿಮೆಯಾಗಿದ್ದು, ಅತ್ಯಂತ ಜಾಗ್ರತೆಯಿಂದ ನೀರು ಬಳಸಿ ಉಳಿಸುವುದು ಅಗತ್ಯವಾಗಿದೆ. ಪ್ರತಿದಿನವೂ ಕುಡಿಯುವ ನೀರಿನ ಪ್ರಮಾಣ ಪರಿಸರದಲ್ಲಿ ಕಡಿಮೆಯಾಗುತ್ತಿದೆ. ಅಂತರ್ಜಲ, ಜಲಮೂಲಗಳು ಕಣ್ಮರೆಯಾಗುತ್ತಿವೆ. ವರ್ಷದಿಂದ ವರ್ಷಕ್ಕೆ ನೀರಿನ ಅಭಾವ ಹೆಚ್ಚಾಗುತ್ತಿದೆ. ಈ ಬಗ್ಗೆ ಎಲ್ಲರೂ ಎಚ್ಚರ ವಹಿಸಬೇಕು ಎಂದರು.
ನೀರು ಎಲ್ಲ ಜೀವಿಗಳಿಗೆ ಅತ್ಯಗತ್ಯವಾಗಿ ಬೇಕು. ಕೃಷಿ ಮತ್ತು ಕೈಗಾರಿಕೆಗಳಿಗೂ ಅನಿವಾರ್ಯವಾಗಿದೆ. ನೀರಿನ ಸಂರಕ್ಷಣೆಗಾಗಿ, ಮಳೆನೀರು ಕೊಯ್ಲು, ನೀರಿನ ಮರುಬಳಕೆ, ನೀರು ನಿಯಂತ್ರಣ -ಪರಿಣಾಮಕಾರಿ ಸಾಧನಗಳನ್ನು ಅಳವಡಿಸುವುದು ಮತ್ತು ವೈಯಕ್ತಿಕ ಮಟ್ಟದಲ್ಲಿ ವ್ಯರ್ಥ ಮಾಡುವುದನ್ನು ತಪ್ಪಿಸಬೇಕಿದೆ ಎಂದರು.
ಗ್ರಾಮ ಮಾಜಿ ಸದಸ್ಯರಾದ ಎಂ.ಎನ್.ಮಹೇಶ್, ಎಂ.ಎಸ್.ಶಿವರಾಮ್, ಮುಖಂಡರಾದ ಎಂ.ಲಕ್ಷ್ಮಣ ಗೌಡ, ಎಂ.ಎನ್. ಜಯರಾಮ್, ಡೈರಿ ರಾಜೇಗೌಡ, ನಿವೃತ್ತಿ ಖಜಾನೆ ಅಧಿಕಾರಿ ಎಂ.ಎಸ್.ಗಂಗಾಧರ್, ಧರಣೇಶ್, ಅರುಣ್ ಕುಮಾರ್, ಎಚ್.ಎಲ್.ರಘು, ಕೃಷ್ಣೇಗೌಡ ಇತರರಿದ್ದರು.