ಗ್ರಾಮೀಣ ಭಾಗದ ಕೆರೆಗಳನ್ನು ಸಂರಕ್ಷಿಸಿರಿ: ಶಾಸಕ ಎಸ್.ಆರ್.ವಿಶ್ವನಾಥ್ ಅಭಿಮತ

mla lake
Published on

ಬೆಂಗಳೂರು: ಗ್ರಾಮೀಣ ಭಾಗದಲ್ಲಿರುವ ಕೆರೆಗಳನ್ನು ಸಂರಕ್ಷಿಸಲು ಹೆಚ್ಚಿನ ಆದ್ಯತೆ ನೀಡಬೇಕಾದ ಅಗತ್ಯತೆ ಇದೆ ಎಂದು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ತಿಳಿಸಿದ್ದಾರೆ.

ಕ್ಷೇತ್ರದ ಅರಕೆರೆ, ಮಾರಸಂದ್ರ, ಬುಡುಮನಹಳ್ಳಿ, ಚಲ್ಲಹಳ್ಳಿ ಹಾಗೂ ಕೊಲವರಾಯನಹಳ್ಳಿ ಗ್ರಾಮಗಳಲ್ಲಿ ಸುಮಾರು 2.5 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ಮತ್ತು ನೆಲ್ಲುಕುಂಟೆ, ಸುರಧೇನುಪುರ, ಬುಡುಮನಹಳ್ಳಿ ಗ್ರಾಮಗಳಲ್ಲಿ ಸುಮಾರು 68 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಶನಿವಾರ ಮಾತನಾಡಿದರು.

ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಮಳೆನೀರನ್ನು ಮರುಪೂರಣಗೊಳಿಸಲು ಕೆರೆಗಳಿಗೆ ನೀರು ತುಂಬಿಸುವುದನ್ನು ಬಿಟ್ಟು ಅನ್ಯ ಮಾರ್ಗವಿಲ್ಲ. ಇದನ್ನು ಪ್ರತಿ ಗ್ರಾಮೀಣ ಜನತೆ ಮನಗಾಣಬೇಕಿದೆ. ಗ್ರಾಮೀಣ ಜನರ ನೀರಿನ ಅಗತ್ಯತೆ ಪೂರೈಸುವಲ್ಲಿ ಹಿಂದಿನಿಂದಲೂ ಕೆರೆಗಳು ಮಹತ್ವದ ಪಾತ್ರ ವಹಿಸಿವೆ. ಅವುಗಳ ಸಂರಕ್ಷಣೆ, ಹೂಳೆತ್ತುವ ಮೂಲಕ ನೀರಿನ ಸಂಗ್ರಹಣೆಯನ್ನು ಹೆಚ್ಚಿಸುವುದು ನಮ್ಮೆಲ್ಲರ ಕರ್ತವ್ಯ ಎಂಬ ಭಾವನೆಯೊಂದಿಗೆ ನಾವೆಲ್ಲರೂ ಕಾಳಜಿ ವಹಿಸಬೇಕಿದೆ ಎಂದು ವಿಶ್ವನಾಥ್ ವಿವರಿಸಿದರು.

ಈ ಸಂದರ್ಭದಲ್ಲಿ ಅರಕೆರೆ ಗ್ರಾಪಂ ಅಧ್ಯಕ್ಷೆ ಮುನಿಲಕ್ಷ್ಮಮ್ಮ ಪರಶುರಾಮ್​, ಉಪಾಧ್ಯಕ್ಷ ರಾಮಣ್ಣ, ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಎಚ್​.ಬಿ.ಹನುಮಯ್ಯ, ರೈತ ಮುಖಂಡ ಸತೀಶ್​ ಕಡತನಮಲೆ ಹಾಗೂ ಇತರ ಮುಖಂಡರು ಹಾಜರಿದ್ದರು.

ನೀರು ಜೀವಜಲ. ಅದರ ಹೊರತಾಗಿ ಜೀವಸಂಕುಲಕ್ಕೆ ಉಳಿಗಾಲವಿಲ್ಲ ಎಂಬುದರ ಅರಿವು ಪ್ರತಿಯೊಬ್ಬರಿಗೂ ತಿಳಿದಿರಬೇಕು. ಈ ದಿಸೆಯಲ್ಲಿ ಕೆರೆಗಳನ್ನು ಸಂರಕ್ಷಿಸಲು ಎಲ್ಲರೂ ಸ್ವಯಂಪ್ರೇರಣೆಯಿಂದ ಕೈಜೋಡಿಸಬೇಕು.

- ಎಸ್.ಆರ್. ವಿಶ್ವನಾಥ್, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net