

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಣ್ಣು ಹಾಗೂ ನೀರು ಪ್ರಕೃತಿದತ್ತ ನೈಸರ್ಗಿಕ ಸಂಪನ್ಮೂಲಗಳಾಗಿದ್ದು, ಸುಸ್ಥಿರ ಕೃಷಿಗೆ ಅವುಗಳ ರಕ್ಷಣೆ ಅಗತ್ಯ. ಮಣ್ಣು ಮತ್ತು ನೀರು ರೈತರ ಜೀವನಾಡಿಗಳು ಎಂದು ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಪಾಟೀಲ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರೊ. ಶಿವರಾಜ ಅಮೃತಪ್ಪ ಹೊಸಮನಿ ದತ್ತಿ ನಿಮಿತ್ತ ಭಾನುವಾರ ಏರ್ಪಡಿಸಿದ್ದ ಬರಗಾಲದ ಬವಣೆ ನೀಗಿಸಲು ಮಣ್ಣು ಮತ್ತು ನೀರು ನಿರ್ವಹಣೆ ವಿಷಯ ಕುರಿತ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ನೀರು ಹಾಗೂ ಮಣ್ಣು ಒಂದೇ ನಾಣ್ಯದ ಎರಡು ಮುಖಗಳು. ಮನುಷ್ಯ, ಪ್ರಾಣಿ, ಪಕ್ಷಿಗಳ ಜೀವನ ಈ ಸಂಪನ್ಮೂಲಗಳ ಮೇಲೆ ಅವಲಂಬನೆಯಾಗಿದೆ. ರಭಸದ ಮಳೆ, ಗಾಳಿಯಿಂದ ಮಣ್ಣಿನ ಮೇಲ್ಪದರು ಸವಕಳಿ ಆಗುತ್ತದೆ. ಒಂದು ಇಂಚು ದಪ್ಪ ಮಣ್ಣು ರಚನೆಯಾಗಲು ಸಾವಿರಾರು ವರ್ಷಗಳೇ ಬೇಕು. ಮಣ್ಣಿನ ಸವಕಳಿ ತಡೆಗಟ್ಟಲು ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದು, ಹೊಲಗಳಲ್ಲಿ ಬದುಗಳ ನಿರ್ಮಾಣ ಮಾಡಿ ಮಣ್ಣು ರಕ್ಷಿಸುವುದು ಅಗತ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ಕೃಷಿ ವಿಶ್ವವಿದ್ಯಾಲಯ ರೈತರ ಜ್ಞಾನಾಭಿವೃದ್ಧಿಗೆ ನಿರಂತರ ಮಾರ್ಗದರ್ಶನ ಮಾಡುತ್ತಿರುವುದು ಶ್ಲಾಘನೀಯ ಎಂದರು. ದತ್ತಿದಾನಿ ಈಶ್ವರಚಂದ್ರ ಹೊಸಮನಿ ದತ್ತಿ ಆಶಯ ಕುರಿತು ಮಾತನಾಡಿದರು.
ಶಿವಾನಂದ ಭಾವಿಕಟ್ಟಿ, ಶಂಕರಲಿಂಗ ಶಿವಳ್ಳಿ, ರಾಜೇಂದ್ರ ಸಾವಳಗಿ, ಎಸ್.ಬಿ. ಗುತ್ತಲ, ಕೆ.ಎಂ. ಅಂಗಡಿ, ಸರೋಜಾ ಕುಲಕರ್ಣಿ, ಡಾ. ಎ.ಎಸ್. ಪ್ರಭಾಕರ, ಬಿ.ಡಿ. ಪಾಟೀಲ, ಡಾ. ಎ.ಎಸ್.ಯರಗುಪ್ಪಿ, ಪ್ರದೀಪ ಮಠದ, ಎಂ.ಎಫ್. ಹಿರೇಮಠ, ಇತರರು ಇದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರಕ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು.