

ಕೆರೂರ: ಪರಿಸರದಲ್ಲಿ ವಾಯು ಮಾಲಿನ್ಯ ಹಾಗೂ ರಾಸಾಯನಿಕ ವಸ್ತುಗಳ ಬಳಕೆಯಿಂದ ಓರೆನ್ ಪದರ ಸವಕಳಿಯಾಗುತ್ತದೆ. ಅದರ ಸಂರಕ್ಷಣೆ ಹೊಣೆ ನಮ್ಮೆಲ್ಲರದ್ದು ಎಂದು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲ ಸಚಿವ ಡಾ. ಟಿ.ಬಿ. ಅಳ್ಳೊಳ್ಳಿ ಹೇಳಿದರು.
ಸಮೀಪದ ಕೆರಕಲಮಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಓರೆನ್ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಓರೆನ್ ಪದರಿನ ಸವಕಳಿಯಿಂದ ಮಾನವರಿಗೆ ಹಲವಾರು ದುಷ್ಪರಿಣಾಮಗಳು ಉಂಟಾಗುತ್ತವೆ. ಆದ ಕಾರಣ ಪರಿಸರ ನಾಶವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ವಿಜ್ಞಾನ ಶಿಕ್ಷಕ ಎಸ್.ವೈ. ಮಡಿವಾಳರ ಮಾತನಾಡಿ, ಓರೆನ್ ಪದರ ಭೂಮಿಯ ಮೇಲಿನ ಪ್ರಾಣಿಗಳನ್ನು ಮತ್ತು ಸಸ್ಯ ಸಂಪತ್ತನ್ನು ರಕ್ಷಿಸುತ್ತದೆ. ಆದ್ದರಿಂದ ಓರೆನ್ ಪದರ ಹಾಳಾಗದಂತೆ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದು ಹೇಳಿದರು.
ಮುಖ್ಯಶಿಕ್ಷಕ ಬಿ.ಎಚ್. ನದಾಫ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಾತಾವರಣದಲ್ಲಿ ಕ್ಲೋರ್ಲೋೋರೊ ಕಾರ್ಬನ್, ಸಲ್ಪರ್ ಡೈ ಆಕ್ಸೈಡ್, ಕಾರ್ಬನ್ ಡೈ ಆಕ್ಸೈಡ್ ಹೆಚ್ಚಳದಿಂದ ವಾತಾವರಣ ಕಲುಷಿತವಾಗಿದೆ. ಇಂತಹ ಹಲವಾರು ರಾಸಾಯನಿಕ ವಸ್ತುಗಳು ಓರೆನ್ ಪದರ ನಶಿಸಿ ಹೋಗುವಂತೆ ಮಾಡುತ್ತದೆ ಎಂದರು.
ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಭಾಗ್ಯಶ್ರೀ ಬಸವರಾಜ ಅಂಕಲಗಿ (ಪ್ರಥಮ), ಶರತ್ ಸಿದ್ದಪ್ಪ ಬೂದಿನಗಡ (ದ್ವಿತೀಯ), ಚೈತ್ರಾ ಬಸವರಾಜ ಮ್ಯಾಗಿನಮನಿ ಹಾಗೂ ಶ್ರೀಧರ ಯಮನಪ್ಪ ಕಂಬಾರ (ತೃತೀಯ) ಅವರಿಗೆ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ವಿತರಿಸಲಾಯಿತು.
ಸಹ ಶಿಕ್ಷಕಿಯರಾದ ಆರ್.ವೈ. ಬದರಿ, ಪಿ.ಎಚ್. ಜಾಲಿಹಾಳ, ದೈಹಿಕ ಶಿಕ್ಷಣ ಶಿಕ್ಷಕಿ ಆರ್.ಟಿ. ಕಕರಟ್ಟಿ, ಬಾಗಲಕೋಟೆ ತೋಟಗಾರಿಕೆ ವಿವಿ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಸಿಬ್ಬಂದಿ ಈರಣ್ಣ ಬುಳ್ಳಾ, ಗಂಗನಗೌಡ ಪಾಟೀಲ ಭಾಗವಹಿಸಿದ್ದರು.
ಕವನ ಬಡಿಗೇರ ಪ್ರಾರ್ಥನೆ ಹಾಡಿದರು. ಸಹಶಿಕ್ಷಕ ಪಿ.ಬಿ. ಭಜಂತ್ರಿ ಕಾರ್ಯಕ್ರಮ ನಿರೂಪಿಸಿದರು. ಟಿ.ಟಿ. ನಾರಾಯಣಕರ ವಂದಿಸಿದರು.