

ಗೊಳಸಂಗಿ: ಸಕಲ ಜೀವರಾಶಿಗಳು ನೀರಿನಿಂದಲೇ ಬದುಕುತ್ತವೆ. ಆ ಜೀವಜಲವೇ ಇಲ್ಲವಾದರೆ ಬದುಕು ದುಸ್ತರ. ಅಮೂಲ್ಯವಾದ ಜಲ ಸಂಪತ್ತನ್ನು ಹಿತ-ಮಿತವಾಗಿ ಉಪಯೋಗಿಸಬೇಕೆಂದು ಕೂಡಗಿ ಎನ್‌ಟಿಪಿಸಿ ಪ್ರಧಾನ ವ್ಯವಸ್ಥಾಪಕ ಬಿದ್ಯಾನಂದ ಝಾ ಹೇಳಿದರು.
ಸಮೀಪದ ಕೂಡಗಿ ಎನ್‌ಟಿಪಿಸಿಯಲ್ಲಿ ಶನಿವಾರ ಜರುಗಿದ ವಿಶ್ವ ಜಲ ದಿನಾಚರಣೆಯಲ್ಲಿ ಮಾತನಾಡಿದ ಅವರು, ನೀರು ಉಳಿಸುವ ಜತೆಗೆ ಪರಿಸರದ ಸಂರಕ್ಷಣೆಯೂ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದರು.
ಜನರಲ್ ಮ್ಯಾನೇಜರ್ ಸಂತೋಷ ತಿವಾರಿ ಮಾತನಾಡಿ, ಪರಿಶುದ್ಧ ಗಾಳಿ, ನೀರು ಪ್ರತಿಯೊಬ್ಬ ವ್ಯಕ್ತಿಯ ಜೀವನಾವಶ್ಯಕ ವಸ್ತುಗಳು. ಇವು ಬೇಕು ಎಂದರೆ ಪ್ರತಿಯೊಬ್ಬರೂ ಮರ ಬೆಳೆಸಬೇಕೆಂದರು.
ಸ್ಥಾವರದ ಪ್ರಮುಖ ಬೀದಿಗಳಲ್ಲಿ ಎನ್‌ಟಿಪಿಸಿ ಪರಿವಾರದಿಂದ ನೀರು ಉಳಿಸಿ, ಜೀವ ಸಂಕುಲ ರಕ್ಷಿಸಿ ಘೋಷವಾಕ್ಯದೊಂದಿಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಅಭಿಯಾನದುದ್ದಕ್ಕೂ ನೀರಿನ ಸಂರಕ್ಷಣೆ, ಮಿತವ್ಯಯ ಬಳಕೆ ಕುರಿತು ಭಿತ್ತಿಪತ್ರಗಳು ಎಲ್ಲೆಡೆ ಕಂಡು ಬಂದವು. ನೀರು ಸಂರಕ್ಷಣೆ ಕುರಿತು ಜನಜಾಗತಿ ಮೂಡಿಸುತ್ತ ಎಲ್ಲ ನೌಕರ ವರ್ಗದವರು ಪ್ರತಿಜ್ಞಾವಿಧಿ ಸ್ವೀಕರಿಸಿದರು.