ಪಾರಂಪರಿಕ ಸ್ಥಳ ಸಂರಕ್ಷಣೆ ಪರಮ ಗುರಿ

09hbd1
Published on

ಹಳೇಬೀಡು : ವಿಶ್ವದಲ್ಲಿ ಪಾರಂಪರಿಕ ಮಹತ್ವವುಳ್ಳ ಸ್ಥಳಗಳನ್ನು ಗುರುತಿಸಿ ಅದನ್ನು ಸಂರಕ್ಷಿಸುವ ಜತೆಗೆ ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ದಾಟಿಸುವುದು ಸಂಸ್ಥೆಯ ಪರಮ ಗುರಿ ಎಂದು ಯುನೆಸ್ಕೊ ನಿರ್ದೇಶಕ ಲಜಾರೆ ಎಲ್ಮೊನೊ ಒಸ್ಸಾಮೊ ಹೇಳಿದರು.


ವಿಶ್ವಪರಂಪರೆ ತಾಣವೆಂದು ಹಳೇಬೀಡು ದೇಗುಲಗಳು ಮತ್ತು ಇನ್ನಿತರ ಸ್ಮಾರಕಗಳನ್ನು ಘೋಷಿಸಿದ ಬಳಿಕ ಶುಕ್ರವಾರ ನಿರ್ದೇಶಕರ ತಂಡದೊಂದಿಗೆ ಮೊದಲ ಬಾರಿ ಪಟ್ಟಣಕ್ಕೆ ಭೇಟಿ ನೀಡಿ ದೇಗುಲ ವೀಕ್ಷಿಸಿ ಮಾತನಾಡಿದರು.


ಪಾರಂಪರಿಕ ಸ್ಥಳಗಳ ಸಂರಕ್ಷಣೆ ಎನ್ನುವುದು ಕೇವಲ ಒಂದು ಸಂಸ್ಥೆ ಅಥವಾ ಪುರಾತತ್ವ ವಿಭಾಗದ ಹೊಣೆಗಾರಿಕೆಯಾಗಿರುವುದಿಲ್ಲ. ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಆಸಕ್ತಿಯುಳ್ಳ ಪ್ರತಿಯೊಬ್ಬರೂ ರಕ್ಷಣಾ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ಅಂತಹ ಜಾಗೃತಿ ಮೂಡಿಸಲು ಯುನೆಸ್ಕೊ ಶ್ರಮಿಸುತ್ತದೆ. ಇದೇ ತಿಂಗಳು ನವದೆಹಲಿಯಲ್ಲಿ ಭಾರತ ಸರ್ಕಾರದ ಪ್ರತಿನಿಧಿಗಳು ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಯುನೆಸ್ಕೊ ಪ್ರಾತಿನಿಧಿಕ ಸದಸ್ಯರ ಸಭೆಯು ನಡೆದು ಸಂರಕ್ಷಣೆ ಮತ್ತು ಸಹಕಾರದ ಬಗ್ಗೆ ಉತ್ತಮ ಚರ್ಚೆ ನಡೆಸಲಾಗಿದೆ. ಪ್ರಧಾನಿ ಅವರ ದೂರದೃಷ್ಟಿಯ ಚಿಂತನೆಯನ್ನು ನಮ್ಮ ಸಂಸ್ಥೆಯು ಶ್ಲಾಘಿಸಿದ್ದಲ್ಲದೆ, ಅವರ ಕೆಲ ಸಲಹೆಗಳನ್ನು ಮುಕ್ತವಾಗಿ ಸ್ವೀಕರಿಸಿದ್ದೇವೆ ಎಂದರು.


ಭಾರತದಲ್ಲಿ ಐತಿಹಾಸಿಕ ಮಹತ್ವವುಳ್ಳ 48 ಸ್ಥಳಗಳನ್ನು ಯುನೆಸ್ಕೊ ನಿರ್ವಹಣೆ ಮಾಡುತ್ತಿದೆ. ಇದಲ್ಲದೆ ನೈಸರ್ಗಿಕ ಮತ್ತು ಮಿಶ್ರ ಪರಂಪರೆಯುಳ್ಳ ಸ್ಥಳಗಳನ್ನೂ ಗುರುತಿಸಿ ಸಂರಕ್ಷಣೆ ಮಾಡಲಾಗುತ್ತಿದೆ. ಜನರ ಪಾಲ್ಗೊಳ್ಳುವಿಕೆ ಇಲ್ಲದೆ ಸದಾಕಾಲ ಸಂರಕ್ಷಣೆ ಮಾಡುವುದು ಅಸಾಧ್ಯ ಎಂದು ಅಭಿಪ್ರಾಯಪಟ್ಟರು.


ತಂಡದೊಂದಿಗೆ ಆಗಮಸಿದ್ದ ಯುನೆಸ್ಕೊ ಸಹ ನಿರ್ದೇಶಕಿ ಜ್ಯೋತಿ ಹೊಸಅಗ್ರಹಾರ ಮಾತನಾಡಿ, ದಶಕದ ಹಿಂದೆಯೇ ಹಳೇಬೀಡು ಮತ್ತು ಬೇಲೂರು ಪಟ್ಟಣದಲ್ಲಿರುವ ವಿವಿಧ ಪಾರಂಪರಿಕ ಸ್ಥಳಗಳನ್ನು ನಾವು ಗುರುತಿಸಿ ಯುನೆಸ್ಕೊ ಮಾನ್ಯತೆ ಪಡೆಯಲು ಯೋಜನೆ ರೂಪಿಸಿದ್ದೆವು. ಅದು ಕಳೆದ ವರ್ಷ ಅಂದರೆ 2023ರ ಸೆಪ್ಟೆಂಬರ್‌ನಲ್ಲಿ ಸಾಕಾರಗೊಂಡಿದೆ. ಪ್ರಾಚೀನ ಪರಂಪರೆಯನ್ನು ಉಳಿಸಲು ಯಾವೆಲ್ಲ ಮಾರ್ಗಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ಸಂಸ್ಥೆಗೆ ಅಗಾಧ ಅನುಭವವಿದೆ. ಇಂತಹ ಸ್ಮಾರಕಗಳ ಸಂರಕ್ಷಣೆಯು ಸಂಯೋಜನೆ, ಸಹಕಾರ ಮತ್ತು ಸಕಾರಾತ್ಮಕ ಆಡಳಿತದಿಂದ ಮಾತ್ರ ಯಶ್ವಿಯಾಗುತ್ತದೆ. ಮಾನವ ಪೀಳಿಗೆಯ ಬಗ್ಗೆ ತಿಳಿದುಕೊಳ್ಳಲು ಹೊರಟರೆ, ಶಿಲಾಯುಗದಿಂದಲೂ ಆತನು ಚಿತ್ರಕಲೆ ಮತ್ತು ಶಿಲ್ಪಕಲೆಯಲ್ಲಿ ವಿಕಾಸಗೊಳ್ಳುತ್ತಾ ಬಂದಿರುವುದು ಗೊತ್ತಾಗುತ್ತದೆ. ಅಂತಹ ಪರಂಪರೆಯನ್ನು ಯಾವ ಬೆಲೆ ತೆತ್ತಾದರೂ ನಾವು ಉಳಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.


ತಂಡದೊಂದಿಗೆ ಹಾಜರಿದ್ದ ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಹಳೇಬೀಡು ಹಾಗೂ ಬೇಲೂರು ದೇಗುಲಗಳ ಪರಿಮಿತಿಯಲ್ಲಿ ಅನೇಕ ಜನರು ಬದುಕು ಕಟ್ಟಿಕೊಂಡಿದ್ದಾರೆ. ಅವರಿಗೆ ಅನ್ಯಾಯವಾಗದಂತೆ ಸಂರಕ್ಷಣೆಯ ನೀತಿ ನಿಯಮಗಳನ್ನು ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು. ಕೇಂದ್ರ ಪುರಾತತ್ವ ವಿಭಾಗದ ಬೆಂಗಳೂರು ವೃತ್ತ ಅಧೀಕ್ಷಕ ಬಿಪಿನ್ ಚಂದ್ರ ನೇಗಿ, ಸ್ಮಾರಕ ಸಂರಕ್ಷಣಾಧಿಕಾರಿ ಗೌತಮ್, ತಹಸೀಲ್ದಾರ್ ಎಂ.ಮಮತಾ ಸ್ಥಳೀಯರು ಇದ್ದರು.

ಯುನೆಸ್ಕೊ ಅನುದಾನದಿಂದ ಭಾರತದ ವಿವಿಧ ವಿಶ್ವಪರಂಪರೆ ಸ್ಮಾರಕಗಳಲ್ಲಿ ಅನೇಕ ಸಂರಕ್ಷಣಾ ಕಾರ್ಯ ನಡೆಯುತ್ತಿವೆ. ಎಲ್ಲೂ ಸಂಸ್ಥೆಯು ಪ್ರಸ್ತುತ ಜಾರಿಯಲ್ಲಿರುವ ಆಚರಣೆ ಅಥವಾ ಸಂಸ್ಕೃತಿಗೆ ಅಡ್ಡಿಯುಂಟು ಮಾಡಿಲ್ಲ. ಪಾರಂಪರಿಕ ದೇಗುಲದಲ್ಲಿ ಪ್ರಸ್ತುತ ನಡೆಯುತ್ತಿರುವ ಆಚರಣೆ ಮತ್ತು ಧಾರ್ಮಿಕ ವಿಧಿಗಳು ಯಥಾಸ್ಥಿತಿ ಮುಂದುವರಿಯುತ್ತವೆ.
ಲಜಾರೆ ಎಲ್ಮೊನೊ ಒಸ್ಸಾಮೊ
ನಿರ್ದೇಶಕ, ಯುನೆಸ್ಕೊ

ಹಳೇಬೀಡಿನ ಸ್ಮಾರಕಗಳ ಸಂರಕ್ಷಣೆ ಮತ್ತು ನಿರ್ವಹಣಾ ವಿಧಾನದ ಬಗ್ಗೆ ಕಾರ್ಯಕಾರಿ ಯೋಜನೆ ಶೀಘ್ರದಲ್ಲಿ ಸಿದ್ಧವಾಗಲಿದೆ. ಮೊದಲ ಭೇಟಿಯಲ್ಲದೆ ಇನ್ನೂ ಒಂದೆರಡು ಸಮೀಕ್ಷೆಗಳನ್ನೂ ನಡೆಸಬೇಕಾಗುತ್ತದೆ. ಪ್ರವಾಸಿಗರು ಅಥವಾ ಇತಿಹಾಸಕಾರರಿಗೆ ಅಗತ್ಯ ಅನುಕೂಲ ಕಲ್ಪಿಸುವುದು ಪ್ರವಾಸೋದ್ಯಮ ಇಲಾಖೆಯ ಹೊಣೆ. ಯುನೆಸ್ಕೊ ಪರಂಪರೆಯ ಸಂರಕ್ಷಣೆ ಮಾಡುತ್ತದೆ.
ಜ್ಯೋತಿ ಹೊಸಅಗ್ರಹಾರಸಹ ನಿರ್ದೇಶಕಿ ಯುನೆಸ್ಕೊ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net