

ನರಗುಂದ: ಬೆಳೆ ವಿಮೆ ಮಧ್ಯಂತರ ಪರಿಹಾರ ನೀಡಿಲ್ಲವೆಂದು ಆರೋಪಿಸಿ ತಾಲೂಕಿನ ರೈತರು ನಡೆಸಿದ ಹೋರಾಟಕ್ಕೆ ಮಣಿದ ಅಧಿಕಾರಿಗಳು ಬುಧವಾರದಿಂದ ಮತ್ತೆ ಮಧ್ಯಂತರ ಪರಿಹಾರ ಅರ್ಜಿಗಳ ಪರಿಶೀಲನೆಗೆ ಮುಂದಾಗಿದ್ದಾರೆ. ಇದರಿಂದಾಗಿ ರೈತರು ನಿಟ್ಟುಸಿರು ಬಿಡುವಂತಾಗಿದೆ.
ಪರಿಹಾರ ನೀಡುವಂತೆ ಆಗ್ರಹಿಸಿ ಇನ್ಶೂರೆನ್ಸ್ ಕಂಪನಿ ಗದಗ ಜಿಲ್ಲಾ ವ್ಯವಸ್ಥಾಪಕ ಶರಣಬಸಪ್ಪ, ತಾಲೂಕು ಕೋ-ಆರ್ಡಿನೇಟರ್ ಕರಿಯಪ್ಪ ಹಿರೇಕುರುಬರ ಅವರನ್ನು ರೈತರು ಮಂಗಳವಾರ ತಡರಾತ್ರಿವರೆಗೆ ಊಟಕ್ಕೂ ಬಿಡದೆ ತರಾಟೆಗೆ ತೆಗೆದುಕೊಂಡಿದ್ದರು.
ರೈತರ ಸಮಸ್ಯೆ ಕುರಿತು ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ಜನಮಟ್ಟಿ ಹಾಗೂ ಶರಣಪ್ಪ ಅವರು, ಕಂಪನಿಯ ರಾಜ್ಯ ಮುಖ್ಯ ಸಹಾಯಕ ವ್ಯವಸ್ಥಾಪಕ ಮಂಗೇಶ ಪುರೋಹಿತ ಅವರಿಗೆ ಮನವರಿಕೆ ಮಾಡಿದ್ದರು.
ಈ ಹಿಂದೆ ಬೆಳೆವಿಮೆ ಹಣ ತುಂಬಿ, ಮಧ್ಯಂತರ ಪರಿಹಾರಕ್ಕೆ ಅರ್ಜಿ ಸಲ್ಲಿಸಿರುವ ರೈತರಿಗೆ ಹಣ ಬಾರದಿದ್ದಲ್ಲಿ ಅಂತಹವರ ಐಡಿ ಸಂಖ್ಯೆ, ಸ್ವೀಕೃತಿ ಪತ್ರದ ಸಂಪೂರ್ಣ ಮಾಹಿತಿಯನ್ನು ನರಗುಂದದ ರೈತ ಸಂಪರ್ಕ ಕೇಂದ್ರದಲ್ಲಿ 2 ದಿನಗಳ ಕಾಲ ಸ್ವೀಕರಿಸಲು ಅಧಿಕಾರಿಗಳಿಗೆ ಮಂಗೇಶ ಅವರು ಮೌಖಿಕ ಸೂಚನೆ ನೀಡಿದರು. ಅಲ್ಲದೆ, 7 ದಿನಗಳಲ್ಲಿ ಅರ್ಜಿಗಳ ನಕಲು ಪ್ರತಿ ಪರಿಶೀಲಿಸಿದ ನಂತರ ಸಮಗ್ರ ಮಾಹಿತಿಯನ್ನು ಕೇಂದ್ರದ ಇನ್ಶೂರೆನ್ಸ್ ಕಂಪನಿ ಅಧಿಕಾರಿಗಳಿಗೆ ಒಪ್ಪಿಸಬೇಕು. ಆ ನಂತರ ಕೇಂದ್ರದ ಅಧಿಕಾರಿಗಳು ಪರಿಹಾರ ನೀಡುವುದರ ಬಗ್ಗೆ ಅಂತಿಮ ಸೂಚನೆ ನೀಡಿದರೆ ಮುಂದಿನ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದ್ದರಿಂದ ಅರ್ಜಿಗಳ ಸ್ವೀಕಾರಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಬುಧವಾರ 180ಕ್ಕೂ ಅಧಿಕ ರೈತರು ಅರ್ಜಿ ಸಲ್ಲಿಸಿದ್ದಾರೆ.
ಮಧ್ಯಂತರ ಬೆಳೆವಿಮೆ ಪರಿಹಾರಕ್ಕೆ ಸಂಬಂಧಿಸಿ 2024 ಅಕ್ಟೋಬರ್‌ನಲ್ಲಿ ತಾಲೂಕಿನ ರೈತರಿಂದ 6769 ಅರ್ಜಿ ಸ್ವೀಕೃತಗೊಂಡಿದ್ದವು. 3.66 ಕೋಟಿ ರೂಪಾಯಿ ಪರಿಹಾರ ವಿತರಿಸಲಾಗಿದೆ. ಆದರೀಗ ಕೆಲ ರೈತರು ಪರಿಹಾರ ಬಂದಿಲ್ಲವೆಂದು ಆರೋಪಿಸಿದ್ದಾರೆ. ಹೀಗಾಗಿ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ವಿಮೆ ವಂಚಿತ ರೈತರ ಮಾಹಿತಿ ಪಡೆಯುತ್ತಿದ್ದೇವೆ. ಶರಣಬಸಪ್ಪ ರೊಳ್ಳಿ, ಓರಿಯಂಟಲ್ ಇನ್ಶೂರೆನ್ಸ್ ಕಂಪನಿ ಗದಗ ಜಿಲ್ಲಾ ವ್ಯವಸ್ಥಾಪಕ. ಕೃಷಿ ಇಲಾಖೆಗೆ ಸಂಬಂಧಿಸಿದ ಬೆಳೆವಿಮೆ, ಬೆಳೆಹಾನಿ ಪರಿಹಾರ ಹಾಗೂ ವಿವಿಧ ಸಹಾಯಧನ ಯೋಜನೆಗಳಡಿ ಕೃಷಿ ಯಂತ್ರೋಪಕರಣ ಪಡೆದುಕೊಳ್ಳಬೇಕಾದರೆ ರೈತರು ಏಜೆಂಟರ ಮೊರೆ ಹೋಗಬಾರದು. ಬದಲಾಗಿ ಕೃಷಿ ಇಲಾಖೆಯಿಂದ ಕಾಲ-ಕಾಲಕ್ಕೆ ನೀಡುವ ನೈಜ ಮಾಹಿತಿಗಳನ್ನಾಧರಿಸಿ ನೇರವಾಗಿ ಕೃಷಿ ಅಧಿಕಾರಿಗಳನ್ನೇ ಭೇಟಿಯಾಗಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ಆಕಸ್ಮಾತ್ ಯಾರಾದರೂ ವೈಯಕ್ತಿಕ ಪ್ರಮಾದ ಮಾಡಿಕೊಂಡು ಸಮಸ್ಯೆಗೆ ಸಿಲುಕಿದರೆ ಕೃಷಿ ಇಲಾಖೆ ಅಧಿಕಾರಿಗಳು ಹೊಣೆಗಾರರಲ್ಲ. ಮಂಜುನಾಥ ಜನಮಟ್ಟಿ. ಸಹಾಯಕ ಕೃಷಿ ನಿರ್ದೇಶಕ