ಶ್ರೀ ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಪವಿತ್ರೋತ್ಸವ

26
Published on

ಮೈಸೂರು: ವಿಜಯನಗರದಲ್ಲಿರುವ ಶ್ರೀಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶನಿವಾರ ಪವಿತ್ರೋತ್ಸವ ವಿಶೇಷ ಪೂಜಾ ಮಹೋತ್ಸವ ಆರಂಭವಾಯಿತು.
ಶನಿವಾರ ಆರಂಭವಾದ ಪವಿತ್ರೋತ್ಸವ ವಿಶೇಷ ಪೂಜಾ ಮಹೋತ್ಸವ ಸೆ.20 ಜರುಗಲಿದೆ.
ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಮಾತನಾಡಿ, ಲೋಕದಲ್ಲಿ ಸಮಸ್ಯೆಗಳು, ದುಷ್ಟಶಕ್ತಿಗಳು ಆಚರಣೆಯಿಂದಾಗಿ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ. ಉತ್ಸವದ ಬಗ್ಗೆ ಅಗ್ನಿಪುರಾಣ ಹಾಗೂ ಗರುಡ ಪುರಾಣಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಎಲ್ಲರಿಗೂ ಶಾಂತಿ, ಸಂತೋಷ, ಲಭಿಸಲಿ ಎಂಬ ಉದ್ದೇಶದಿಂದ ಸುದರ್ಶನ ನರಸಿಂಹ ಕ್ಷೇತ್ರಗಳಲ್ಲಿ ಅಂಕನಾರ್ಪಣದಿಂದ ತೊಡಗಿ ಯಾಗಶಾಲ ಮಂಡಲಾರಾಧನೆಯೊಂದಿಗೆ ಭಗವಂತನಿಗೆ(ಯೋಗಾನರಸಿಂಹ ಸ್ವಾಮಿಯವರಿಗೆ) ಶುದ್ಧವಾದ ರೇಷ್ಮೆಯಿಂದ ಮಾಡಲ್ಪಟ್ಟ ಮಾಲೆಗಳನ್ನು ಪವಿತ್ರೀಕರಿಸಿ(ಶುದ್ಧೀಕರಿಸಿ) ಧರಿಸಲಾಗುವುದು. ಇದರಿಂದಾಗಿ ಜಗತ್ತಿಗೆ ಕ್ಷೇಮ ಉಂಟಾಗುತ್ತದೆ. ಸರ್ವದೋಷ ನಿವಾರಣೆ, ಸರ್ವಯಜ್ಞ ಫಲಪ್ರದ, ಸರ್ವದೋಷ ಉಪಶಮನ, ಸರ್ವ ಸುಷ್ಟಿಕರ, ಸರ್ವ ಕಾಮಪ್ರದ ಮತ್ತು ಲೋಕಶಾಂತಿ ಈ ಪವಿತ್ರೋತ್ಸವದಿಂದ ಲಭಿಸಲಿದೆ ಎಂದರು.
ದೇವಾಲಯ ಸಂಸ್ಥಾಪಕರಾದ ಡಾ.ಭಾಷ್ಯಂ ಸ್ವಾಮಿ ಪವಿತ್ರೋತ್ಸವದ ಪೂಜಾ ಕೈಂಕರ್ಯದ ನೇತೃತ್ವ ವಹಿಸಿದ್ದರು. ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net