ಎನ್.ಐ.ಟಿ.ಕೆ. ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ.ಎಸ್. ಬಾಬು ನಾರಾಯಣ್ ಅವರಿಗೆ ವಿದಾಯ

mng--9 may consaltent engenirs
Published on

ಮಂಗಳೂರು: ಅಸೋಸಿಯೇಶನ್ ಆಫ್ ಕನ್ಸಲ್ಟೆಂಟ್ ಸಿವಿಲ್ ಇಂಜಿನಿಯರ್ಸ್‌ (ಇಂಡಿಯಾ) ಮಂಗಳೂರು ಶಾಖೆಯ ವಿಶೇಷ ಸಭೆ ಮಿಲಾವೋ ಹಾತ್ ಬಾಬು ಕೇ ಸಾತ್ ಕಾರ್ಯಕ್ರಮ ನಗರದ ಹೊಟೇಲ್ ಸಭಾಂಗಣದಲ್ಲಿ ಮಂಗಳವಾರ ಜರಗಿತು.


ಅಸೋಸಿಯೇಶನ್ ಆಫ್ ಕನ್ಸ್‌ಲ್ಟಂಟೆಂಟ್ ಸಿವಿಲ್ ಇಂಜಿನಿಯರ್ (ಇಂಡಿಯಾ) ದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಲ್ಬಾವಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಸಲಹೆಗಾರ ಹಾಗು ಎನ್.ಐ.ಟಿ.ಕೆ. ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಎಸ್. ಬಾಬು ನಾರಾಯಣ್ ಅವರು ನಿವೃತ್ತಿ ಹೊಂದಿದನ್ನು ಪರಿಗಣಿಸಿ ಅವರನ್ನು ಸನ್ಮಾನಿಸಿ,ವಿದಾಯ ನೀಡಲಾಯಿತು.


ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಪ್ರೊ.ಕೆ.ಎಸ್. ಬಾಬು ನಾರಾಯಣ್ ಅವರು, ತಮ್ಮ ವೃತ್ತಿ ಜೀವನದಲ್ಲಿ ಸಹಕರಿಸಿದ ಮತ್ತು ಪ್ರೋತ್ಸಾಹಿಸಿದ ಸರ್ವರನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರ ಧರ್ಮಪತ್ನಿ ಮಲ್ಲಿಕಾ, ಪುತ್ರಿ ಡಾ. ಮೇದಿನಿ ಉಪಸ್ಥಿತರಿದ್ದರು.


ಎನ್.ಐ.ಟಿ.ಕೆ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಆರ್.ಕೆ. ಯಾಜಿ ಅಭಿನಂದನಾ ಭಾಷಣಗೈದರು, ಪ್ರೊ.ಎಸ್. ಬಾಬು ನಾರಾಯಣ್ ಅವರ ಸರಳ ಆದರ್ಶ ವ್ಯಕ್ತಿತ್ವ ಅವರು ಸಲ್ಲಿಸಿದ ಸುಧೀರ್ಘ ನಿಸ್ವಾರ್ಥ ಸೇವೆ, ಕರ್ತವ್ಯ ನಿಷ್ಠೆ, ವಿದ್ಯಾರ್ಥಿಗಳಿಗೆ ನೀಡಿದ ಅಮೂಲ್ಯ ಮಾರ್ಗದರ್ಶನ, ಸಾಧಿಸಿದ ಶೈಕ್ಷಣಿಕ ಸಾಧನೆಗಳನ್ನು ಪ್ರಶಂಶಿಸಿ ನಿವೃತ್ತಿ ವೃತ್ತಿ ಜೀವನಕ್ಕೆ ಮಾತ್ರ ಸೀಮಿತವಾಗಿರಲಿ ಪ್ರವೃತ್ತಿಯಲ್ಲಿ ಅವರ ಅಮೂಲ್ಯ ಸೇವೆ ಸಮಾಜಕ್ಕೆ ಲಭಿಸಲಿ ಎಂದರು.
ತೂಗು ಸೇತುವೆಗಳ ಸರದಾರ ಗಿರೀಶ್ ಭಾರಧ್ವಾಜ್, ಪುತ್ತೂರು ನಗರ ಮೂಲದ ಮಾಸ್ಟರ್ ಪ್ಲಾನಿಂಗ್ ಸಂಸ್ಥೆಯ ಮಾಲಿಕ ಆನಂದ ಕುಮಾರ್, ಮಂಗಳೂರು ಸ್ಮಾರ್ಟ್ ಸಿಟಿ ಸಂಸ್ಥೆಯ ಮಹಾ ಪ್ರಬಂಧಕರಾದ ಅರುಣ ಪ್ರಭ ಅತಿಥಿಗಳಾಗಿದ್ದರು.


ಅಸೋಸಿಯೇಶನ್ ಆಫ್ ಕನ್ಸ್‌ಲ್ಟಂಟೆಂಟ್ ಸಿವಿಲ್ ಇಂಜಿನಿಯರ್ಸ್‌ (ಇಂಡಿಯಾ) ಮಂಗಳೂರು ಶಾಖೆಯ ಅಧ್ಯಕ್ಷ ಉಜ್ವಲ್ ಡಿಸೋಜ ಸ್ವಾಗತಿಸಿದರು. ಕಾರ್ಯದರ್ಶಿ ವಿನೋದ್ ಡಿಸೋಜ ವಂದಿಸಿದರು. ವಿಜಯ ವಿಷ್ಣು ಮಯ್ಯ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net