ಕಾಂಗ್ರೆಸ್ ಯಾತ್ರೆ ನಿಲ್ಲಿಸಲು ಸಲಹೆ ಕೊಟ್ಟ ಶಾಸಕ ಎನ್.ಮಹೇಶ್..

n.mahesh
Published on

ಚಾಮರಾಜನಗರ: ಕಾಂಗ್ರೆಸ್ ವತಿಯಿಂದ ಗುಂಡ್ಲುಪೇಟೆಯಲ್ಲಿ ಶುಕ್ರವಾರ ಹಮ್ಮಿಕೊಂಡಿರುವ 'ಭಾರತ ಐಕ್ಯತಾ ಯಾತ್ರೆ'ಯನ್ನು ನಿಲ್ಲಿಸಿಬಿಡಿ ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಸಲಹೆ ನೀಡಿದ್ದಾರೆ.

ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಇನ್ನೂ ಭಾರತವನ್ನೇ ಸರಿಯಾಗಿ ನೋಡಿಲ್ಲ. ಹಳ್ಳಿಗಳನ್ನು ಸುತ್ತಿಲ್ಲ, ಜಿಲ್ಲೆಗಳು ಗೊತ್ತಿಲ್ಲ. ಹೀಗಿರುವಾಗ ಭಾರತ್ ಜೋಡೋ ಯಾತ್ರೆ ಹೆಸರಿನಲ್ಲಿ ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹತ್ತಿಪ್ಪತ್ತು ಸಾವಿರ ಜನರನ್ನು ಕರೆದುಕೊಂಡು ಏನು ಜೋಡಿಸುತ್ತಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.


ಭಾರತ ಒಗ್ಗಟ್ಟಿನ ಭೂಮಿ. ಪ್ರಧಾನ ಮಂತ್ರಿ ನರೇಂದ್ರಮೋದಿ ಇದನ್ನು ಸುಲಭವಾಗಿ ಅರ್ಥ ಮಾಡಿಕೊಂಡರು. ರೈಲು ನಿಲ್ದಾಣದ ುಟ್‌ಪಾತ್‌ನಲ್ಲಿ ಬೆಳೆದು ಹಿಮಾಲಯದಲ್ಲಿ ಕುಳಿತು ಧ್ಯಾನ ಮಾಡುವವರೆಗೂ ಮೋದಿ ದೇಶದ ದರ್ಶನ ಮಾಡಿದ್ದಾರೆ. ಇತ್ತೀಚಿಗಷ್ಟೇ ಕಾಂಗ್ರೆಸ್ ತೊರೆದ ಗುಲಾಮ್ ನಬಿ ಆಜಾದ್ ಹೇಳುವಂತೆ ರಾಹುಲ್ ಗಾಂಧಿ ರಾಜಕೀಯದಲ್ಲಿ ಪ್ರಬುದ್ಧರಲ್ಲ. ಹೀಗಾಗಿ ಅವರು ಭಾರತ್ ಜೋಡೋ ಯಾತ್ರೆ ಬದಲು 'ಭಾರತ್ ನೋಡೋ ಯಾತ್ರೆ ಮಾಡಲಿ' ಎಂದು ಸಲಹೆ ನೀಡಿದರು.


ರಾಹುಲ್ ಗಾಂಧಿ ಪಾದಯಾತ್ರೆ ಮಾಡುವ ಬದಲು ಮೋಟಾರ್ ಬೈಕ್‌ನಲ್ಲಿ ಕನಿಷ್ಠ 2 ವರ್ಷ ಹಳ್ಳಿಗಳನ್ನು ಸುತ್ತಲಿ. ಅಲ್ಲಿ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರ ಅಕೌಂಟ್‌ಗಳಿಗೆ ಹಣ ಬಂದಿರುವುದು, ಕೇಂದ್ರದಿಂದ ಬಿಡುಗಡೆಯಾದ ಅನುದಾನ ಸೋರಿಕೆಯಾಗದೆ ಗ್ರಾಮ ಪಂಚಾಯಿತಿಗಳಿಗೆ ಸಂಪೂರ್ಣವಾಗಿ ತಲುಪುತ್ತಿರುವುದು, ಸ್ವಚ್ಛ ಭಾರತ್ ಅಭಿಯಾನದಡಿ 8 ವರ್ಷಗಳಲ್ಲಿ 11.5 ಕೋಟಿ ಶೌಚಗೃಹ ನಿರ್ಮಾಣ ಮಾಡಿರುವುದು, ಆಯುಷ್ಮಾನ್ ಭಾರತ್, ಜಲಜೀವನ್ ಮಿಷನ್ ಇತರ ಯೋಜನೆಗಳು ಅನುಷ್ಠಾನಗೊಂಡಿರುವ ಬಗ್ಗೆ ತಿಳಿದುಕೊಳ್ಳಲಿ. ಇದೆಲ್ಲದ್ದರಿಂದ ರಾಹುಲ್ ಗಾಂಧಿಗೆ ಜ್ಞಾನೋದಯವಾದರೆ ಅವರೇ ಬಿಜೆಪಿ ಸೇರಲಿದ್ದಾರೆ ಎಂದರು.


ಪ್ರಧಾನಮಂತ್ರಿ ನರೇಂದ್ರ ಮೋದಿ ಸಂವಿಧಾನದ ಆಶಯಗಳಡಿ ದೇಶದ ಜನರ ಮನಸ್ಸುಗಳನ್ನು ಜೋಡಿಸಿದ್ದಾರೆ. ಆದರೆ ಕಾಂಗ್ರೆಸ್‌ನವರು ಮನಸ್ಸುಗಳು ಹೊಡೆದು ಹೋಗಿವೆ. ಅವುಗಳನ್ನು ಜೋಡಿಸುತ್ತೇವೆ ಎಂದು ಭ್ರಮೆ ಹುಟ್ಟಿಸಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net