

ಚಿಕ್ಕಬಳ್ಳಾಪುರ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ವಿದೇಶದಲ್ಲಿ ಪೆನ್ ಡ್ರೆವ್ ಸಿಕ್ಕಿರಬಹುದು. ಅವರು ಹಿಟ್ ಅಂಡ್ ರನ್ ಇಲ್ಲವೇ ರನ್ ಅಂಡ್ ಹಿಟ್ ಧೋರಣೆ ಪ್ರದರ್ಶಿಸುತ್ತಾರೋ ಎಂಬುದು ಗೊತ್ತಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ ಎಂ.ಸಿ.ಸುಧಾಕರ್ ವ್ಯಂಗ್ಯವಾಡಿದರು.
ಚಿಂತಾಮಣಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಆಡಳಿತ ನಡೆಸಿದ್ದಾರೆ. ಇದರಿಂದ ಅವರು ಸಾರ್ವಜನಿಕವಾಗಿ ಜವಾಬ್ದಾರಿಯಿಂದ ಮಾತನಾಡಬೇಕಾಗಿದೆ ಎಂದು ಸಚಿವರು ಸಲಹೆ ನೀಡಿದರು.
* ಮಾಜಿ ಸಚಿವರು ಬೇನಾಮಿ ಘೋಷಿಸಲಿ
ಹಿಂದೆ ಅಧಿಕಾರದ ಅವಧಿಯಲ್ಲಿ ಕೇವಲ ಗಾಳಿಯಲ್ಲಿಯೇ ಓಡಾಡುವಂತೆ ವರ್ತಿಸುತ್ತಿದ್ದ ಮಾಜಿ ಸಚಿವ ಡಾ ಕೆ.ಸುಧಾಕರ್, 2013 ರಿಂದ ಇಲ್ಲಿಯವರೆಗಿನ ಆರ್ಥಿಕ ಸ್ಥಿತಿ ಅಭಿವೃದ್ಧಿ, ಬೇನಾಮಿಗಳ ಬಗ್ಗೆ ಹೇಳಲಿ, ಕೇಂದ್ರ ಸರ್ಕಾರದ ಮೂಲಕ ಸ್ವಯಂ ತನಿಖೆಗೆ ಒಳಪಡಲಿ ಎಂದು ಸಚಿವರು ಸವಾಲೆಸೆದರು.
ಜಿಲ್ಲೆಯಲ್ಲಿನ ಸರ್ಕಾರಿ ಮೆಡಿಕಲ್ ಕಾಲೇಜ್ ನಿರ್ಮಾಣದ ಕಾಮಗಾರಿಯ ವೆಚ್ಚವು 425 ರಿಂದ 815 ಕೋಟಿ ರೂಗಳಿಗೆ ಹೇಗೆ ಏರಿಕೆಯಾಯಿತು?, ಇದನ್ನು ಸರಿಯಾದ ರೀತಿಯಲ್ಲಿ ಬಳಸಿದ್ದಲ್ಲಿ ಹಿಂದಿನ ಸರ್ಕಾರದ ಆಡಳಿತದಲ್ಲಿ ಅನುದಾನ ಖರ್ಚಿಗೆ ಸಂಬಂಸಿದಂತೆ ಏಕೆ ಅನುಮೋದನೆ ಪಡೆಯಲಿಲ್ಲ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಇವರ ಅನುಮತಿ ಇಲ್ಲದೇ ಹೊರಗೆ ಬರುತ್ತಿರಲಿಲ್ಲ ಎನ್ನಲಾಗುತ್ತಿದೆ. ಆದರೂ ನಿರ್ವಹಣೆ ವೆಚ್ಚಕ್ಕೆ ಒಪ್ಪಿಗೆ ಸಿಕ್ಕಿಲ್ಲ. ಅನುದಾನ ಪ್ರಮಾಣ ಹೆಚ್ಚಳಕ್ಕೆ ಅನುಮತಿ ಕೊಟ್ಟವರು ಯಾರು? ಅನುಮೋದನೆ ನೀಡುವವರು ಯಾರು?. ಈಗ ಅಡಿಟ್ ಸಮಸ್ಯೆ ಉದ್ಭವವಾಗಿದ್ದು ಹೊಸ ಸರ್ಕಾರ ತೊಂದರೆ ಅನುಭವಿಸುವಂತಾಗಿದೆ. ವೈದ್ಯಕೀಯ ಶಿಕ್ಷಣ ಸಚಿವರು ಜಿಲ್ಲೆಗೆ ಭೇಟಿ ನೀಡಲಿದ್ದು ಇಲ್ಲಿನ ವಿಚಾರಗಳ ಬಗ್ಗೆ ಚರ್ಚಿಸಲಾಗುವುದು ಎಂದರು.
* ಉಪವಾಸ ಹೋರಾಟಕ್ಕೆ ಖುಷಿ ಮಾಜಿ ಸಚಿವ ಡಾ ಕೆ.ಸುಧಾಕರ್ ಉಪವಾಸ ಸತ್ಯಾಗ್ರಹ ಹೋರಾಟವನ್ನು ನಡೆಸುವುದಾಗಿ ಘೋಷಿಸಿರುವುದು ಖುಷಿಯ ವಿಚಾರ. ವೈದ್ಯಕೀಯ ಮತ್ತು ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲೂ ಜಿಲ್ಲೆಯಲ್ಲಿ ಎಂಆರ್‌ಐ ಸ್ಕ್ಯಾನ್ ಕೇಂದ್ರವನ್ನು ಸ್ಥಾಪಿಸಲು ಆಗಲಿಲ್ಲ. ಇದಕ್ಕೆ ಈ ಭಾಗದ ಜನರು ಕೋಲಾರ ಇಲ್ಲವೇ ಬೆಂಗಳೂರಿಗೆ ತೆರಳಬೇಕು. ಇಲ್ಲಿನ ವೈದ್ಯಕೀಯ ಆಸ್ಪತ್ರೆಗೆ ಔಷಧಕ್ಕಾಗಿ 4 ಕೋಟಿ ರೂ ಅಗತ್ಯವಿದೆ ಎಂಬುದಾಗಿ ಅರಿವಿದ್ದರೂ ಏಕೆ ಅನುದಾನ ಕೊಡಿಸಿಲ್ಲ? ಎಂದು ಸಚಿವರು ಪ್ರಶ್ನಿಸಿದರು.
ಡಾ ಎಂ.ಸಿ.ಸುಧಾಕರ್, ಉನ್ನತ ಶಿಕ್ಷಣ ಸಚಿವ, ಚಿಕ್ಕಬಳ್ಳಾಪುರ