

ತುಮಕೂರು : ರಾಮನಗರದಲ್ಲಿ ಸಿಎಂ ಬಸವರಾಜಬೊಮ್ಮಾಯಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್, ಎಂಎಲ್ಸಿ ರವಿ ಗೂಂಡಾಗಿರಿ ಸಂಸ್ಕೃತಿ ಪ್ರದರ್ಶಿಸುವ ಮೂಲಕ ರೌಡಿ ವರ್ತನೆ ತೋರಿದ್ದಾರೆಂದು ಆರೋಪಿಸಿ ನಗರದ ಟೌನ್ ಹಾಲ್ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ ಕಾರ್ಯಕರ್ತರು ಡಿ.ಕೆ.ಸುರೇಶ್, ರವಿ ವಿರುದ್ಧ ಘೋಷಣೆಗಳನ್ನು ಕೂಗಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್ ಮಾತನಾಡಿ, ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಸಿಎಂ ಸಭೆಯಲ್ಲಿ ಈ ರೀತಿ ಗೂಂಡಾವರ್ತನೆ ನಡೆದಿಲ್ಲ, ಕಾಂಗ್ರೆಸ್ಸಿಗರ ರಕ್ತದಲ್ಲಿ ಇಂತಹ ಸಂಸ್ಕೃತಿ ಇದೆ, ಕಾಂಗ್ರೆಸ್ ತಾಲಿಬಾನಿ ಸಂಸ್ಕೃತಿಯನ್ನು ಹೊಂದಿರುವುದಕ್ಕೆ ಕಲ್ಲು ತಿಂದು ಜೀರ್ಣಿಸಿಕೊಂಡಿದ್ದಾರೆ. ದೇಶವನ್ನೇ ನುಂಗಲು ಹೊರಟಿದ್ದಾರೆ ಎಂದು ಗುಡುಗಿದರು.
ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಆಡಳಿತ ಮಾಡುವ ಕನಸು ಕಾಣುತ್ತಿದೆ. ಇಂತಹ ರಾಜಕೀಯ ಮನೋಭಾವಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಮುಖ್ಯಮಂತ್ರಿ ಆಗಲು ಬಯಸುತ್ತಿರುವ ಡಿಕೆಶಿ ಒಳ್ಳೆಯ ವರ್ತನೆ ತೋರದಿದ್ದರೆ, ಜನರೇ ಬುದ್ಧಿ ಕಲಿಸಲಿದ್ದಾರೆ. ಇಂತಹ ನಡವಳಿಕೆಯಿಂದ ಅಧಿಕಾರಕ್ಕೆ ಬರುತ್ತೇವೆ ಎನ್ನುವ ಕನಸು ಕಾಣಬೇಡಿ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ವಿಭಾಗೀಯ ಪ್ರಭಾರಿ ಉಸ್ತುವಾರಿ ಲಕ್ಷ್ಮೀಶ್, ನಗರಾಧ್ಯಕ್ಷ ಟಿ.ಎಚ್. ಹನುಮಂತರಾಜು, ಎಸ್.ಡಿ.ದಿಲೀಪ್ ಕುಮಾರ್, ಚಂದ್ರಶೇಖರ್, ಟಿ.ವೈ.ಯಶಸ್, ಗಣೇಶ್, ಸಿದ್ದೇಶ್ ಪ್ರಸಾದ್, ಪಾಲಿಕೆ ಸದಸ್ಯರಾದ ರಮೇಶ್, ದೀಪಾ, ಅರುಣಾ, ಮಂಜುಳಾ, ಬನಶಂಕರಿ ಬಾಬು, ಚಂದನ್, ವಿರೂಪಾಕ್ಷಪ್ಪ ಪಾಲ್ಗೊಂಡಿದ್ದರು.
ಗೂಂಡಾಗಿರಿ ಸಂಸ್ಕೃತಿ : ರಾಮನಗರದಲ್ಲಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಡಿ.ಕೆ.ಸುರೇಶ್, ರವಿ ಅವರ ವರ್ತನೆ ಖಂಡನೀಯ, ಸಾರ್ವಜನಿಕ ಕಾರ್ಯಕ್ರಮದಲ್ಲಿ ಎಲ್ಲೆ ಮೀರಿ ವರ್ತಿಸುವ ಮೂಲಕ ಸಂಸದರು ಗೂಂಡಾ ಸಂಸ್ಕೃತಿ ಪ್ರದರ್ಶಿಸಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ರವಿಶಂಕರ್ (ಹೆಬ್ಬಾಕರವಿ) ದೂರಿದರು.
ಸಿಎಂಗೆ ಧಿಕ್ಕಾರ ಕೂಗಿಸುವ ಅಸಂಸ್ಕೃತಿ ತೋರಿದ್ದಲ್ಲದೇ, ಸಚಿವರ ಮೈ ಮೇಲೆ ಬೀಳುವಂತೆ ನಡೆದುಕೊಳ್ಳುವ ಗೂಂಡಾ ಸಂಸದ ಶುದ್ಧ ಅವಿವೇಕಿ. ಬಿಜೆಪಿ ಕಾರ್ಯಕರ್ತರು ಕೈಗೆ ಬಳೆ ತೊಟ್ಟಿಕೊಂಡಿಲ್ಲ, ಕಾಂಗ್ರೆಸ್ ಗೂಂಡಾಗಿರಿ ಸಂಸ್ಕೃತಿಗೆ ತಲೆ ಬಾಗದೇ ಹೋರಾಡುವ ಶಕ್ತಿ ನಮಗಿದೆ ಎಂದು ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ವೈ.ಎಚ್.ಹುಚ್ಚಯ್ಯ ಎಚ್ಚರಿಸಿದರು.