

ವಿಜಯವಾಣಿ ಸುದ್ದಿಜಾಲ ಧಾರವಾಡ
ಬೆಳಗಾವಿಯ ಅನಗೋಳ ವೃತ್ತದಲ್ಲಿ ಸ್ಥಾಪಿಸಿರುವ ಛತ್ರಪತಿ ಸಂಭಾಜಿ ಪ್ರತಿಮೆ ಅನಾವರಣಕ್ಕೆ ಎಲ್ಲ ಸಿದ್ಧತೆ ನಡೆದಿರುವಾಗಲೇ ರಾಜ್ಯ ಸರ್ಕಾರ ಅಡ್ಡಗಾಲು ಹಾಕಿರುವುದು ಖಂಡನೀಯ. ಈವರೆಗೂ ಯಾವುದೇ ಮೂರ್ತಿ ನಿರ್ಮಾಣ, ಅನಾವರಣಕ್ಕೆ ಸ್ಥಳಿಯ ಸಂಸ್ಥೆ ಅನುಮತಿಯಷ್ಟೇ ಸಾಕಾಗಿತ್ತು. ಆದರೆ, ಛತ್ರಪತಿ ಸಂಭಾಜಿ ಪ್ರತಿಮೆ ವಿಚಾರದಲ್ಲಿ ರಾಜ್ಯ ಸರ್ಕಾರ ಅನಗತ್ಯವಾಗಿ ಮೂಗು ತೂರಿಸುವ ಮೂಲಕ ತಮ್ಮದು ಹಿಂದೂ ವಿರೋಧಿ ಸರ್ಕಾರ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಟೀಕಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಪ್ರತಿಮೆ ಅನಾವರಣಕ್ಕೆ ಕೆಲವರು ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ ಎಂದು ಪಾಲಿಕೆ ಆಯುಕ್ತರ ಮೂಲಕ ಮೇಯರ್ಗೆ ಪತ್ರ ಬರೆಯಿಸಿರುವ ಸರ್ಕಾರ, ಆಕ್ಷೇಪಣೆ ವ್ಯಕ್ತಪಡಿಸಿದವರ ಹೆಸರು ಬಹಿರಂಗಗೊಳಿಸಲು ಹಿಂದೇಟು ಹಾಕುತ್ತಿರುವುದು ಏಕೆ? ಯಾರನ್ನು ಮೆಚ್ಚಿಸಲು ಬಹುಸಂಖ್ಯಾತ ಹಿಂದುಗಳ ಭಾವನೆಗೆ ಘಾಸಿಗೊಳಿಸಲು ಹೊರಟಿದೆ? ಎಂದು ಪ್ರಶ್ನಿಸಿರುವ ಬೆಲ್ಲದ, ನಿಗದಿಂತ ದಿನದಂದೇ ಸಂಭಾಜಿ ಪ್ರತಿಮೆ ಅನಾವರಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.