

ಹುಣಸೂರು: ದೇಶಕ್ಕೆ ತುರ್ತು ಪರಿಸ್ಥಿತಿಯ ಕರಾಳ ದಿನಗಳು ಕಳೆದು 50 ವರ್ಷಗಳೇ ಸಂದರೂ ಆಪತ್‌ಕಾಲದ ಸ್ಥಿತಿಯನ್ನು ಜನರ ಮೇಲೆ ಹೇರಿದ ಕಾಂಗ್ರೆಸ್ ಪಕ್ಷದ ಮನಸ್ಥಿತಿ ಇಂದಿಗೂ ಸಂವಿಧಾನ ವಿರೋಧಿಯಾಗಿಯೇ ಮುಂದುವರಿದಿದೆ ಎಂದು ಬಿಜೆಪಿ ಹಿರಿಯ ನಾಯಕ ಸಿ.ಟಿ.ರವಿ ಟೀಕಿಸಿದರು.
ನಗರದ ಆರ್ಯವೈಶ್ಯ ಕಲ್ಯಾಣ ಮಂಟಪದಲ್ಲಿ ಶನಿವಾರ ಬಿಜೆಪಿ ಪಕ್ಷದ ವತಿಯಿಂದ ಆಯೋಜಿಸಿದ್ದ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಕರಾಳ ಇತಿಹಾಸಕ್ಕೆ 50 ವರ್ಷಗಳು ಕಾರ್ಯಕ್ರಮದಲ್ಲಿ ಮಾತನಾಡಿದರು. ಜಾತ್ಯತೀತ ಎನ್ನುವುದು ಈ ನೆಲದ ಕಣಕಣದಲ್ಲಿ ಇದೆ. ಸರ್ವಧರ್ಮ ಸಮನ್ವಯದ ದೇಶ ಇದಾಗಿದೆ. ಆದರೆ ಸೋ ಕಾಲ್ಡ್ ಜಾತ್ಯತೀತರು ಎಂದು ತಾನೇ ಹಣೆಪಟ್ಟಿ ಹಚ್ಚಿಕೊಂಡಿರುವ ಕಾಂಗ್ರೆಸ್‌ಗೆ ಇದು ಓಲೈಕೆ ರಾಜಕಾರಣದ ಮೊದಲ ಮೆಟ್ಟಿಲು ಎಂದು ಟೀಕಿಸಿದರು.
ಒಂದು ಸಮುದಾಯದ ಓಲೈಕೆಗೆ ದುರ್ಬಳಕೆ ಮಾಡಿಕೊಂಡ ಪಕ್ಷ ಕಾಂಗ್ರೆಸ್. ಕಾಂಗ್ರೆಸ್ ಎಂದರೆ ಪ್ರಜಾತಂತ್ರ ವಿರೋಧಿ. ಮೀಸಲಾತಿ ವಿರೋಧಿ, ಪತ್ರಿಕಾ ಸ್ವಾತಂತ್ರ್ಯದ ವಿರೋಧಿ, ನ್ಯಾಯಾಂಗದ ವಿರೋಧಿ ಪಕ್ಷವಾಗಿದೆ. ಇದೀಗ ದೇಶದಲ್ಲಿ ಕಾಂಗ್ರೆಸ್ ಸಂವಿಧಾನಕ್ಕೆ, ದೇಶದ ಸಾಮಾಜಿಕ ವ್ಯವಸ್ಥೆಗೆ ಮಾಡಿದ ಅನಾಚಾರಗಳನ್ನು ದೇಶ ಕಾಯುವ ನಾಯಕ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರಿಪಡಿಸಲಾಗಿದೆ. ತುರ್ತು ಪರಿಸ್ಥಿತಿಯ ಕರಾಳ ಮುಖಗಳನ್ನು ನೆನಪಿಸುತ್ತಲೇ ಅವುಗಳ ವಿರುದ್ಧ ನಿರಂತರ ಜಾಗರೂಕರಾಗಿರಬೇಕೆಂಬ ಸದುದ್ದೇಶದಿಂದ ಬಿಜೆಪಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ತಿಳಿಸುತ್ತಿದೆ ಎಂದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಸಂವಿಧಾನದ ಪೀಠಿಕೆಯನ್ನೇ ಬದಲಿಸಿದ್ದ ಕಾಂಗ್ರೆಸ್ ತಾನು ಸಂವಿಧಾನದ ರಕ್ಷಕ ಎನ್ನುತ್ತಿರುವುದು ಹಾಸ್ಯಾಸ್ಪದ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಹಕ್ಕನ್ನು ಮೊಟಕುಗೊಳಿಸುವುದೇ ಕಾಂಗ್ರೆಸ್ ಕೆಲಸ. ಇದೀಗ ಮೈಸೂರಿನಲ್ಲಿ ಸಾಧನ ಸಮಾವೇಶ ಆಯೋಜನೆ ಯಾವ ಸಾಧನೆಗಾಗಿ? ಕೆಎಸ್‌ಆರ್‌ಟಿಸಿ ನೌಕರರು ಪ್ರತಿಭಟನೆ ಮಾಡದಂತೆ ಎಸ್ಮಾ ಜಾರಿಗೊಳಿಸಿರುವುದು ಪ್ರಜಾಪ್ರಭುತ್ವದ ನೀತಿಯೇ? ದೇಶದ ಆರ್ಥಿಕತೆ ಸಮಾಜವಾದ, ಜಾತ್ಯತೀತ ಮನೋಭಾವದೊಂದಿಗೆ ಮುಂದುವರಿಯಬೇಕೆಂದು ಅಂಬೇಡ್ಕರ್ ನಿರ್ಣಯಿಸಿದ್ದರು. ಆದರೆ ಕಾಂಗ್ರೆಸ್ ತನ್ನ ಅಧಿಕಾರ ಲಾಲಸೆಗಾಗಿ ಅದನ್ನು ಬಳಸಿಕೊಂಡಿದೆ. ಇಂದಿಗೂ ಕಾಂಗ್ರೆಸ್ ಅದೇ ರೀತಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ದುರಂತ ಎಂದು ಹೇಳಿದರು.
ಕಾರ್ಯಕ್ರಮದ ರಾಜ್ಯ ಸಂಚಾಲಕ ಮಾಜಿ ಶಾಸಕ ಎನ್.ಮಹೇಶ್ ಮಾತನಾಡಿ, ಸಂವಿಧಾನದ 42ನೇ ತಿದ್ದುಪಡಿ ಇಂದಿರಾಗಾಂಧಿ ಮಾಡಿದರು. ಈ ತಿದ್ದುಪಡಿಯಲ್ಲಿ ಸಂವಿಧಾನಕ್ಕೆ ಈಗಾಗಲೇ ಮಾಡಿರುವ ಯಾವುದೇ ತಿದ್ದುಪಡಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲವೆಂದು ತಮ್ಮ ಅಧಿಕಾರವನ್ನು ಭದ್ರಪಡಿಸಿಕೊಳ್ಳಲು ಸಾಧನವನ್ನಾಗಿಸಿದರು. ಪ್ರಜಾಪ್ರಭುತ್ವ ವಿರೋಧಿ ನೀತಿ ಕಾಂಗ್ರೆಸ್ ಡಿಎನ್‌ಎ ಯಲ್ಲೇ ಇದೆ. ಸಾಧನಾ ಸಮಾವೇಶಕ್ಕೆ ಮುನ್ನದಿನ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‌ಪಕ್ಷದ ಶಾಸಕರಿಗೆ 50 ಕೋಟಿ ರೂ.ವಿಶೇಷ ಅನುದಾನ ನೀಡಿ ಪ್ರತಿಪಕ್ಷದ ಶಾಸಕರಿಗೆ ಶೂನ್ಯ ಅನುದಾನ ನೀಡಿರುವುದು ಪ್ರಜಾಪ್ರಭುತ್ವದ ನೀತಿಯೇ? ಎಲ್ಲೆಡೆ ಸಂವಿಧಾನದ ಪುಸ್ತಕವನ್ನು ಹಿಡಿದು ಹೋಗುವ ಕಾಂಗ್ರೆಸ್ಸಿಗರಿಗೆ ನಾಚಿಕೆಯಾಗಬೇಕು ಎಂದು ಛೇಡಿಸಿದರು.
ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಕುಂಬ್ರಹಳ್ಳಿ ಸುಬ್ಬಣ್ಣ ಮಾತನಾಡಿದರು. ಮಾಜಿ ಶಾಸಕ ಬಸವರಾಜು, ಹರ್ಷವರ್ಧನ, ನಾಗೇಂದ್ರ, ಮಾಜಿ ಜಿಲ್ಲಾಧ್ಯಕ್ಷ ಮಂಗಳಾ ಸೋಮಶೇಖರ್, ತಾಲೂಕು ಅಧ್ಯಕ್ಷ ಕಾಂತರಾಜು, ಪ್ರಧಾನ ಕಾರ್ಯದರ್ಶಿ ರಾಮಚಂದ್ರ, ನಗರಾಧ್ಯಕ್ಷ ಟಿ.ನಾರಾಯಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ್ ಕುಮಾರಸ್ವಾಮಿ, ಬಿ.ಎಸ್.ಯೋಗಾನಂದಕುಮಾರ್ ಇತರರು ಇದ್ದರು.