

ಶಿವಮೊಗ್ಗ: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದನಾ ಕೃತ್ಯವನ್ನು ಇಡೀ ದೇಶವೇ ಖಂಡಿಸುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಕೇಂದ್ರ ಸರ್ಕಾರದ ಜತೆ ನಾವಿದ್ದೇವೆ ಎಂದಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಮಾತ್ರ ಮುಸಲ್ಮಾನರ ಚೇಲಾನಂತೆ ವರ್ತಿಸುತ್ತಿರುವುದನ್ನು ಕಂಡರೆ ಬೇಸರವಾಗುತ್ತದೆ. ರಾಷ್ಟ್ರದ್ರೋಹಿಗಳ ಪಟ್ಟಿಗೆ ಅವರೂ ಸೇರ್ಪಡೆಯಾಗಬೇಕಾಗುತ್ತದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ಕೂಡ ಕೇಂದ್ರದ ತೀರ್ಮಾನಕ್ಕೆ ಸ್ಪಂದಿಸುತ್ತಿದೆ. ನಾವೆಲ್ಲರೂ ಒಗ್ಗಟ್ಟಾಗಿ ಇದನ್ನು ಎದುರಿಸಬೇಕೆಂದು ಖರ್ಗೆ ಹೇಳಿದ್ದಾರೆ. ಕಾಶ್ಮೀರದ ಸಿಎಂ ಓಮರ್ ಅಬ್ದುಲ್ಲಾ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ಸಿಗರ ಮನಸ್ಥಿತಿ ಭಿನ್ನವಾಗಿದೆ ಎಂದರು.
ಸಿದ್ಧರಾಮಯ್ಯ, ಸಚಿವ ಸಂತೋಷ್ ಲಾಡ್ ಮತ್ತಿತರ ಕಾಂಗ್ರೆಸ್ ನಾಯಕರ ಹೇಳಿಕೆಗೆ ಸಂಬಂಧಿಸಿದಂತೆ ಇದು ಪಕ್ಷದ ಅಭಿಪ್ರಾಯ ಅಲ್ಲ. ವ್ಯಕ್ತಿಗತ ಅಭಿಪ್ರಾಯ ಎಂದು ಕಾಂಗ್ರೆಸ್ ಹೇಳುತ್ತಿದೆ. ಹೀಗಿದ್ದ ಮೇಲೆ ಇಂತಹ ಹೇಳಿಕೆ ಕೊಟ್ಟವರನ್ನು ಪಕ್ಷದಲ್ಲಿ ಇಟ್ಟುಕೊಂಡಿರುವುದೇಕೆ? ಕೂಡಲೇ ಇವರ ಮೇಲೆ ಕ್ರಮ ಕೈಗೊಳ್ಳಬೇಕು. ಸಿಎಂ ಹಾಗೂ ವ್ಯತಿರಿಕ್ತ ಹೇಳಿಕೆ ನೀಡಿದ ಸಚಿವರು ದೇಶದ ಕ್ಷಮೆ ಕೋರಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್ ಹೈಕಮಾಂಡ್ ಸೂಚನೆಯನ್ನು ಮೀರಿ ಮಾತನಾಡುತ್ತಿರುವ ಆ ಪಕ್ಷದ ನಾಯಕರಿಗೆ ಅಭ್ಯಾಸವರ್ಗ ನಡೆಸಿ ಬುದ್ಧಿ ಹೇಳಬೇಕು. ಇದು ದೇಶ ಒಂದಾಗುವ ಹೊತ್ತು. ಸಿಎಂ ಸಿದ್ದರಾಮಯ್ಯನವರ ವರ್ತನೆಯೇ ಬದಲಾಗುತ್ತಿದೆ. ನಿನ್ನೆ ಕಾರ್ಯಕ್ರಮವೊಂದರಲ್ಲಿ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ಮಾಡಲು ಹೋಗಿದ್ದಾರೆ. ಕಪ್ಪು ಬಾವುಟ ಪ್ರದರ್ಶನ ಸಹಜ. ಇದರ ಮಾಹಿತಿ ಸರ್ಕಾರಕ್ಕೆ ಇರಲಿಲ್ಲವೆ? ಇಷ್ಟು ಸಣ್ಣ ವಿಷಯವನ್ನು ತಿಳಿದುಕೊಳ್ಳದ ಇವರು ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯದ ಬಗ್ಗೆ ಮಾತನಾಡುತ್ತಾರೆ. ಇನ್ನಾದರೂ ಅವರು ತಮ್ಮ ತಪ್ಪು ತಿದ್ದಿಕೊಳ್ಳಲಿ ಎಂದರು.
ಜಿಪಂ ಮಾಜಿ ಸದಸ್ಯ ಕೆ.ಇ. ಕಾಂತೇಶ್, ನಗರ ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್, ಜಾಧವ್, ಬಾಲು, ಶಿವಾಜಿ ಮುಂತಾದವರಿದ್ದರು.