ರಸ್ತೆಯ ಗುಂಡಿಗಳಲ್ಲಿ ದೋಣಿ ಹರಿಬಿಟ್ಟ ಕಾಂಗ್ರೆಸ್ ಕಾರ್ಯಕರ್ತೆಯರು

ಚೊನಗರೆಸಸ
Published on

ವಿಜಯಪುರ: ವಿಜಯಪುರದ ರಸ್ತೆಗಳಲ್ಲಿ ಇರುವ ತಗ್ಗು-ಗುಂಡಿಗಳಲ್ಲಿ ಶೇಖರಣೆಯಾಗಿರುವ ಮಳೆ ನೀರಿನಲ್ಲಿ ಕಾಗದದ ದೋಣಿಗಳನ್ನು ಹರಿಬಿಡುವ ಮೂಲಕ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು ಮೀನಾಕ್ಷಿ ವೃತ್ತದ ಬಳಿ ಭಾನುವಾರ ವಿನೂತನವಾಗಿ ಪ್ರತಿಭಟನೆ ನಡೆಸಿ ರಸ್ತೆ ಅವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರಹಾಕಿದರು.


ಬಸ್‌ನಿಲ್ದಾಣದಿಂದ ಜೋಡಗುಮ್ಮಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಜಮಾಯಿಸಿದ ಮಹಿಳಾ ಕಾರ್ಯಕರ್ತೆಯರು ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ ನೇತೃತ್ವದಲ್ಲಿ ಕಾಗದದ ದೋಣಿಗಳನ್ನು ಹರಿಬಿಟ್ಟು, ರಸ್ತೆ ಅವ್ಯವಸ್ಥೆಗೆ ಕಾರಣವಾಗಿರುವ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.


ನೇತೃತ್ವ ವಹಿಸಿದ್ದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ ಮಾತನಾಡಿ, ವಿಜಯಪುರ ನಗರದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಇಲ್ಲಿನ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ದೋಣಿಗಳು ಓಡಾಡಲು ಸಾಧ್ಯವೇ ಹೊರತು ವಾಹನಗಳಲ್ಲ. ಈ ರೀತಿಯಾದ ಅವ್ಯವಸ್ಥೆಯಿಂದ ವಾಹನ ಸವಾರರು ನಿತ್ಯ ನರಳುವಂತಾಗಿದೆ. ರಸ್ತೆಗಳಲ್ಲಿ ತಗ್ಗುಗಳಿವೆಯೋ ಅಥವಾ ತಗ್ಗುಗಳಲ್ಲಿಯೇ ರಸ್ತೆಗಳನ್ನು ನಿರ್ಮಿಸಲಾಗಿದೆಯೋ ಎಂಬುದು ಗೊತ್ತಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ನಗರದ ಅಭಿವೃದ್ಧಿಗೆ ಅನುದಾನ ನೀಡಬೇಕಾದ ಸರ್ಕಾರಗಳು ತಮ್ಮ ಜವಾಬ್ದಾರಿ ಮರೆತಿವೆ. ಕನಿಷ್ಠ ಮೂಲ ಸೌಕರ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರ ಅಸಮರ್ಥವಾಗಿರುವುದು ನೋವಿನ ಸಂಗತಿ ಎಂದರು.


ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ವಿದ್ಯಾರಾಣಿ ತುಂಗಳ ಮಾತನಾಡಿ, ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಯಲ್ಲಿ ಅನೇಕ ರೀತಿಯ ಅಭಿವೃದ್ಧಿ ಕಾರ್ಯಗಳು ನೆರವೇರಿದ್ದವು. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ, ಅಭಿವೃದ್ಧಿ ಎನ್ನುವುದು ಕಣ್ಮರೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಕೆಪಿಸಿಸಿ ಕಾರ್ಯದರ್ಶಿ ಕಾಂತಾ ನಾಯಕ ಮಾತನಾಡಿದರು. ಭಾರತಿ ನಾವಿ, ಆರತಿ ಶಹಾಪುರ, ಮಂಜುಳಾ ಗಾಯಕವಾಡ ಮೊದಲಾದವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net