ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ: ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

Congress workers protest Mandya
Published on

ಮಂಡ್ಯ: ಭಾರತೀಯ ಪ್ರಜೆಗಳನ್ನು ಅಕ್ರಮ ನಿರಾಶ್ರಿತರೆಂದು ಹೇಳಿ ಅವರ ಕೈಗಳಿಗೆ ಅಮೆರಿಕಾ ಕೋಳ ಹಾಕಿ ಕಳುಹಿಸುತ್ತಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಸರ್‌ಎಂ.ವಿ.ಪ್ರತಿಮೆ ಎದುರು ಜಮಾವಣೆಗೊಂಡ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಮೆರಿಕಾದಲ್ಲಿರುವ ಭಾರತೀಯರನ್ನು ಅಕ್ರಮ ವಲಸಿಗರೆಂದು ಬಿಂಬಿಸಿ ಅವರಿಗೆ ಕೈಕೊಳ ಹಾಕಿ ಕರೆತರಲಾಗಿದೆ. ಗೌರವಯುತವಾಗಿ ಭಾರತಕ್ಕೆ ನಮ್ಮ ಸ್ವದೇಶಿ ವಿಮಾನದಲ್ಲಿಯೇ ಕರೆ ತರಬೇಕಿತ್ತು. ಇದನ್ನು ಕೇಂದ್ರ ಸರ್ಕಾರ ಮಾಡಲಿಲ್ಲ ಎಂದು ಕಿಡಿಕಾರಿದರು.

ನಮ್ಮ ರಾಷ್ಟ್ರದ ಪ್ರಜೆಗಳು ಅಮೆರಿಕಾದಲ್ಲಿ ವಾಸ ಮಾಡುತ್ತಿರುವವರಿಗೆ ಕೋಳ ಹಾಕಿ ಕರೆತರುವ ಪ್ರಮೇಯವೇನಿದೆ. ಅಂತೆಯೇ ನಮ್ಮ ದೇಶದ ಪ್ರಜೆಗಳನ್ನು ಗೌರವಯುತವಾಗಿ ನಡೆಸಿಕೊಳ್ಳುವುದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮರೆತಿದ್ದಾರೆ. ಎನ್‌ಡಿಎ ಸರ್ಕಾರ ಅಧಿಕಾರದಲ್ಲಿ ಮುಂದವರಿಯುವುದನ್ನು ನೈತಿಕತೆ ಇಲ್ಲ. ಅಮೆರಿಕಾದಲ್ಲಿ ಭಾರತೀಯರನ್ನು ಅಕ್ರಮ ನಿರಾಶ್ರಿತರ ಹೆಸರಿನಲ್ಲಿ ಅಮಾನವೀಯವಾಗಿ ನಡೆಸಿಕೊಳ್ಳುವುದು ತರವಲ್ಲ. ಅವರು ಮನುಷ್ಯರು ಎಂಬ ಭಾವನೆ ಏಕೆ ಬರಲಿಲ್ಲ. ಬಿಜೆಪಿ ಸರ್ಕಾರವು ಕಣ್ಣಿಲ್ಲದಂತೆ ವರ್ತಿಸುವುದನ್ನು ನಿಲ್ಲಿಸಲಿ. ಅದೇ ರೀತಿ ವಿದೇಶಿಗರ ಮೇಲೆ ದಬ್ಬಾಳಿಕೆ ನಡೆಸುವುದನ್ನು ಅಮೆರಿಕಾ ಮಾಡದಿರಲಿ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ, ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಶೈಲೇಂದ್ರ, ಸಿ.ಎಂ.ದ್ಯಾವಪ್ಪ, ಶ್ರೀಧರ್, ಸಾತನೂರು ಕೃಷ್ಣ, ರಮೇಶ್, ರಾಮಕೃಷ್ಣ, ಅಂಜನಾ ಶ್ರೀಕಾಂತ್, ವೀಣಾ, ಶಕುಂತಲಾ, ಗುರುರಾಜ್, ಜಯರಾಂ, ಕೊಮ್ಮೇರಹಳ್ಳಿ ಕೃಷ್ಣ, ನಾಗೇಶ್, ವಿಜಯ್‌ಕುಮಾರ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net