

ಶಿಕಾರಿಪುರ: ತಾಲೂಕು ಕಾಂಗ್ರೆಸ್‌ನಿಂದ ಸೆ.13ರಂದು ಮಧ್ಯಾಹ್ನ 3 ಗಂಟೆಗೆ ಪಟ್ಟಣದ ನರಸಪ್ಪ ಸ್ಮಾರಕ ಬಯಲು ರಂಗಮಂದಿರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡ ರಾಘವೇಂದ್ರ ನಾಯ್ಕ ತಿಳಿಸಿದರು.
ಸಮಾವೇಶವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಲಿದ್ದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಎಂ.ಚಂದ್ರಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮುಖಂಡರಾದ ಆರ್.ಪ್ರಸನ್ನಕುಮಾರ್, ಆರ್.ಎಂ.ಮಂಜುನಾಥ ಗೌಡ, ಗೋಣಿ ಮಾಲತೇಶ್, ಎಸ್.ಪಿ ನಾಗರಾಜ ಗೌಡ, ಎಚ್.ಎಸ್.ಶಾಂತವೀರಪ್ಪ ಗೌಡ, ಆಯನೂರು ಮಂಜುನಾಥ್, ಮಾಜಿ ಶಾಸಕ ಬಿ.ಎನ್.ಮಹಾಲಿಂಗಪ್ಪ, ನಗರದ ಮಹದೇವಪ್ಪ, ಆರ್.ಪ್ರಸನ್ನಕುಮಾರ್, ಎನ್.ರಮೇಶ್, ಎಸ್.ಕೆ.ಮರಿಯಪ್ಪ, ಕಲಗೋಡು ರತ್ನಾಕರ್, ಬಲ್ಕಿಷ್ ಬಾನು, ಅನಿತಾಕುಮಾರಿ, ಹುಲ್ಮಾರ್ ಮಹೇಶ್, ಕವಲಿ ಗಂಗಾಧರ್ ಪಾಲ್ಗೊಳ್ಳುವರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಿಕಾರಿಪುರ ತಾಲೂಕು ಕಾಂಗ್ರೆಸ್‌ನಲ್ಲಿ ಕಳೆದ ವಿಧಾನಸಭಾ ಚುನಾವಣೆ ವೇಳೆ ನಡೆದ ಕೆಲವು ಘಟನೆಗಳಿಂದ ಬಿರುಕು ಮೂಡಿರುವುದು ಮತ್ತು ಪರಸ್ಪರರಲ್ಲಿ ಅಂತರ ಜಾಸ್ತಿಯಾಗಿದ್ದು ನಿಜ. ಈಗಾಗಲೇ ಬಂಡಾಯ ಅಭ್ಯರ್ಥಿ ಎಸ್.ಪಿ.ನಾಗರಾಜ ಗೌಡ ಮತ್ತು ಅವರ ಬೆಂಬಲಿಗರನ್ನು ಸಿಎಂ ಸಮ್ಮುಖದಲ್ಲಿ ಪಕ್ಷಕ್ಕೆ ಬರಮಾಡಿಕೊಳ್ಳಲಾಗಿದೆ. ಜತೆಗೆ ಅವರನ್ನು ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳುವ ಮುನ್ನ ತಾಲೂಕಿನ ಕಾರ್ಯಕರ್ತರ ಅಭಿಪ್ರಾಯ ಉಸ್ತುವಾರಿಗಳು ಸಂಗ್ರಹಿಸಿದ್ದಾರೆ. ಈ ಬಗ್ಗೆ ಜಿಲ್ಲಾಮಟ್ಟದಲ್ಲಿ ನಾಲ್ಕು ಜನರ ಸಮಿತಿಯನ್ನೂ ರಚಿಸಲಾಗಿತ್ತು. ಸಣ್ಣಪುಟ್ಟ ಮನಸ್ತಾಪಗಳು ಖಂಡಿತ ಮುಂಬರುವ ದಿನಗಳಲ್ಲಿ ಸರಿಹೋಗುತ್ತವೆ. ಮುಂದಿನ ತಾಪಂ, ಜಿಪಂ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಪಕ್ಷ ಹೆಚ್ಚಿನ ಸ್ಥಾನ ಗಳಿಸಬೇಕು ಎನ್ನುವ ನಿಟ್ಟಿನಲ್ಲಿ ನಾವೆಲ್ಲರೂ ಜತೆಯಾಗಿ ಹೋಗಲಿದ್ದೇವೆ ಎಂದು ಹೇಳಿದರು.
ಪ್ರಮುಖರಾದ ಮಾರವಳ್ಳಿ ಉಮೇಶ್, ಎಚ್.ಎಸ್.ರವೀಂದ್ರ, ಎನ್.ನವಿಲೇಶ್, ಹುಲ್ಮಾರ್ ಶಿವು, ಧಾರವಾಡ ಸುರೇಶ್, ಗೋಪಿಕೃಷ್ಣ ಇತರರಿದ್ದರು.