ಕುಶಾಲನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

Congress workers meeting in Kushalanagar
Published on

ಕುಶಾಲನಗರ

ಕೊಡಗಿನಲ್ಲಿ ಕಾಂಗ್ರೆಸ್ ಪರವಾಗಿರುವ ವಾತಾವರಣ ಮುಂದುವರಿಸಿಕೊಂಡು ಹೋಗುವಲ್ಲಿ ಕಾರ್ಯಕರ್ತರ ಪಾತ್ರ ಪ್ರಮುಖವಾದದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಹೇಳಿದರು. ಕುಶಾಲನಗರ ರೈತ ಸಹಕಾರ ಭವನದಲ್ಲಿ ಬುಧವಾರ ಆಯೋಜಿಸಿದ್ದ ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

ಸರ್ಕಾರ ಬಂದು ೭ ತಿಂಗಳ ಅವಧಿಯಲ್ಲಿ ಉತ್ತಮ ಕೆಲಸ ಮಾಡಲಾಗುತ್ತಿದೆ. ಕೊಡಗಿನಲ್ಲಿ ಇಬ್ಬರು ಯುವ ಶಾಸಕರು ಮುತುವರ್ಜಿ ವಹಿಸಿ ಉತ್ಸಾಹದಿಂದ ಕಾರ್ಯೋನ್ಮುಖರಾಗಿದ್ದಾರೆ. ಸಂಬಂಧಿಸಿದ ಮಂತ್ರಿಗಳ ಜತೆ ಸಂಪರ್ಕ ಬೆಳೆಸಿ ಕೆಲಸ ಮಾಡಿಸುತ್ತಿದ್ದಾರೆ. ಸರ್ಕಾರದ ನಾಲ್ಕು ಗ್ಯಾರಂಟಿಗಳು ಈಗಾಗಲೇ ಯಶಸ್ವಿಯಾಗಿದೆ. ಎಲ್ಲೂ ಲಂಚದ ಹಾವಳಿ ಇಲ್ಲದೆ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿದೆ. ಯುವನಿಧಿ ಕಾರ್ಯಕ್ರಮಕ್ಕೆ ಮುಂದಿನ ತಿಂಗಳು ಶಿವಮೊಗ್ಗದಲ್ಲಿ ಚಾಲನೆ ನೀಡಲಾಗುವುದು. ಬಿಜೆಪಿ ಚುನಾವಣೆ ಪ್ರಚಾರ ಶುರುಮಾಡಿದೆ. ಕಾಂಗ್ರೆಸ್ ಕೂಡ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ನೇತೃತ್ಚದಲ್ಲಿ ಸಜ್ಜಾಗುತ್ತಿದೆ. ಕಾಂಗ್ರೆಸ್ ಸಂವಿಧಾನ ಬದ್ಧವಾಗಿ ಮುಂದುವರಿಯುತ್ತದೆ. ಆದರೆ ಬಿಜೆಪಿ ಧರ್ಮ, ದೇವರು ಎಂದು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಜನರ ಭಾವನೆ ಜತೆ ಚೆಲ್ಲಾಟವಾಡುತ್ತಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಸ್ಥಾನ-ಮಾನ ಕೊಡುವ ಕೆಲಸ ಆಗಬೇಕಿದೆ. ಇನ್ನು ೧೦-೧೫ ದಿನದಲ್ಲಿ ಇದು ನೆರವೇರಲಿದೆ. ಅಧಿಕಾರದಲ್ಲಿ ೨ ವರ್ಷದ ಅವಕಾಶ ಕೊಡಲಾಗುವುದು. ಕೊಡಗಿನ ಅಭಿವೃದ್ಧಿ ದೃಷ್ಟಿಯಿಂದ ೬ ತಿಂಗಳ ಅವಧಿಯಲ್ಲಿ ೨ ಕೆಡಿಪಿ ಸಭೆ ನಡೆಸಲಾಗಿದೆ. ೨ ಜನ ಸಂಪರ್ಕ ಸಭೆ ನಡೆಸಲಾಗಿದೆ ಎಂದರು.

ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದ ಬಗ್ಗೆ ಕಾರ್ಯಕರ್ತರು ಹೆಮ್ಮೆಯಿಂದ ಜನ ಸಾಮಾನ್ಯರ ಬಳಿ ಹೇಳಿಕೊಳ್ಳುವಂತಾಗಬೇಕು. ಕಾರ್ಯಕರ್ತರ ಬದ್ಧತೆ, ಶ್ರಮದಿಂದ ಇಬ್ಬರು ಶಾಸಕರು ಕೊಡಗಿನಲ್ಲಿ ಗೆದ್ದಿದ್ದಾರೆ. ಇದನ್ನು ಮುಂದುವರಿಸಿಕೊಂಡು ಹೋಗಬೇಕು. ಮುಖ್ಯಮಂತ್ರಿ ಸ್ವಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವಂತಾಗಬೇಕು. ಬಿಜೆಪಿ ವಿರೋಧ ಪಕ್ಷಕ್ಕೆ ಹೋದ ಕೂಡಲೇ ಕಾರ್ಯಕರ್ತರ ನೆನಪಾಗಿದೆ. ಹೊಲಸು ರಾಜಕೀಯ ಶುರು ಮಾಡಿದ್ದಾರೆ. ಕಾನೂನು ಪ್ರಕ್ರಿಯೆಯನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದನ್ನು ಕಾಂಗ್ರೆಸ್ ಕಾರ್ಯಕರ್ತರು ಜನರಿಗೆ ತಿಳಿಸಬೇಕು ಎಂದು ಹೇಳಿದರು.

ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಅಭಿವೃದ್ಧಿ ಜತೆಗೆ ಸಾರ್ವಜನಿಕ ಸಂಪರ್ಕವೂ ಮುಖ್ಯ. ಹಿಂದಿನ ಬಿಜೆಪಿ ಅಭ್ಯರ್ಥಿ ಸೋಲಲು ಅವರ ವರ್ತನೆಯೇ ಕಾರಣ. ಹಾಗಾಗಿ ಕಾರ್ಯಕರ್ತರು ಎಚ್ಚರಿಕೆಯಿಂದ ಇರಬೇಕು. ಕುಶಾಲನಗರ ಬಸ್ ಡಿಪೋ, ಇಂದಿರಾ ಕ್ಯಾಂಟೀನ್‌ಗೆ ಸದ್ಯದಲ್ಲೇ ಭೂಮಿ ಪೂಜೆ ನಡೆಸಲಾಗುವುದು. ಹಾರಂಗಿ ನಾಲೆ ಆಧುನೀಕರಣಕ್ಕೂ ಅನುದಾನ ಬಿಡುಗಡೆ ಆಗಿದೆ. ಐಗೂರು ಸೇತುವೆ ಕಾಮಗಾರಿಗೂ ಭೂಮಿಪೂಜೆಗೆ ಸಿದ್ಧತೆ ನಡೆಸಲಾಗಿದೆ. ಅಭಿವೃದ್ಧಿ ಕಾಮಗಾರಿಗಳಲ್ಲಿ ರಾಜಕೀಯ ಮಾಡುವುದಿಲ್ಲ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲರೂ ಸಿದ್ಧತೆ ನಡೆಸಬೇಕಾಗುತ್ತದೆ. ಸ್ಥಳೀಯರಿಗೆ ಸಂಸತ್ ಚುನಾವಣೆಯಲ್ಲಿ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು.

ವಿಧಾನಪರಿಷತ್ ಸದಸ್ಯ ನಾಗರಾಜ್ ಯಾದವ್ ಮಾತನಾಡಿ ಇಬ್ಬರು ಶಾಸಕರನ್ನು ಆರಿಸಿ ಕಳಿಸಿದ ಕೊಡಗಿನ ಜನತೆ ಶ್ರೇಷ್ಠರು.ದೇಶದಲ್ಲಿ ಪ್ರಾಮಾಣಿಕತೆ ಮತ್ತು ಕೊಟ್ಟ ಮಾತು ಉಳಿಸಿಕೊಂಡಿದ್ದು ಕಾಂಗ್ರೆಸ್ ಮಾತ್ರ. ಹಿಂದೂ-ಮುಸ್ಲಿಂ ಎಂದು ಸಮಾಜ ಒಡೆಯುತ್ತಿರುವುದು ಬಿಜೆಪಿ. ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಉತ್ತಮ ಕೆಲಸ ಮಾಡಿದೆ. ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮವನ್ನು ಬಿಜೆಪಿ ಲೇಬಲ್ ಬದಲಿಸಿ ಜಾರಿಗೆ ತಂದಿದೆ. ಸಂಸತ್‌ಗೆ ಪಾಸ್ ಕೊಟ್ಟಿರುವ ಪ್ರತಾಪ್ ಸಿಂಹ ಅವರಿಗೆ ಛೀಮಾರಿ ಹಾಕಲೇಬೇಕು. ಸಂಸತ್ ಮೇಲಿನ ದಾಳಿ ತಡೆಯಲಾಗದವರು ದೇಶದ ರಕ್ಷಣೆ ಹೇಗೆ ಮಾಡುತ್ತಾರೆ ? ದೇಶದ ಆಂತರಿಕ ಭದ್ರತೆ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ. ಈ ನಿಟ್ಟಿನಲ್ಲಿ ಗುಪ್ತಚರ ವ್ಯವಸ್ಥೆಗೆ ಹಿನ್ನಡೆಯಾಗಿದೆ. ಹಾಗಾಗಿ ಪ್ರಧಾನಿ, ಗೃಹ ಸಚಿವರು ಹೇಳಿಕೆ ಕೊಡಬೇಕಿತ್ತು. ಆದರೆ ಈ ಜವಾಬ್ದಾರಿಯಿಂದ ಅವರು ನುಣುಚಿಕೊಂಡಿದ್ದಾರೆ. ಈ ದೇಶದ ಸುರಕ್ಷತೆಗೋಸ್ಕರ ಬದಲಾವಣೆ ಅಗತ್ಯವಿದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಚಂದ್ರಮೌಳಿ ಮಾತನಾಡಿ, ಕೊಡಗಿಗೆ ಮಂತ್ರಿಸ್ಥಾನದ ನಿರೀಕ್ಷೆ ಇತ್ತು. ಮುಂದಿನ ಅವಧಿಯಲ್ಲಿ ಈ ನಿರೀಕ್ಷೆ ಈಡೇರುವ ಭರವಸೆ ಇದೆ. ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ಅಂತರ ಕಡಿಮೆ ಇದೆ. ಹಾಗಾಗಿ ಬಿಜೆಪಿಯನ್ನು ಬೇರು ಸಮೇತ ಕಿತ್ತೆಸೆಯಲು ಅಭಿವೃದ್ಧಿ ಕೆಲಸ ಇನ್ನೂ ಹೆಚ್ಚಾಗಬೇಕು. ಲೋಕಸಭೆಗೆ ಕೊಡಗಿನಿಂದ ಹೋದವರು ಸಿ.ಎಂ. ಪೂಣಚ್ಚ ಮಾತ್ರ. ಈಗಲಾದರೂ ಕೊಡಗಿನವರಿಗೆ ಸಂಸದರ ಸ್ಥಾನ ಸಿಗಬೇಕು. ಕೊಡಗಿಗೆ ಸ್ಥಳೀಯ ಸಂಸದರನ್ನು ಕೊಟ್ಟರೆ ಮುಂದಿನ ೨೫ ವರ್ಷ ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮುಂದುವರಿಯಲಿದೆ. ನಾವು ಕೊಡುವ ಅಕ್ಕಿ ಬಳಸಿಕೊಂಡು ಬಿಜೆಪಿ ಅಕ್ಷತೆ ವಿತರಿಸುತ್ತಿದೆ. ಚುನಾವಣೆ ವೇಳೆ ಬಿಜೆಪಿಯವರು ಇಂಥ ಆಟ ಶುರುವಾಗಿದೆ. ಯಾವಾಗ ಬೇಕಾದರೂ ಲೋಕಸಭಾ ಚುನಾವಣೆ ಬರಬಹುದು. ಕಾರ್ಯಕರ್ತರು ಸಜ್ಜಾಗಿರಬೇಕು ಎಂದು ಹೇಳಿದರು.

ನೈಋತ್ಯ ಶಿಕ್ಷಕರ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಕೆ.ಕೆ. ಮಂಜುನಾಥ ಕುಮಾರ್ ಮಾತನಾಡಿ ತಮ್ಮ ವ್ಯಾಪ್ತಿಯ ಶಿಕ್ಷರಲ್ಲಿ ತನ್ನ ಪರವಾಗಿ ಮತಯಾಚಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯಅಬ್ರಾರ್ ಮಾತನಾಡಿ ಲೋಕಸಭಾ ಚುನಾವಣೆ, ಮುಂದಿನ ಜಿ.ಪಂ. ಮತ್ತು ತಾ.ಪಂ. ಚುನಾವಣೆಯಲ್ಲಿ ಮಹಿಳೆಯರಿಗೆ ಅದರಲ್ಲೂ ಅಲ್ಪಸಂಖ್ಯಾತರಿಗೆ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು.

ಕೆಪಿಸಿಸಿ ಸದಸ್ಯ ಮಂಜುನಾಥ ಗುಂಡೂರಾವ್, ಡಿಸಿಸಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್‌ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಪಿ. ಶಶಿಧರ್, ಬಿ. ಬಿ. ಸತೀಶ್, ಹೆಚ್.ಎ. ಹಂಸ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಜಿಲ್ಲೆಯ ವಿವಿಧ ಮುಂಚೂಣಿ ಘಟಕಗಳ ಪ್ರಮುಖರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net