ಬಿಜೆಪಿಯದು ಸುಳ್ಳಿನ ಸರ್ಕಾರ

0402 Chincholi 01
ಚಿಂಚೋಳಿಯಲ್ಲಿ ಭಾನುವಾರ ಆಯೋಜಿಸಿದ್ದ ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಅರಣ್ಯ, ಪರಿಸರ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು. ಜಗದೇವ ಗುತ್ತೇದಾರ್, ಸುಭಾಷ ರಾಠೋಡ್, ಭೀಮರಾವ ತೇಗಲತಿಪ್ಪಿ, ಬಸವರಾಜ ಮಾಲಿ, ನಾಗೇಶ ಗುಣಾಜಿ ಇತರರಿದ್ದರು.
Published on

ಚಿಂಚೋಳಿ: ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ. ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಗೊಳಿಸಿದ್ದು, ೫೫ ಸಾವಿರ ಕೋಟಿ ರೂ. ನೇರವಾಗಿ ಜನತೆಗೆ ತಲುಪಿಸಲಾಗುತ್ತಿದೆ ಎಂದು ಅರಣ್ಯ, ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ವೀರೇಂದ್ರ ಪಾಟೀಲ್ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಬಿಜೆಪಿ ಸುಳ್ಳನ್ನೆ ಸತ್ಯವೆಂದು ಬಿಂಬಿಸುತ್ತದೆ. ಗ್ಯಾಸ್ ಸಿಲಿಂಡರ್, ಪೆಟ್ರೋಲ್ ಬೆಲೆ ಏರಿಕೆ ಮಾಡಿದೆ. ಯುವ ಜನತೆ ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ಜಾತಿಗಳ ಮಧ್ಯೆ ಜಗಳ ಹಚ್ಚಲಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ದಮನ, ಸಂವಿಧಾನಕ್ಕೆ ಧಕ್ಕೆ ತಂದಿದೆ ಎಂದು ದೂರಿದರು.

ದೇಶದಲ್ಲಿ ಬಡತನ, ನಿರುದ್ಯೋಗ ಸಮಸ್ಯೆ ದುಪ್ಪಟ್ಟಾಗಿದೆ. ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ ಹಿಟ್ಲರ್ ಶಾಹಿ ಆಡಳಿತ ಪ್ರಾರಂಭವಾಗುತ್ತದೆ. ಸಂವಿಧಾನಕ್ಕೂ ಧಕ್ಕೆ ಬರಲಿದೆ. ದಿನ-ದಲಿತರು, ಶೋಷಿತ ವರ್ಗಗಳ ಮೇಲೆ ನಿರಂತರ ಶೋಷಣೆ ನಡೆಯುತ್ತವೆ. ಹೀಗಾಗಿ ಸುಭದ್ರ ರಾಷ್ಟçಕ್ಕಾಗಿ ಕಾಂಗ್ರೆಸ್ ಬೆಂಬಲಿಸುವಂತೆ ಜನರಲ್ಲಿ ಮನವಿ ಮಾಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಶೀಘ್ರದಲ್ಲಿಯೇ ವಿವಿಧ ಇಲಾಖೆಗಳ ನಾಮನಿರ್ದೇಶನ, ಗ್ಯಾರಂಟಿ ಯೋಜನೆ ಉಸ್ತುವಾರಿ ಸಮಿತಿ ಪಟ್ಟಿ ಸಿದ್ಧಪಡಿಸಿ ನೀಡಬೇಕು. ಎಲ್ಲ ಕಾರ್ಯಕರ್ತರಿಗೂ ಪ್ರಾತಿನಿಧ್ಯ ನೀಡಬೇಕು. ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಿಂದ ಕನಿಷ್ಠ ೧೦ ಸಾವಿರ ಮತಗಳ ಲೀಡ್ ಬರಬೇಕು. ಅಭ್ಯರ್ಥಿ ಯಾರೇ ಆಗಲಿ, ಅವರ ಗೆಲುವಿಗೆ ತನು, ಮನ, ಧನದಿಂದ ಶ್ರಮಿಸಬೇಕು ಎಂದು ಹೇಳಿದರು.

ವಕ್ತಾರ ಸುಬಾಷ ರಾಠೋಡ್, ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್ ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಾಲಿ, ಪ್ರಮುಖರಾದ ಬಾಬುರಾವ ಪಾಟೀಲ್, ಬಸಯ್ಯ ಗುತ್ತೇದಾರ್, ಭೀಮರಾವ ತೇಗಲತಿಪ್ಪಿ, ಮಧುಸೂದನರೆಡ್ಡಿ, ಮಲ್ಲಿಕಾರ್ಜುನ ಗಾಜರೆ, ಲಕ್ಷ್ಮೀ ಕೊರವಿ, ಲಕ್ಷ್ಮಣ ಅವಂಟಿ, ಪ್ರಭುಲಿಂಗ ಲೇವಡಿ, ಸಂತೋಷ ಗುತ್ತೇದಾರ್, ವೀರಶೆಟ್ಟಿ ಇಮಡಾಪುರ, ಆನಂದ ಟೈಗರ್, ಅಬ್ದುಲ್ ಬಾಸೀದ್, ದೇವಿಂದ್ರಪ್ಪ ಸಾಲೊಳ್ಳಿ, ಮಹಿಮೂದ್ ಪಟೇಲ್, ರೇವಣಸಿದ್ದಪ್ಪ ಸಾತನೂರ, ರಾಜಗೋಪಾಲರೆಡ್ಡಿ, ರೇವಣಸಿದ್ದಪ್ಪ ಮಾಸ್ಟರ್, ನೀಲಕಂಠ ರಾಠೋಡ್, ಅನೀಲಕುಮಾರ ಜಮಾದಾರ, ವೀರಶೆಟ್ಟಿ ಪಾಟೀಲ್, ನಾಗೇಶ ಗುಣಾಜಿ ಇತರರಿದ್ದರು.

ಐನಾಪುರ ಏತ ನೀರಾವರಿ ಯೋಜನೆಯ ತೊಡಕನ್ನು ಸರಿಪಡಿಸಿ, ಮುಂಬರುವ ಬಜೆಟ್‌ನಲ್ಲಿ ಆರ್ಥಿಕ ಅನುಮೋದನೆ ನೀಡಿ ಅನುಷ್ಠಾನಕ್ಕೆ ತರಲಾಗುವುದು. ಅರಣ್ಯ ಪ್ರದೇಶದಲ್ಲಿ ಉಳುಮೆ ಮಾಡಿ ಬದುಕುತ್ತಿರುವವ ಬಡ ರೈತರಿಗೆ ಅಧಿಕಾರಿಗಳು ಕಿರುಕುಳ ನೀಡುತ್ತಿರುವುದು ಗಮನಕ್ಕೆ ಬಂದಿದ್ದು, ಕ್ರಮ ಕೈಗೊಳ್ಳಲಾಗುವುದು. ತಿಂಗಳಿಗೊಮ್ಮೆ ಕ್ಷೇತ್ರಕ್ಕೆ ಭೇಟಿ ನೀಡಿ, ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ.
| ಈಶ್ವರ ಖಂಡ್ರೆ, ಅರಣ್ಯ, ಪರಿಸರ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net