ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತ: ಮೈಸೂರು ಪಾಲಿಕೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ

Darshan
Published on

ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ನಗರದ ಕಾಂಗ್ರೆಸ್ ಕಾರ್ಯಕರ್ತ ನಾಗರಾಜ್‌ನೊಂದಿಗೆ ತಳುಕು ಹಾಕಿಕೊಂಡಿದೆ. ಈ ಹಿನ್ನೆಲೆಯಲ್ಲಿ ನಟ ದರ್ಶನ್‌ನೊಂದಿಗೆ ಈತನನ್ನೂ ಬಂಧಿಸಲಾಗಿದೆ.


ಪ್ರಕರಣದ 11ನೇ ಆರೋಪಿ(ಎ11) ಈತ. ಬಂಧಿತನಾಗಿರುವ ನಾಗರಾಜ್ ಅಲಿಯಾಸ್ ನಾಗ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯನಾಗಿದ್ದ. ಮುಂಬರುವ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ತಯಾರಿ ಮಾಡಿಕೊಂಡಿದ್ದ ಎಂಬುದು ತಿಳಿದು ಬಂದಿದೆ.


ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ನಾಗರಾಜ್, ದರ್ಶನ್ ಸ್ನೇಹಿತರ ಮೂಲಕ ದರ್ಶನ್ ಆಪ್ತ ವಲಯಕ್ಕೆ ಸೇರಿಕೊಂಡಿದ್ದ. ಕಳೆದ 15 ವರ್ಷಗಳಿಂದಲೂ ದರ್ಶನ್ ಜತೆಯಲ್ಲೇ ಇರುವ ನಾಗರಾಜ್ ಅವರ ಎಲ್ಲ ಕಾರ್ಯಚಟುವಟಿಕೆಗಳನ್ನೂ ನೋಡಿಕೊಳ್ಳುತ್ತಿದ್ದ.


ದರ್ಶನ್ ಅವರ ಊಟ, ತಿಂಡಿ, ವಾಸ್ತವ್ಯ, ಪ್ರವಾಸ, ವೈಯಕ್ತಿಕ ವಿಚಾರಗಳೆಲ್ಲವನ್ನೂ ಈತನೇ ನಿರ್ವಹಣೆ ಮಾಡುತ್ತಿದ್ದ. ಮೈಸೂರು ತಾಲೂಕಿನ ಕೆಂಪಯ್ಯನಹುಂಡಿಯಲ್ಲಿರುವ ದರ್ಶನ್ ತೋಟದ ಮನೆಯ ನಿರ್ವಹಣೆ ಕೆಲಸವನ್ನು ಈತನೇ ಮಾಡುತ್ತಿದ್ದ. ದರ್ಶನ್ ಅಭಿಮಾನಿಗಳಿಗೆ ಸಂಪರ್ಕ ಸೇತುವೆಯೂ ಆಗಿದ್ದ ಎಂಬುದು ತಿಳಿದು ಬಂದಿದೆ.


ಮೈಸೂರಿನ ಟಿ.ಕೆ.ಲೇಔಟ್‌ನಲ್ಲಿ ವಾಸ ಇರುವ ಈತ ಪಾಲಿಕೆಯ ವಾರ್ಡ್ ನಂ.21ರಿಂದ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದ್ದ. ಅದಕ್ಕಾಗಿ ದರ್ಶನ್ ಅವರ ಮೂಲಕ ಕಾಂಗ್ರೆಸ್ ಟಿಕೆಟ್ ಪಡೆದುಕೊಳ್ಳಲು ಸಹ ಪ್ರಯತ್ನಿಸಿದ್ದ. ಚುನಾವಣಾ ತಯಾರಿಗಾಗಿ ಸ್ಥಳೀಯ ಮುಖಂಡರು ಮತ್ತು ನಾಯಕರೊಂದಿಗೆ ಒಡನಾಟವನ್ನು ಇಟ್ಟುಕೊಂಡು ಕ್ಷೇತ್ರದಲ್ಲಿ ಓಡಾಡುತ್ತಿದ್ದ ಎಂದು ಗೊತ್ತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net