

ಉಡುಪಿ: ಸೈನಿಕರ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದ ಮೇಲೆ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಕಾರ್ಕಳ ಹಿರ್ಗಾನ ನಿವಾಸಿ ರಾಧಾಕೃಷ್ಣ ನಾಯಕ್ ಎಂಬುವರಿಗೆ ಠಾಣಾಧಿಕಾರಿ ಠಾಣೆಗೆ ಕರೆಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಕಾಂಗ್ರೆಸ್ ಕಾರ್ಯಕರ್ತ ಮಣಿಪಾಲ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅನಾರೋಗ್ಯವನ್ನೂ ಲೆಕ್ಕಿಸದೆ, ಸುಳ್ಳು ಕೇಸ್ ಆಧರಿಸಿ ಕಾರ್ಯಕರ್ತ ರಾಧಾಕೃಷ್ಣ ನಾಯಕ್ ಮೇಲೆ ಪೊಲೀಸ್ ದೌರ್ಜನ್ಯ ಖಂಡನೀಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ತನಿಖೆ ನಡೆಸಿ ಯುವಕನಿಗೆ ನ್ಯಾಯ ಒದಗಿಸಲು ಆಗ್ರಹಿಸಿದ್ದಾರೆ.
ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಶಾಸಕ ಸುನಿಲ್ ಕುಮಾರ್, ದೇಶದ ಸೈನಿಕರನ್ನು ಅವಮಾನಿಸಿದ, ದೇಶದ್ರೋಹ ಆರೋಪ ಹೊತ್ತಿರುವ ವ್ಯಕ್ತಿಯನ್ನು ಸಮರ್ಥನೆ ಮಾಡುವುದು ಸರಿಯಾದ ನಡೆಯಲ್ಲ ಎಂದು ತಿರುಗೇಟು ನೀಡಿದ್ದಾರೆ.
ಹಿರ್ಗಾನ ರಾಧಾಕೃಷ್ಣ ನಾಯಕ್ ಕಳೆದ ವರ್ಷ ಸೈನಿಕರನ್ನು ನಿಂದಿಸಿ ಪಾಕಿಸ್ತಾನ ಪರ ಹಾಕಲಾಗಿದ್ದ ಫೇಸ್ಬುಕ್ ಪೋಸ್ಟ್ ವಿರುದ್ಧ ಕಾರ್ಕಳ ಠಾಣೆಯಲ್ಲಿ ಹಿಂದು ಸಂಘಟನೆಗಳು ನೀಡಿದ ದೂರಿನ ಮೇರೆಗೆ ಪೊಲೀಸರು ಬಂಧಿಸಿದ್ದಾರೆ. ಕಾರ್ಕಳ ಕಾಂಗ್ರೆಸ್ಸಿಗರು ದೇಶದ್ರೋಹಿ ಪರ ನಿಂತಿದ್ದು ಪೊಲೀಸರ ವಿರುದ್ಧ ಕೀಳು ಮಟ್ಟದ ಪದಗಳನ್ನು ಉಪಯೋಗಿಸುತ್ತಿರುವುದು ಖಂಡನೀಯ. ಕಾರ್ಕಳ ಪೊಲೀಸರಿಗೆ ಜನತೆಯ ನೈತಿಕ ಬೆಂಬಲವಿದೆ, ಪೊಲೀಸರು ಇನ್ನಷ್ಟು ದೇಶದ್ರೋಹಿಗಳನ್ನು ಬಂಧಿಸಬೇಕು ಎಂದು ಬಿಜೆಪಿ ಯುವಮೋರ್ಚಾ ಆಗ್ರಹಿಸಿದೆ.
ತನಿಖೆಗೆ ಎಸ್‌ಪಿ ಆದೇಶ
ಆರೋಪಕ್ಕೆ ಸಂಬಂಧಿಸಿ ತನಿಖೆ ನಡೆಸಲು ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಿಷ್ಣುವರ್ಧನ್ ಆದೇಶಿಸಿದ್ದಾರೆ. ಘಟನೆ ಸಂಬಂಧಿಸಿ ಕಾರ್ಕಳ ಠಾಣೆ ಎಸ್‌ಐ ವಿರುದ್ದ ಆರೋಪ ಕೇಳಿ ಬಂದಿರುವುದರಿಂದ. ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕುಂದಾಪುರ ಡಿವೈಎಸ್‌ಪಿ ಅವರಿಗೆ ಸೂಚಿಸಲಾಗಿದೆ ಎಂದು ಎಸ್‌ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ.