

ಹಾಸನ: ಪ್ರಾಣದ ಹಂಗು ತೊರೆದು ಕೋವಿಡ್-19 ಕೆಲಸ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಮೂಲ ಸೌಕರ್ಯ ಕಲ್ಪಿಸಬೇಕೆಂದು ಆಗ್ರಹಿಸಿ ನಡೆಸಲಾಗುತ್ತಿರುವ ಸರಣಿ ಪ್ರತಿಭಟನೆಗೆ ಜಿಲ್ಲಾ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಬೆಂಬಲ ಸೂಚಿಸಿ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರಿಗೆ ಮನವಿ ಸಲ್ಲಿಸಿದರು.
ಬೆಳಗಾವಿ, ನರಗುಂದ ಹಾಗೂ ರಾಣೆ ಬೆನ್ನೂರಿನಲ್ಲಿ ಕರ್ತವ್ಯನಿರತ ಅಂಗನವಾಡಿ ಕಾರ್ಯಕರ್ತೆಯರಿಗೆ ಕರೊನಾ ಸೋಂಕು ತಗುಲಿದೆ. ಕೆಲ ಜಿಲ್ಲೆಗಳಲ್ಲಿ ಆರೋಗ್ಯ ಸಿಬ್ಬಂದಿ ಜತೆಗೆ ತೆರಳಿದ ಸಿಬ್ಬಂದಿ ಮೇಲೆ ಹಲ್ಲೆ ನಡೆದಿದೆ. ಆದರೆ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಗುಣಮಟ್ಟದ ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್ ನೀಡದೆ ತೊಂದರೆಗೆ ಸಿಲುಕಿಸಲಾಗಿದೆ ಎಂದು ಆರೋಪಿಸಿದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಕ್ತ ಸೌಲಭ್ಯ ಕಲ್ಪಿಸದಿದ್ದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರಿಗೆ ಮನವಿ ಸಲ್ಲಿಸಿದರು.
ಕಾಂಗ್ರೆಸ್ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಡಿ. ತಾರಾ ಚಂದನ್, ಉಪಾಧ್ಯಕ್ಷೆ ಸುಜಾತ, ಸಂಚಾಲಕಿ ಪಿ.ಎಸ್.ಜಮೀಲ, ಸರೋಜಾ, ಜಿಲ್ಲಾ ಕಾರ್ಯದರ್ಶಿ ಬಾಳ್ಳುಪೇಟೆ ಸರೋಜ, ಗಾಯತ್ರಿ ಕಿರಣ್ ಹಾಗೂ ಇತರರಿದ್ದರು.