

ಮಂಡ್ಯ: ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಆಡಳಿತ ಮಂಡಳಿ ಚುಕ್ಕಾಣಿ ಹಿಡಿಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಇದರೊಂದಿಗೆ ಜೆಡಿಎಸ್‌ಗೆ ಮುಖಭಂಗವಾಗಿದೆ.
ನಗರದಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಉರಮಾರಕಸಲಗೆರೆ ಮರೀಗೌಡ ಹಾಗೂ ಉಪಾಧ್ಯಕ್ಷರಾಗಿ ಆಲಕೆರೆ ಕೃಷ್ಣೇಗೌಡ ಆಯ್ಕೆಯಾಗಿದ್ದಾರೆ. 14 ನಿರ್ದೇಶಕ ಬಲದ ಪಿಎಲ್ಡಿ ಬ್ಯಾಂಕ್‌ಗೆ ಒರ್ವ ನಾಮ ನಿರ್ದೇಶಕ ಸ್ಥಾನವಿದೆ. ಈ ಪೈಕಿ ಕಾಂಗ್ರೆಸ್ ಹಾಗೂ ಜೆಡಿಎಸ್ ತಲಾ ಏಳು ನಿರ್ದೇಶಕರಿದ್ದಾರೆ. ಅಂತೆಯೇ ನಾಮನಿರ್ದೇಶಕ ಸ್ಥಾನ ಕಾಂಗ್ರೆಸ್ ತೆಕ್ಕೆಯಲ್ಲಿತ್ತು.
ನೂತನ ವರಿಷ್ಠರ ಆಯ್ಕೆ ಸಂಬಂಧ ಬುಧವಾರ ಚುನಾವಣೆ ನಿಗದಿಯಾಗಿತ್ತು. ಅದರಂತೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಮರೀಗೌಡ ಹಾಗೂ ಜೆಡಿಎಸ್‌ನಿಂದ ಶಿವಲಿಂಗೇಗೌಡ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಕೃಷ್ಣೇಗೌಡ ಹಾಗೂ ಜೆಡಿಎಸ್‌ನಿಂದ ದಿವ್ಯಾ ನಾಮಪತ್ರ ಸಲ್ಲಿಸಿದರು. ನಂತರ ನಡೆದ ಮತದಾನದಲ್ಲಿ ಮರೀಗೌಡ ಮತ್ತು ಕೃಷ್ಣೇಗೌಡ ತಲಾ ಎಂಟು, ಶಿವಲಿಂಗೇಗೌಡ ಮತ್ತು ದಿವ್ಯಾ ಅವರಿಗೆ ತಲಾ ಏಳು ಮತ ಪಡೆದರು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯೂ ಆದ ತಾಪಂ ಇಒ ಎಂ.ಎಸ್.ವೀಣಾ ಆಯ್ಕೆಯನ್ನು ಘೋಷಣೆ ಮಾಡಿದರು. ಕಾಂಗ್ರೆಸ್ ಬೆಂಬಲಿತರ ಪರವಾಗಿ ಮರೀಗೌಡ, ಕೃಷ್ಣೇಗೌಡ, ಯು.ಸಿ.ಶಿವಕುಮಾರ್, ಎಚ್.ಸಿ.ಶಿವಲಿಂಗೇಗೌಡ, ಬೇಲೂರು ಸೋಮಶೇಖರ್, ಬೋರೇಗೌಡ, ಎಂ.ಯೋಗೇಶ್, ನಿಂಗಮ್ಮ ಮತ ಚಲಾಯಿಸಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಶಾಸಕ ರವಿಕುಮಾರ್ ಗಣಿಗ, ಕಾಂಗ್ರೆಸ್ ಪಕ್ಷದ ತೆಕ್ಕೆಗೆ ಪಿಎಲ್‌ಡಿ ಬ್ಯಾಂಕ್ ಆಡಳಿತ ಮಂಡಳಿ ಒಲಿದು ಬಂದಿದೆ. ರೈತರಿಗೆ ಅನುಕೂಲವಾಗುವಂತೆ ಎಲ್ಲ ಸಹಕಾರದೊಂದಿಗೆ ಕೆಲಸ ನಿರ್ವಹಿಸಿ. ಬ್ಯಾಂಕ್ ಅಭಿವೃದ್ಧಿಗೆಂದು 10 ಲಕ್ಷ ರೂ ಅನುದಾನ ನೀಡಲಾಗುವುದು. ಹಂತ ಹಂತವಾಗಿ ಆಸಕ್ತ ನಿರ್ದೇಶಕರನ್ನು ವರಿಷ್ಠ ಹುದ್ದೆಗೇರಿಸಲಾಗುವುದು. ಎಲ್ಲ ನಿರ್ದೇಶಕರು ಬ್ಯಾಂಕಿನ ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.
ಮನ್‌ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಲಹಳ್ಳಿ ಅಶೋಕ್ ಇತರರಿದ್ದರು.