

ವಿರಾಜಪೇಟೆ: ಮುಂದಿನ ದಿನದಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪಾತ್ರ ಪ್ರಮುಖವಾಗಿದೆ. ಸರ್ಕಾರದ ಅಭಿವೃದ್ಧಿ ಕಾರ್ಯಗಳ ಜತೆಗೆ ವಿರಾಜಪೇಟೆ ಶಾಸಕರ ಅಭಿವೃದ್ಧಿ ಕಾರ್ಯವನ್ನು ಜನರ ಮುಂದಿಡುವ ಕೆಲಸವನ್ನು ಸ್ಥಳೀಯ ಕಾರ್ಯಕರ್ತರು ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಕರೆ ನೀಡಿದರು.
ಬಿಟ್ಟಂಗಾಲದ ಹೆಗ್ಗಡೆ ಸಮಾಜದ ಸಭಾಂಗಣದಲ್ಲಿ ಬುಧವಾರ ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ವಿರಾಜಪೇಟೆಯ ಶಾಸಕರು ನಿರೀಕ್ಷೆಗೆ ಮೀರಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿದ್ದಾರೆ. ಜತೆಗೆ ಸರ್ಕಾರ ಬಜೆಟ್‌ನಲ್ಲಿ ಸಹ ಅನೇಕ ಯೋಜನೆಗಳನ್ನು ಕ್ಷೇತ್ರಕ್ಕೆ ನೀಡಿದೆ. ಇದನ್ನು ಕಾರ್ಯಕರ್ತರು ಜನರ ಮುಂದಿಡುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಇದರಿಂದ ರಾಜ್ಯದ ಪಾಲಿನ ಅನುದಾನ ಯೋಜನೆಗಳು ನಿಂತುಹೋಗಿವೆ. ಆದರೂ ಸರ್ಕಾರ ಮಾಡುತ್ತಿರುವ ಅಭಿವೃದ್ಧಿಯನ್ನು ಜನರ ಮುಂದಿಟ್ಟು, ಸ್ಥಳೀಯ ಚುನಾವಣೆಯಲ್ಲಿ ಪಕ್ಷಕ್ಕೆ ಅಧಿಕಾರ ಸಿಗುವಂತೆ ಮಾಡಬೇಕು ಎಂದರು.
ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ಯುವ ಕಾಂಗ್ರೆಸ್ ಘಟಕದ ವತಿಯಿಂದ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಹೊಣೆಗಾರಿಕೆಯನ್ನು ನಿಭಾಯಿಸಬೇಕು. ಪಕ್ಷವನ್ನು ಸಂಘಟಿಸಿ ಬಲಪಡಿಸಬೇಕು. ತಮ್ಮ ಮಹತ್ವದ ಜವಾಬ್ದಾರಿ ನಿರ್ವಹಿಸಲು ಅಗತ್ಯ ಬೆಂಬಲ ನೀಡಲು ನಾನು ಬದ್ಧನಾಗಿದ್ದೇನೆ. ಒಂದು ತಿಂಗಳಿನಲ್ಲಿ ಯುವ ವೇದಿಕೆ ಪದಾಧಿಕಾರಿಗಳ ನಿಯುಕ್ತಿ ಕೆಲಸ ಆಗಬೇಕು. ಆ ಮೂಲಕ ಸರ್ಕಾರದ ಕೆಲಸಗಳನ್ನು ಜನರ ಮುಂದಿಡಬೇಕು. ಬಿಜೆಪಿ ಮತ್ತು ಜೆಡಿಎಸ್ ಅನೈತಿಕ ಮೈತ್ರಿ ಮಾಡಿಕೊಂಡು ಯಾವ ಸರಕು ಇಲ್ಲವಾದರೂ ವಿನಾಕಾರಣ ಟೀಕೆಯಲ್ಲಿ ತೊಡಗಿರುವುದು ವಿಪರ್ಯಾಸ. ಏನೇ ಆದರೂ ನನ್ನದು ಕ್ಷೇತ್ರ ಪ್ರಗತಿ ಪಥದತ್ತ ನಡೆ ಮಾತ್ರ. ಅದನ್ನು ದಿಟ್ಟವಾಗಿ ನಿಭಾಯಿಸುತ್ತೇನೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ನಾವು ಅಂದು ಒಗ್ಗೂಡಿ ಕೆಲಸ ಮಾಡಿದ್ದರಿಂದ ಜಿಲ್ಲೆಯಲ್ಲಿ ನಮ್ಮ ಇಬ್ಬರು ಶಾಸಕರು ಹೊಂದಿದ್ದೇವೆ. ಮುಂದೆ ಬರಲಿರುವ ಸ್ಥಳೀಯ ಸಂಸ್ಥೆಯ ಚುನಾವಣೆಗಳು ಸಹ ಅತ್ಯಂತ ಮಹತ್ವವಾಗಿದ್ದು, ಸಂಘಟಿತರಾಗಿ ಮತ್ತೆ ಕೆಲಸ ಮಾಡಬೇಕೆಂದರು.
ರಾಜ್ಯ ಕೆಪಿಸಿಸಿ ವಕ್ತಾರ ಲಕ್ಷ್ಮಣ್, ಮಾಜಿ ವಿಧಾನ ಪರೀಷತ್ ಸದಸ್ಯ ಅರುಣ್ ಮಾಚಯ್ಯ, ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್, ಕೆಪಿಸಿಸಿ ಸದಸ್ಯ ಬೇಕಲ್ ರಮಾನಾಥ್, ಕಾಫಿ ಮಂಡಳಿ ಮಾಜಿ ಸದಸ್ಯೆ ತಾರ ಅಯ್ಯಮ್ಮ, ಕೆಪಿಸಿಸಿ ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ .ಬಿ.ಶಾಂತಪ್ಪ ಮಾತನಾಡಿದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಾನ್ಸನ್, ಪೊನ್ನಂಪೇಟೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿಪೂಣಚ್ಚ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹನೀಪ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೊಲ್ಯಡ ಗಿರೀಶ್ ಇದ್ದರು.