ಅರಸೀಕೆರೆ ಏಳು ವಾರ್ಡ್‌ನಲ್ಲಿ ಗೆಲುವಿನ ನಗೆ ಬೀರಿದ ಕಾಂಗ್ರೆಸ್

ನಗರಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಅರಸೀಕೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮೆರವಣಿಗೆ ನಡೆಸಿದರು. ಕೆ.ಎಂ.ಶಿವಲಿಂಗೇಗೌಡ, ಮೆಟ್ರೋ ಬಾಬು, ಶ್ರೀನಿವಾಸ್,  ಧರ್ಮಶೇಖರ್, ಅರುಣ್ ಕುಮಾರ್ ಇದ್ದರು.
ನಗರಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಅರಸೀಕೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮೆರವಣಿಗೆ ನಡೆಸಿದರು. ಕೆ.ಎಂ.ಶಿವಲಿಂಗೇಗೌಡ, ಮೆಟ್ರೋ ಬಾಬು, ಶ್ರೀನಿವಾಸ್, ಧರ್ಮಶೇಖರ್, ಅರುಣ್ ಕುಮಾರ್ ಇದ್ದರು.
Published on

ಅರಸೀಕೆರೆ: ಇಲ್ಲಿನ ನಗರಸಭೆಯ ಎಂಟು ವಾರ್ಡ್‌ಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಏಳರಲ್ಲಿ ಕಾಂಗ್ರೆಸ್, ಒಬ್ಬ ಪಕ್ಷೇತರ ಜಯ ಸಾಧಿಸಿದರು.

ಅಂತೆಯೇ ಜೆಡಿಎಸ್, ಬಿಜೆಪಿ ಖಾತೆ ತೆರೆಯುವಲ್ಲಿ ವಿಫಲವಾಗಿವೆ. ತಾಲೂಕು ಕಚೇರಿ ಆವರಣದಲ್ಲಿರುವ ಕಂದಾಯ ಭವನದಲ್ಲಿ ಮಂಗಳವಾರ ಮತ ಎಣಿಕೆ ನಡೆಯಿತು. ವಾರ್ಡ್ 1ರಲ್ಲಿ ಯುವರಾಜ್, 9ರಲ್ಲಿ ಅವಿನಾಶ್, 10ರಲ್ಲಿ ರೇವಣ್ಣ, 15ರಲ್ಲಿ ಯೋಗೀಶ್, 18ರಲ್ಲಿ ಕೆ.ಪಿ.ಪಲ್ಲವಿ ಸಂತೋಷ್, 25ರಲ್ಲಿ ದರ್ಶನ್ ಹಾಗೂ 28ನೇ ವಾರ್ಡ್‌ನಲ್ಲಿ ಗುಲ್ಜಾರ್ ಬಾನು (ಕಾಂಗ್ರೆಸ್ ಅಭ್ಯರ್ಥಿಗಳು) ಗೆಲುವಿನ ನಗೆ ಬೀರಿದ್ದಾರೆ.

ಇನ್ನು ಇಂದಿರಾ ನಗರ ಹಾಗೂ ಚೌಡೇಶ್ವರಿ ಬಡಾವಣೆಯ 19ನೇ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿ ಇಮ್ರಾನ್ ಖಾನ್ ಕಾಂಗ್ರೆಸ್‌ನಿಂದ ಜಯಭೇರಿ ಬಾರಿಸಿದ್ದರೆ. ಸುದ್ದಿ ತಿಳಿಯುತ್ತಿದ್ದಂತೆ ಹೊರಗೆ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಪಕ್ಷದ ಬಾವುಟ ಹಿಡಿದು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಕೈ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಆಟೋ ಚಿಹ್ನೆಯಡಿ ಗೆದ್ದ ಇಮ್ರಾನ್ ಖಾನ್ ಅವರನ್ನು ಬೆಂಬಲಿಗರು ಹೆಗಲ ಮೇಲೆ ಹೊತ್ತು ಕುಣಿದು ಕುಪ್ಪಳಿಸಿದರು.

ಮೆರವಣಿಗೆ: ಏಳು ವಾರ್ಡ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಪಡೆದ ಹಿನ್ನೆಲೆಯಲ್ಲಿ ವಿಜೇತರೊಂದಿಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ, ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋ ಬಾಬು, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್, ಸ್ಥಳೀಯ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅರುಣ್ ಕುಮಾರ್ ಸೇರಿದಂತೆ ಹಲವು ಮುಖಂಡರು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net