

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದ್ದು, ರಾಜ್ಯದಲ್ಲಿ ಬಿಜೆಪಿ ಮತ್ತೆ ಶಕ್ತಿಶಾಲಿ ಪಕ್ಷ್ವಆಗಿ ಹೊರಹೊಮ್ಮಲಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಡಿ.ವಿ. ಸದಾನಂದ ಗೌಡ ತಿಳಿಸಿದರು.
ದಾಸರಹಳ್ಳಿ ಕ್ಷೇತ್ರದ ಹೆಗ್ಗನಹಳ್ಳಿಯ ಜಿಕೆಡಬ್ಲ್ಯು ಬಡಾವಣೆಯಲ್ಲಿ ಆಯೋಜಿಸಿದ್ದ ಹುತಾತ್ಮರ ಸ್ಮರಣಾರ್ಥ ಪವಿತ್ರ ಮಣ್ಣು ಸಂಗ್ರಹ ಮಾಡುವ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸಾಕಷ್ಟು ಕೆಲಸಗಳನ್ನು ಮಾಡಿದೆ. ವಿದ್ಯಾಸಿರಿ ಮೂಲಕ ವಿದ್ಯಾರ್ಥಿವೇತನ, ಕೋವಿಡ್ ಸಂದರ್ಭದಲ್ಲಿ ದೇಶದಲ್ಲೇ ಅತ್ಯಂತ ಉತ್ತಮವಾಗಿ ನಿರ್ವಹಣೆ ಮಾಡಿರುವ ಹೆಗ್ಗಳಿಕೆ ಕರ್ನಾಟಕದ ಬಿಜೆಪಿ ಸರ್ಕಾರ. ಜತೆಗೆ ಹಲವು ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡು ಜನ ಗಮನ ಸೆಳೆದಿತ್ತು ಎಂದರು.
ರಾಮಜನ್ಮಭೂಮಿಗೆ ಇಡೀ ದೇಶದಲ್ಲೇ ಮಣ್ಣು ಸಂಗ್ರಹಿಸಿದಂತೆ ದೇಶಕ್ಕಾಗಿ ಜೀವವನ್ನು ಬಲಿದಾನ ಮಾಡಿರುವ ನಮ್ಮ ಯೋಧರ ಸ್ಮರಣಾರ್ಥವಾಗಿ ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದ ಸಮೀಪದಲ್ಲಿ ನಿರ್ಮಿಸಲಾಗುವ ಅಮೃತ ಉದ್ಯಾನವನದಲ್ಲಿ ದೇಶಾದ್ಯಂತ ಸಂಗ್ರಹಿಸಲಾಗುವ ಮಣ್ಣನ್ನು ಬಳಸಿಕೊಳ್ಳಲಾಗುವುದು ಎಂದು ಸಂಸದರು ತಿಳಿಸಿದರು.
ಶಾಸಕ ಎಸ್.ಮುನಿರಾಜು ಮಾತನಾಡಿ, ಕಾಂಗ್ರೆಸ್ ಸರ್ಕಾರ ಜನರಿಗೆ ಗ್ಯಾರಂಟಿಗಳ ಟೋಪಿ ಹಾಕಿದೆ. ಸರಿಯಾದ ಮಾಹಿತಿ ನೀಡದೆ ಗ್ಯಾರಂಟಿ ಮಾಡಿದ್ದರೂ, ಇವುಗಳಿಂದ ಗೊಂದಲ ಸೃಷ್ಟಿಯಾಗಿದೆ. ಕಾಂಗ್ರೆಸ್ ಸರ್ಕಾರ ಬಂದರೆ ರಾಜ್ಯಕ್ಕೆ ಬರಗಾಲ ತಪ್ಪಿದ್ದಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ದೂರಿದರು.