ರಾಹುಲ್ ಗಾಂಧಿ ಬಂದ್ರೆ ಕಾಂಗ್ರೆಸ್ ಸೋಲುತ್ತೆ: ಸಚಿವ ಅಶೋಕ್ ವ್ಯಂಗ್ಯ

1678803719389
Published on

ಚಿಂತಾಮಣಿ: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ನಡೆಸಿದ ಪಾದಯಾತ್ರೆಯ ಪರಿಣಾಮ ಆಡಳಿತ ಚುಕ್ಕಾಣಿ ಹಿಡಿದಿದ್ದ ರಾಜ್ಯಗಳಲ್ಲೂ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವಂತಾಗಿದೆ ಎಂದು ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದರು.
ನಗರದಲ್ಲಿ ಬಿಜೆಪಿ ಮಂಗಳವಾರ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆ ಉದ್ದೇಶಿಸಿ ಮಾತನಾಡಿ, ನಮ್ಮಯಾತ್ರೆಗೆ ಕೇಂದ್ರ ಮತ್ತು ರಾಜ್ಯದಲ್ಲಿ ನಾಯಕರಿದ್ದಾರೆ. ಆದರೆ, ಕಾಂಗ್ರೆಸ್‌ನಲ್ಲಿ ಬೆರಳೆಣಿಕೆಯಷ್ಟು ಮುಖಂಡರಿದ್ದಾರೆ. ಅದಕ್ಕೆ ಇಂತಹ ಯಾತ್ರೆಗಳನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ರಾಹುಲ್ ಗಾಂಧಿ ಬಂದರೆ ಸಿಹಿ ಹಂಚಲಾಗುತ್ತದೆ. ಅವರು ಎಲ್ಲೆಲ್ಲಿ ಹೋಗುತ್ತಾರೋ ಅಲ್ಲಿ ಕಾಂಗ್ರೆಸ್ ಸೋಲುತ್ತದೆ ಎನ್ನುವುದು ಖಚಿತವಾಗುತ್ತಿದೆ ಎಂದರು.
ಜೆಡಿಎಸ್ ಒಂದು ಕುಟುಂಬದ ಪಾರ್ಟಿ. ಅನಾರೋಗ್ಯದ ಕಾರಣ ದೇವೇಗೌಡರು ಪ್ರಚಾರಕ್ಕೆ ಬರುತ್ತಿಲ್ಲ. ಕುಮಾರಸ್ವಾಮಿ ಅಲ್ಲಿ ಇಲ್ಲಿ ಪಂಚರತ್ನ ಯಾತ್ರೆಯ ಹೆಸರಿನಲ್ಲಿ ಓಡಾಡುತ್ತಿದ್ದಾರೆ. ಆದರೆ, ಇದು ಎಲ್ಲೂ ಪರಿಣಾಮ ಬೀರುತ್ತಿಲ್ಲ. ಜನಕ್ಕೆ ಐದು ವರ್ಷ ಆಡಳಿತ ನಡೆಸುವ ಸುಭದ್ರ ಸರ್ಕಾರ ಬೇಕಾಗಿದೆ. ಕಾಂಗ್ರೆಸ್ ಇತ್ತೀಚೆಗೆ ಅಲ್ಪಸಂಖ್ಯಾತರನ್ನು ಓಲೈಸುವ ಪಕ್ಷವಾಗಿದೆ. ಈ ಹಿಂದೆ ಅಧಿಕಾರದಲ್ಲಿದ್ದಾಗ ಏಕೆ ಗ್ಯಾರೆಂಟಿ ಕಾರ್ಡ್ ಕೊಡಲಿಲ್ಲ ಎಂದು ಪ್ರಶ್ನಿಸಿದರು.
ಕಂದಾಯ ಇಲಾಖೆಯು ಹಿಂದೆ ಜನರನ್ನು ಅಲೆದಾಡಿಸುವ ವಿಷಯದಲ್ಲಿ ಬೇರೊಂದು ರೀತಿಯ ಭಾವನೆ ಇತ್ತು. ಆದರೆ, ಬಿಜೆಪಿ ಸರ್ಕಾರದಲ್ಲಿ ಮನೆಯ ಬಾಗಿಲಿಗೆ ಅಗತ್ಯ ದಾಖಲೆ ಮತ್ತು ಸವಲತ್ತು ತಲುಪಿಸಲಾಗುತ್ತಿದೆ. ಜಿಲ್ಲಾಧಿಕಾರಿ ನಡೆ, ಗ್ರಾಮಗಳ ಕಡೆ ಕಾರ್ಯಕ್ರಮದಡಿ ಆಡಳಿತ ಯಂತ್ರಾಂಗವು ಜನರ ಬಳಿಗೆ ಹೋಗುತ್ತಿದೆ ಎಂದರು.
ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಮಾತನಾಡಿ, ಗೃಹ ಸಚಿವರಾದರೂ ಸಾಮಾನ್ಯ ವ್ಯಕ್ತಿಯಂತೆ ಸೇವೆ ಸಲ್ಲಿಸಿದ ದಿ.ಕೆ.ಎಂ.ಕೃಷ್ಣಾರೆಡ್ಡಿ ಕಾಲದಲ್ಲಿ ಚಿಂತಾಮಣಿಯಲ್ಲಿದ್ದ ರಾಮರಾಜ್ಯ ವಾತಾವರಣ ಮತ್ತೆ ನಿರ್ಮಿಸಲು ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಬೇಕಿದೆ. ಚಿಂತಾಮಣಿಯಲ್ಲಿ ಬಿಜೆಪಿಯೇ ಇಲ್ಲ ಎಂದವರಿಗೆ ಕೇಸರಿಮಯ ಯಾತ್ರೆಯು ತಕ್ಕ ಉತ್ತರ ನೀಡುತ್ತಿದೆ. ಕೇಸರಿ ಎಲ್ಲಿದೆ ಎಂಬುದನ್ನು ತೋರಿಸಲಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಕರೊನಾ ಸಂದರ್ಭದಲ್ಲಿ ಮೂರು ಡೋಸ್ ಲಸಿಕೆ ನೀಡಿದ್ದಾರೆ. ಪ್ರತಿ ರೈತನಿಗೆ ಕೃಷಿ ಸಮ್ಮಾನ್ ಯೋಜನೆಯಡಿ ಕೇಂದ್ರದಿಂದ 6 ಸಾವಿರ ಮತ್ತು ರಾಜ್ಯದಿಂದ 4 ಸಾವಿರ ರೂ. ನೀಡಲಾಗುತ್ತಿದೆ. ಇದು ಡಬಲ್ ಇಂಜಿನ್ ಸರ್ಕಾರದ ಸಾಧನೆ. ಆದರೆ ರಾಜ್ಯ ಕಾಂಗ್ರೆಸ್‌ನಲ್ಲಿ ಡಬಲ್ ಸ್ಟೀಯರಿಂಗ್ ಬಸ್ ಇದೆ. ಇದನ್ನು ಸಿದ್ದರಾಯಮ್ಯ ಒಂದು ಕಡೆಗೆ ಎಳೆದೆರೆ, ಡಿ.ಕೆ. ಶಿವಕುಮಾರ್ ಮತ್ತೊಂದು ಕಡೆಗೆ ಎಳೆಯುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಚಿಂತಾಮಣಿ ಪ್ರಮುಖ ನಗರ. ಆದರೂ ಇಲ್ಲಿಯವರೆಗೂ ಅಭಿವೃದ್ಧಿ ಆಗಿಲ್ಲ. ಇಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರ ಶಾಸಕರನ್ನು ಕಾಣಲಾಗಿದೆ. ಇದೀಗ ಬಿಜೆಪಿಗೊಂದು ಅವಕಾಶ ನೀಡಬೇಕು ಎಂದರು. ಸಂಸದ ಮುನಿಸ್ವಾಮಿ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮುಖಂಡ ವೇಣುಗೋಪಾಲ್ ಮತ್ತಿತರರು ಇದ್ದರು.

ಡಿ.ಕೆ.ಶಿವಕುಮಾರ್‌ಗೆ ಸವಾಲು
ಇನ್ನೇನು ಕೆಲವೇ ದಿನಗಳಲ್ಲಿ ಬಿಜೆಪಿ ಪ್ಯಾಕಪ್ ಮಾಡಲಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಅಶೋಕ್, ನಾವು ಪ್ಯಾಕಪ್ ಮಾಡುವವರಾಗಿದ್ದರೆ 4 ವರ್ಷಗಳ ಹಿಂದೆ ಅವರು ಸ್ವಪಕ್ಷೀಯ ಶಾಸಕರನ್ನು ಯಾಕೆ ತಡೆಯಲಿಲ್ಲ? ಅವರ ಸರ್ಕಾರದಲ್ಲಿ ಅವರದ್ದೇ ಶಾಸಕರನ್ನು ಎಗರಿಸಲಾಯಿತು. ಆಗ ಸರ್ಕಾರ ಅವರದ್ದೇ, ಪೊಲೀಸ್ ಅಧಿಕಾರ ಇದ್ದರೂ ತಡೆಯಲಾಗಿಲ್ಲ. ಈಗ ಬಿಜೆಪಿ ಸ್ಪೀಡ್ ತಡೆಯಲು ಆಗುತ್ತಾ? ಶಾಸಕರನ್ನೇ ತಡೆಯಲು ಆಗದವರಿಗೆ ಬಿಜೆಪಿ ತಡೆಯಲು ಆಗಲ್ಲ. ಒಂದು ವೇಳೆ ರಸ್ತೆಗೆ ಅಡ್ಡ ಹಾಕಿದರೆ ಪುಡಿ ಪುಡಿ ಮಾಡಿ, ಮುಂದೆ ಹೋಗಲಾಗುತ್ತದೆ ಎಂದರು.

ಬೃಹತ್ ಮೆರವಣಿಗೆ
ನಗರದಲ್ಲಿ ಬೃಹತ್ ಕಾರ್ಯಕರ್ತರನ್ನು ಒಳಗೊಂಡಂತೆ ವಿಜಯ ಸಂಕಲ್ಪ ಯಾತ್ರೆಯ ಮೆರವಣೆಗೆ ಅದ್ದೂರಿಯಾಗಿ ನಡೆಯಿತು. ಕಳೆದ ಎರಡು ದಿನಗಳಿಂದಲೂ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದ ಬಿಜೆಪಿ ನಾಯಕರು ಕ್ಷೇತ್ರದಲ್ಲಿ ಯಾತ್ರೆಯ ಮೂಲಕ ಬಲ ಪ್ರದರ್ಶಿಸಿದರು. ತಮಟೆ ವಾದನ, ಡೊಳ್ಳು ಕುಣಿತ, ಗಾರುಡಿಗೊಂಬೆಗಳು ವಿವಿಧ ಜಾನಪದ ಕಲಾ ತಂಡಗಳು, ಕಳಶ ಹೊತ್ತ ಮಹಿಳೆಯರು ಕಾಲ್ನಡಿಗೆಯಲ್ಲಿ ಸಾಗಿದರು. ಕಾರ್ಯಕರ್ತರ ಘೋಷಣೆಗಳು ಮುಗಿಲು ಮುಟ್ಟಿದವು.

ಪ್ರತಿಭಟನೆ ಚುನಾವಣಾ ಡ್ರಾಮಾ
ಬೆಂಗಳೂರು ಮತ್ತು ಮೈಸೂರು ಹೆದ್ದಾರಿ ಟೋಲ್ ಸಂಗ್ರಹ ವಿವಾದದ ಬಗ್ಗೆ ಮಾತನಾಡಿದ ಆರ್.ಅಶೋಕ್, ದೇಶದ ಪ್ರಮುಖ ರಸ್ತೆಗಳು ಎಲ್ಲ ಟೋಲ್ ವ್ಯವಸ್ಥೆ ಹೊಂದಿದೆ. ಮೊದಲು ಬೇರೆ ರಸ್ತೆಗಳ ವಿಚಾರ ವಾಗಿ ಪ್ರತಿಭಟನೆ ನಡೆಸಲಿಲ್ಲ. ಈಗ ವಿಧಾನಸಭೆ ಚುನಾವಣೆ ಬಂದಿದೆ ಎಂಬ ಭಾವನೆಯಲ್ಲಿ ನಾಟಕವಾಡುತ್ತ ಜೆಡಿಎಸ್, ಕಾಂಗ್ರೆಸ್‌ನವರು ಥಕ ಥಕ ಕುಣಿಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಟೋಲ್ ರಸ್ತೆಯ ಬಗ್ಗೆ ಹೇಳಿಕೆ ನೀಡಿದ ಕುಮಾರಸ್ವಾಮಿ ಮತ್ತು ಡಿಕೆಶಿಗೆ ನಾಚಿಕೆಯಾಗಬೇಕು, ಕುಣಿಯಲಾರದೆ ನೆಲ ಡೊಂಕು ಎನ್ನುವಂತೆ ಆಗಿದೆ ಎಂದರು.

ಯಾತ್ರೆಗಳ ಸಂಚಾರ ಕಿರಿಕಿರಿ
ನಗರದ ಪ್ರಮುಖ ರಸ್ತೆಗಳ ವಿಭಜಕಗಳಲ್ಲಿ ಯಾತ್ರೆಗಳು ಮತ್ತು ರ‌್ಯಾಲಿಗಳ ಹಿನ್ನೆಲೆಯಲ್ಲಿ ಅಳವಡಿಸಿರುವ ಪಕ್ಷಗಳ ಬಾವುಟಗಳು, ಫ್ಲೆಕ್ಸ್‌ಗಳು ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಕಿರಿಕಿರಿ ಅನುಭವಿಸಲು ಕಾರಣವಾಗಿದೆ. ನಗರಸಭೆಯಿಂದ ಅನುಮತಿ ಪಡೆಯದೆ
ದೊಡ್ಡ ದೊಡ್ಡ ಕಟ್ಟಿಗೆಗಳಲ್ಲಿ ಬಾವುಟಗಳನ್ನು ರಸ್ತೆ ವಿಭಜಕಗಳಲ್ಲಿ ಕಟ್ಟಲಾಗಿದೆ. ಈ ಹಿಂದೆ ನಗರದ ಜೋಡಿ ರಸ್ತೆಯ ವಿಭಜಕಗಳಲ್ಲಿ ಬ್ಯಾನರ್, ಬಾವುಟ ಪ್ಲೆಕ್ಸ್ ಅಳವಡಿಸದಂತೆ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ, ಇದನ್ನು ರಾಜಕೀಯ ಪಕ್ಷಗಳು ಉಲ್ಲಂಘಿಸುತ್ತಿದ್ದರೂ ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net