ಕಾಂಗ್ರೆಸ್ಸಿಗರು ನಿಮ್ಮ ಸಂಪತ್ತಿನ ಲೂಟಿ ಮಾಡುತ್ತಾರೆ ಎಚ್ಚರ: ಕಾಂಗ್ರೆಸ್ ವಿರುದ್ಧ ಮೋದಿ ಗುಡುಗು

IMG_20240428_140300.jpg
Published on

ಬೆಳಗಾವಿ: ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರವು 10 ವರ್ಷಗಳಲ್ಲಿ ಭಾರತೀಯ ನ್ಯಾಯಸಂಹಿತಾ ಮೂಲಕ ಆಂಗ್ಲರ ಮುಷ್ಟಿಯಿಂದ ಜನರನ್ನು ಹೊರತಂದಿದೆ. ಗುಲಾಮಿ ಪದ್ಧತಿಯಿಂದ ಭಾರತೀಯರನ್ನು ಹೊರಕ್ಕೆ ತರಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ಬೆಳಗಾವಿಯ ಮಾಲಿನಿಸಿಟಿಯಲ್ಲಿ ಭಾನುವಾರ ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಕುಟುಂಬವಾದದಲ್ಲಿ ಕಾಂಗ್ರೆಸ್ ದೇಶದ ಹಿತ ಮರೆತಿದೆ. ಕರೊನಾ ಅವಧಿಯಲ್ಲಿ ಲಸಿಕೆಯನ್ನು ಬಿಜೆಪಿ ಲಸಿಕೆ ಎಂದು ಕಾಂಗ್ರೆಸ್ಸಿಗರು ಟೀಕಿಸಿದ್ದರು. ಇವಿಎಂ ವಿಚಾರದಲ್ಲಿ ಕೂಡ ಸುಳ್ಳು ಹೇಳಿ ಗೊಂದಲ ಮೂಡಿಸಿದ್ದರು. ಸುಪ್ರೀಂ ಕೋರ್ಟ್ ಕೆಲ ದಿನಗಳ ಹಿಂದೆ ಇವಿಎಂ ವಿಷಯದಲ್ಲಿ ಸ್ಪಷ್ಟ ಆದೇಶ ನೀಡಿದೆ ಎಂದು ವಿವರಿಸಿದರು.
ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಚಿಕ್ಕೋಡಿಯಲ್ಲಿ ಜೈನ ಮುನಿ ಹತ್ಯೆ, ಬೆಳಗಾವಿಯಲ್ಲಿ ನಡೆದ ಮಹಿಳೆ ಮೇಲಿನ ದೌರ್ಜನ್ಯ ಪ್ರಸ್ತಾಪಿಸಿದ ಅವರು, ಹುಬ್ಬಳ್ಳಿಯಲ್ಲಿ ಕಾಲೇಜಿನ ವಿದ್ಯಾರ್ಥಿನಿ ಹತ್ಯೆಯಿಂದ ದೇಶದಲ್ಲೇ ಆತಂಕ ಮೂಡಿದೆ. ಕಾಂಗ್ರೆಸ್ ಸರ್ಕಾರವು ತುಷ್ಟೀಕರಣದ ಕಡೆ ಗಮನ ಕೊಡುತ್ತಿದೆ. ನೇಹಾರ ಕುರಿತು ಕಾಂಗ್ರೆಸ್ಸಿಗರಿಗೆ ಕಳಕಳಿ ಇಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್‌ಗೆ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಡಲಿ. ಪಿಎಫ್‌ಐ ಜತೆ ಹೊಂದಾಣಿಕೆ ಮಾಡಿಕೊಂಡ ಪಕ್ಷ ಕಾಂಗ್ರೆಸ್ ಎಂದು ಆಕ್ಷೇಪಿಸಿದರು. ಸ್ವಾತಂತ್ರ್ಯ ಚಳವಳಿಯನ್ನು ಮತಬ್ಯಾಂಕ್‌ಗಾಗಿ ತುಷ್ಟೀಕರಣದ ಚರಿತ್ರೆಯಾಗಿ ಮಾಡಿದ ಕಾಂಗ್ರೆಸ್, ಭಾರತದ ಮಹಾರಾಜರು ಅತ್ಯಾಚಾರಿಗಳು; ಬಡವರ ಜಮೀನನ್ನು ಕಿತ್ತುಕೊಂಡವರೆಂದು ಚರಿತ್ರೆ ಬರೆಸಿದ್ದರು. ಶಿವಾಜಿ ಮಹಾರಾಜ, ಕಿತ್ತೂರು ರಾಣಿ ಚನ್ನಮ್ಮರ ಅವಮಾನ ಮಾಡಿದ ಪಕ್ಷ ಕಾಂಗ್ರೆಸ್ ಎಂದರು. ನಿಜವಾಗಿ ನವಾಬರು, ನಿಜಾಮರು, ಸುಲ್ತಾನರು ಅತ್ಯಾಚಾರ ಮಾಡಿದವರು ಎಂದು ವಿವರಿಸಿದರು.
ಕಾಂಗ್ರೆಸ್ಸಿಗೆ ಔರಂಗಜೇಬನ ಅತ್ಯಾಚಾರ, ಮಂದಿರಗಳ ಧ್ವಂಸ ಮಾಡಿದ್ದು ನೆನಪಿಗೆ ಬರುವುದಿಲ್ಲ. ದೇಗುಲಗಳನ್ನು ಅವಮಾನ ಮಾಡುವವರ ಜತೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದೆ. ಭಾರತದ ವಿಭಜನೆಯಲ್ಲಿ ದೊಡ್ಡ ಪಾತ್ರ ವಹಿಸಿದವರನ್ನು ಕಾಂಗ್ರೆಸ್ ಬೆಂಬಲಿಸುತ್ತದೆ.
ಕಾಂಗ್ರೆಸ್ಸಿಗರು ನಿಮ್ಮ ಬ್ಯಾಂಕ್‌ನ ಹಣ, ಆಸ್ತಿ, ಮಹಿಳೆಯರ ಬಳಿ ಇರುವ ಒಡವೆ ಸೇರಿ ಮಂಗಲಸೂತ್ರದ ಎಕ್ಸರೇ ಮಾಡಲಿದ್ದಾರೆ. ಮುಂದೆ ನಿಮ್ಮ ಸಂಪತ್ತಿನ ಲೂಟಿ ಮಾಡಲಿದ್ದಾರೆ. ಅದನ್ನು ತಮ್ಮ ಮತಬ್ಯಾಂಕ್ ಕೊಡಲಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅವರು, ಮೋದಿ ಬದುಕಿರುವವರೆಗೆ ಕಾಂಗ್ರೆಸ್ಸಿಗರ ಈ ಕನಸು ನನಸಾಗದು. ಅವರ ಆಟ ನಡೆಯುವುದಿಲ್ಲ ಎಂದು ಎಚ್ಚರಿಸಿದರು.
ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿ ಹೊಸ ನೀತಿ ತರಲು ಕಾಂಗ್ರೆಸ್ ಮುಂದಾಗಿದೆ. ಮಕ್ಕಳಿಗಾಗಿ ಶೇಖರಿಸಿಟ್ಟ ಹಣ, ಆಸ್ತಿಯನ್ನು ನೀವು ಅವರಿಗೆ ಕೊಡಲು ಸಾಧ್ಯವಾಗದು. ಅದನ್ನು ಮಕ್ಕಳಿಗೆ ಕೊಡಲು ಶೇ. 55ರಷ್ಟು ತೆರಿಗೆ ಪಾವತಿಸಲು ಕಾಂಗ್ರೆಸ್ ಕೇಳಲಿದೆ. ಅದನ್ನು ಮತಬ್ಯಾಂಕ್‌ಗೆ ಹಂಚಲು ನಿಮ್ಮ ಸಂಪತ್ತಿನ ಡಕಾಯಿತಿ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕದ ಜನರ ಆಶೀರ್ವಾದ ಕೇಳಲು ಬಂದಿದ್ದೇನೆ. ಜಗದೀಶ ಶೆಟ್ಟರ್, ಅಣ್ಣಾಸಾಹೇಬ ಜೊಲ್ಲೆ ಅವರನ್ನು ಗರಿಷ್ಠ ಮತದಿಂದ ಚುನಾಯಿಸಿ. ಕಮಲದ ಚಿಹ್ನೆಗೆ ನೀಡಿದ ಮತವು ಮೋದಿಯವರಿಗೆ ಹೋಗಲಿದೆ. ಮೋದಿಯವರನ್ನು ಸಶಕ್ತಗೊಳಿಸಲು ಬಿಜೆಪಿಗೆ ಮತದಾನ ಮಾಡಿ ಎಂದು ವಿನಂತಿಸಿದರು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ರಾಜ್ಯ ಸರ್ಕಾರವು ಸಂಪೂರ್ಣ ದಿವಾಳಿಯಾಗಿದೆ. ಜಗದೀಶ ಶೆಟ್ಟರ್, ಅಣ್ಣಾಸಾಬೇಬ್ ಜೊಲ್ಲೆ ಅವರನ್ನು ಒಂದು ಲಕ್ಷಕ್ಕೂ ಹೆಚ್ಚು ಅಂತರದಲ್ಲಿ ಗೆಲ್ಲಿಸುತ್ತೇವೆ. ರಾಜ್ಯದ ಎಲ್ಲ 28 ಸ್ಥಾನಗಳನ್ನು ಗೆಲ್ಲಿಸಿಕೊಡುತ್ತೇವೆ ಎಂದು ವಿಶ್ವಾಸದಿಂದ ನುಡಿದರು.
ಬಿಜೆಪಿ ಅಭ್ಯರ್ಥಿಗಳಾದ ಜಗದೀಶ ಶೆಟ್ಟರ್, ಅಣ್ಣಾಸಾಬೇಬ್ ಜೊಲ್ಲೆ, ಸಂಸದೆ ಮಂಗಲ ಅಂಗಡಿ, ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಈರಣ್ಣ ಕಡಾಡಿ, ಮಾಜಿ ಸಚಿವರು, ಶಾಸಕರು, ಪಕ್ಷದ ರಾಜ್ಯ- ಜಿಲ್ಲಾ ಪದಾಧಿಕಾರಿಗಳು, ಪಕ್ಷದ ಮುಖಂಡರು ವೇದಿಕೆಯಲ್ಲಿದ್ದರು. ಪ್ರಧಾನಿಯವರ ಕಾರ್ಯಕ್ರಮಕ್ಕೆ ನಿಗದಿತ ಸಮಯಕ್ಕೆ ಮೊದಲೇ ಭಾರಿ ಜನಸಾಗರವೇ ಹರಿದುಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net