ಕಾಂಗ್ರೆಸ್ ಮನೆಗೆ ಹೋಗೋದು ಗ್ಯಾರಂಟಿ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿಮತ

BLY-7-2
Published on

ಬಳ್ಳಾರಿ : ಈ ಬಾರಿ ಕಾಂಗ್ರೆಸ್‌ನವರು ಗ್ಯಾರಂಟಿ ಕಾರ್ಡ್ ವಿತರಿಸುತ್ತಿದ್ದಾರೆ. ಚುನಾವಣೆ ಆದನಂತರ ಗ್ಯಾರಂಟಿ ಮನೆಗೆ ಹೋಗುತ್ತಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದ ಡಾ.ರಾಜ್‌ಕುಮಾರ್ ರಸ್ತೆಯ ಮುನ್ಸಿಪಲ್ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಜಿಲ್ಲಾಮಟ್ಟದ ಫಲಾನುಭವಿಗಳ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ನಾವೂ ಕೊಡುತ್ತೇವೆ ಎಂದು ಹೇಳುವವರಲ್ಲ. ಕೊಟ್ಟು ಕೇಳುತ್ತಿದ್ದೇವೆ. ಕಾಂಗ್ರೆಸ್ ಅಧಿಕಾರದಲ್ಲಿದಾಗ ದೇಶದಲ್ಲಿ ಬಡವರಿಗೆ ವಿದ್ಯುತ್ ಸಿಗುತ್ತಿರಲಿಲ್ಲ. ಆದರೆ ಇಂದು ಬೇರೆಯವರಿಗೆ ನೀಡುವಷ್ಟು ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ ಎಂದರು.

65 ವರ್ಷದ ಅಧಿಕಾರವಧಿಯಲ್ಲಿ ಕಾಂಗ್ರೆಸ್ ದೇಶದಲ್ಲಿ 3 ಕೋಟಿ ಜನರಿಗೆ ನಳ ಸಂಪರ್ಕ ನೀಡಿತ್ತು. ಮೋದಿ ಪ್ರಧಾನಿಯಾದನಂತರ 10 ಕೋಟಿ ಜನರಿಗೆ ನಳ ಸಂಪರ್ಕ ನೀಡಲಾಗಿದೆ. ಅಧಿಕಾರಕ್ಕಾಗಿ ಕಾಂಗ್ರೆಸ್ ನಾಯಕರು ಏನೂ ಬೇಕಾದರೂ ಸುಳ್ಳು ಹೇಳುತ್ತಾರೆ. ಅಧಿಕಾರದಲ್ಲಿದ್ದಾಗ ಯಾಕೆ ಉಚಿತವಾಗಿ ವಿದ್ಯುತ್ ಕೊಡಲಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಪ್ರಶ್ನಿಸಿದರು.

ಛತ್ತೀಸ್‌ಗಡದಲ್ಲಿ ನಿರುದ್ಯೋಗ ಭತ್ಯೆ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದ್ದರು. ಆದರೆ ಈವರೆಗೆ ಕೊಟ್ಟಿಲ್ಲ. ರಾಜಸ್ತಾನದಲ್ಲಿ ಅಧಿಕಾರಕ್ಕೆ ಬಂದು 10 ದಿನದಲ್ಲಿ ಸಾಲಮನ್ನಾ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಆದರೆ ಯಾವುದೇ ಸಾಲಮನ್ನಾ ಆಗಿಲ್ಲ ಎಂದರು.

ದೇಶದಲ್ಲಿ ಬಡವರಿಗೆ ಸಮರ್ಪಿತ ಸರ್ಕಾರ ಸಿದ್ಧಗೊಳ್ಳುತ್ತಿದೆ. ಬಡವರಿಗೆ ವಸತಿ, ಕುಡಿಯುವ ನೀರು, ರಸ್ತೆಬದಿ ವ್ಯಾಪಾರಿಗಳಿಗೆ ಸಾಲ, ರೈತರಿಗೆ ಪಿಎಂ ಕಿಸಾನ್ ಯೋಜನೆ, ರೈತರ ಮಕ್ಕಳಿಗೆ ಸ್ಕಾಲರ್‌ಶಿಪ್ ಹೀಗೆ ಡಬಲ್ ಇಂಜಿನ್ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ದೇಶದಲ್ಲಿ ಮಹಾಮಾರಿ ಕರೊನಾವನ್ನು ದಿಟ್ಟವಾಗಿ ಎದುರಿಸಿದ್ದು ನಮ್ಮ ದೇಶ. ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಲಸಿಕೆ ನೀಡಿದ ದಿನವೇ ಭಾರತದಲ್ಲೂ ಲಸಿಕೆ ನೀಡಿದ ಕೀರ್ತಿ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಗೆ ಸಲ್ಲಬೇಕು ಎಂದರು.

ರಾಹುಲ್‌ಗಾಂಧಿ ವಿರುದ್ಧ ವಾಗ್ದಾಳಿ
ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕರ ದಾಳಿ ಕುರಿತು ರಾಹುಲ್ಗಾಂಧಿ ಅವರು ವಿದೇಶದಲ್ಲಿ ಭಾಷಣ ಮಾಡುತ್ತಾರೆ. ಅದೊಂದು ಕಾರ್ ಬಾಂಬ್ ಸ್ಫೋಟ ಎಂದು ಸಣ್ಣ ಘಟನೆ ಎನ್ನುವ ರೀತಿ ಮಾತನಾಡಿದ್ದಾರೆ. ಅವರ ತಂದೆ ರಾಜೀವ್‌ಗಾಂಧಿ ಹತ್ಯೆ ಮಾಡಿದ ಭಯೋತ್ಪಾದಕರ ಬಗ್ಗೆಯೂ ಹೀಗೆ ಮಾತನಾಡುತ್ತಾರಾ ಎಂದು ಜೋಶಿ ಅವರು ವಾಗ್ದಾಳಿ ನಡೆಸಿದರು.

ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಮಾತನಾಡಿ, ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ತಲುಪಿಸುವಲ್ಲಿ ಯಶಸ್ವಿ ಆಗಿದ್ದೇವೆ ಎಂದರು.
2014ರ ನಂತರ ದೇಶದ ಚುಕ್ಕಾಣಿ ಹಿಡಿದ ಪ್ರಧಾನಿ ಮೋದಿ ಅವರು ಭ್ರಷ್ಟಾಚಾರಮುಕ್ತ ಭಾರತ ನಿರ್ಮಾಣಕ್ಕೆ ನಾಂದಿ ಹಾಡಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆಯುಷ್ಮಾನ್ ಭಾರತ್ ಯೋಜನೆಯಡಿ 5 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ ಎಂದರು.
ದೇಶದಲ್ಲಿ 9 ಕೋಟಿ ಮಹಿಳೆಯರಿಗೆ ಉಜ್ವಲ ಯೋಜನೆ ತಲುಪಿಸಲಾಗಿದೆ. ಜಲಜೀವನ ಯೋಜನೆಯಡಿ ಪ್ರತಿ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಸಿಗುವಂತೆ ಕೆಲಸ ಮಾಡಲಾಗುತ್ತಿದೆ. ಕಾಂಗ್ರೆಸ್ ನಾಯಕರು ಚುನಾವಣೆಗಾಗಿ ಆಶ್ವಾಸನೆ ನೀಡುತ್ತಿದ್ದಾರೆ. ಆದರೆ ನಮ್ಮ ಸರ್ಕಾರ ಅನುಷ್ಠಾನಕ್ಕೆ ತಂದಿದೆ ಎಂದರು.

ಅಭಿವೃದ್ಧಿಯತ್ತ ಬಳ್ಳಾರಿ
ಶಾಸಕ ಜಿ.ಸೋಮಶೇಖರ ರೆಡ್ಡಿ ಮಾತನಾಡಿ, ಬಳ್ಳಾರಿ ನಗರ ಅಭಿವೃದ್ಧಿ ಆಗುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಅನುದಾನ ಹರಿದು ಬರುತ್ತಿದೆ. ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಅತ್ಯುತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದರು. ಶಾಲೆ, ಕಾಲೇಜುಗಳಲ್ಲಿ ಮೂಲ ಸೌಕರ್ಯ, ಸ್ಲಂಗಳ ಅಭಿವೃದ್ಧಿ ಹೀಗೆ ಅನೇಕ ಕೆಲಸಗಳು ಮಾಡಲಾಗುತ್ತಿದೆ ಎಂದು ತಿಳಿಸಿದರು.

10 ಕ್ಷೇತ್ರದಲ್ಲಿ ಕಮಲ ಅರಳಲಿ
ಸಂಸದ ವೈ.ದೇವೇಂದ್ರಪ್ಪ ಮಾತನಾಡಿ, ವಿಜಯನಗರ ಹಾಗೂ ಬಳ್ಳಾರಿ ಅವಳಿ ಜಿಲ್ಲೆಯ 10 ವಿಧಾನ ಸಭೆ ಕ್ಷೇತ್ರದಲ್ಲಿ ಕಮಲವನ್ನು ಅರಳಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು. ಪ್ರಧಾನಿ ಮೋದಿ ಸರ್ಕಾರ ದೇಶದಲ್ಲಿ ಮೆಚ್ಚುವಂತಹ ಕೆಲಸ ಕಾರ್ಯಗಳನ್ನು ಮಾಡುತ್ತಿದೆ. ರಾಜ್ಯದಲ್ಲಿಯೂ ಸಿಎಂ ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಮತ್ತೊಮ್ಮೆ ಬಿಜೆಪಿಗೆ ಅಧಿಕಾರ ನೀಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.

ಎಂಎಲ್‌ಸಿ ವೈ.ಎಂ.ಸತೀಶ್, ಮಾಜಿ ಸಂಸದೆ ಜೆ.ಶಾಂತಾ, ರಾಜ್ಯ ಜವಳಿ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಗುತ್ತಿಗನೂರು ವಿರುಪಾಕ್ಷಗೌಡ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸರ್ವಶೆಟ್ಟಿ ಮಾರುತಿ ಪ್ರಸಾದ್, ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ್ , ಸಹಾಯಕ ಆಯುಕ್ತ ಹೇಮಂತ್‌ಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net