ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಕಾಂಗ್ರೆಸ್

Veerappa Moily
Published on

ಹುಬ್ಬಳ್ಳಿ: ಯಾವುದೇ ಸಂದರ್ಭದಲ್ಲಿ ಲೋಕಸಭಾ ಚುನಾವಣೆ ಬರಲಿ. ಈ ಬಾರಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ತಯಾರಿದೆ. ರಾಷ್ಟ್ರ ಹಾಗೂ ವಿವಿಧ ರಾಜ್ಯದಲ್ಲಿ ಅತಿಹೆಚ್ಚು ಸೀಟ್‌ಗಳನ್ನು ಪಡೆದು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು.
ಮತ್ತೊಂದು ಬಾರಿ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡುವುದೇ ನಮ್ಮ ಗುರಿ ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಮೊಯ್ಲಿ, ಜೆಡಿಎಸ್‌ನವರು ಲೋಕಸಭೆಯಲ್ಲಿ ಎಷ್ಟು ಸೀಟ್ ಗೆಲ್ಲುತ್ತಾರೆ ? ಎಂಬುದು ಮುಖ್ಯ ಎಂದರು.
ಪ್ರಧಾನಿ ಮಾಡಲು ಅವರ ಕೊಡುಗೆ ಏನೆಂಬುದನ್ನು ಮೊದಲು ಜೆಡಿಎಸ್‌ನವರು ಅರ್ಥ ಮಾಡಿಕೊಳ್ಳಬೇಕು. ಅವರಿಗೆ ಬಿಜೆಪಿಯ ಸಹಾಯ ಇಲ್ಲದೇ ಹೋದರೇ ರಾಜಕೀಯದಲ್ಲಿ ಅಸ್ತಿತ್ವವೇ ಇಲ್ಲ ಎಂಬ ಭಾವನೆ ಅವರಲ್ಲಿದೆ. ಹಾಗಾಗಿ ಇಂತಹ ಮಾತುಗಳು ಅವರಿಂದ ಬರುತ್ತಿವೆ ಎಂದು ಕಿಡಿಯಾದರು.
ಈ ಹಿಂದೆ ಜೆಡಿಎಸ್, ಕಾಂಗ್ರೆಸ್‌ದೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಆಗ ಕಾಂಗ್ರೆಸ್ ಬಲದಿಂದ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು. ದೇವೇಗೌಡರು ಕೂಡ ಪ್ರಧಾನಿ ಆಗಿದ್ದರು. ಅವರು ಮಾಡುವುದು ಸ್ವಾರ್ಥಕ್ಕೆ ಹೊರತು, ರಾಜ್ಯ ಹಾಗೂ ದೇಶದ ಹಿತದೃಷ್ಟಿಯಿಂದ ಅಲ್ಲ ಎಂದು ಹರಿಹಾಯ್ದರು.
ಭ್ರಷ್ಟಾಚಾರದ ರಾಯಭಾರಿ ಸಿದ್ದರಾಮಯ್ಯ ಎಂಬ ಆರ್. ಆಶೋಕ ಹೇಳಿಕೆಗೆ ಪ್ರತಿಕ್ರಿಯಿಸಿ, ಈಗಾಗಲೇ ರಾಜ್ಯದ ಜನತೆ ಭ್ರಷ್ಟಾಚಾರ ಮಾಡಿದವರು ಯಾರು ಎಂಬುದಕ್ಕೆ ಸ್ಪಷ್ಟವಾಗಿ ಉತ್ತರ ಕೊಟ್ಟಿದ್ದಾರೆ. ದೇಶದಲ್ಲಿ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದ ಮುಖ್ಯಮಂತ್ರಿ ಯಾರೆಂದರೆ ಯಡಿಯೂರಪ್ಪ ಅವರು ಮಾತ್ರ. ಹೀಗಾಗಿ ಬಿಜೆಪಿಯವರಿಂದ ಭ್ರಷ್ಟಾಚಾರದ ಪಾಠ ಕೇಳಿಸಿಕೊಳ್ಳುವ ಅವಶ್ಯಕತೆ ನಮಗಿಲ್ಲ ಎಂದು ಕುಟುಕಿದರು. ತೆಲಂಗಾಣ ಹಾಗೂ ಕರ್ನಾಟಕದಿಂದ ನಮ್ಮ ಪಕ್ಷದ ಹೆಚ್ಚು ಅಭ್ಯರ್ಥಿಗಳು ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net