ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್‌ಗೆ ಲಾಭ : ಡಾ.ಎಚ್.ಸಿ. ಮಹದೇವಪ್ಪ

Published on

ಮೈಸೂರು: ಬಿಜೆಪಿ-ಜೆಡಿಎಸ್ ಮೈತ್ರಿಯು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಇವರ ಮೈತ್ರಿಯಿಂದ ಕಾಂಗ್ರೆಸ್ ಮತ್ತಷ್ಟು ಗಟ್ಟಿಯಾಗಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಳಒಪ್ಪಂದ ಮಾಡಿಕೊಂಡ ಪರಿಣಾಮ ಮತಗಳು ಒಂದಾಗಿ ಕಾಂಗ್ರೆಸ್‌ಗೆ ಹಲವು ಕ್ಷೇತ್ರಗಳಲ್ಲಿ ಸೋಲುಂಟಾಯಿತು. ಆದರೆ, ಈ ಬಾರಿ ಈ ಎರಡು ಪಕ್ಷಗಳು ಅಧಿಕೃತವಾಗಿ ಒಂದಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಬುದ್ಧ ಮತದಾರರು ಅವರನ್ನು ತಿರಸ್ಕರಿಸುವುದು ನಿಶ್ಚಿತ. ರಾಜ್ಯದಲ್ಲಿ ಕಾಂಗ್ರೆಸ್ ಪ್ರಬಲವಾಗಿದ್ದು, ನಿರೀಕ್ಷೆಯಂತೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದರು.

ದಸರಾದಲ್ಲಿ ಅನಗತ್ಯ ಖರ್ಚುಗಳಿಗೆ ಕಡಿವಾಣ

ದಸರಾದಲ್ಲಿ ಅನಗತ್ಯವಾದ ಖರ್ಚು ಕಡಿಮೆ ಮಾಡಿ ಹಾಗೂ ಹಣಕಾಸು ಸ್ಥಿತಿ ನೋಡಿಕೊಂಡು ಕಾರ್ಯಕ್ರಮಗಳನ್ನು ನಡೆಸಲಾ ಗುವುದು. ಅದ್ಧೂರಿ ಹಾಗೂ ಸರಳವೂ ಅಲ್ಲದ ರೀತಿಯಲ್ಲಿ ಸಾಂಪ್ರದಾಯಿಕವಾಗಿ ದಸರಾ ಆಚರಣೆ ಮಾಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅದ್ದೂರಿ ದಸರಾ ಮಾಡೋಣವೆಂದು ಹೇಳಿದ್ದರು. ಆದರೆ, 120ವರ್ಷಗಳ ನಂತರ ಭೀಕರ ಬರಗಾಲ ಎದುರಾಗಿರುವ ಹಿನ್ನೆಲೆಯಲ್ಲಿ ದಸರಾವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದೆ. ದಸರಾ ಪ್ರಾಯೋಜಕತ್ವದವರು ಮುಂದೆ ಬಂದರೆ ಸಂಪೂರ್ಣ ಬೆಂಬಲ ಕೊಡುತ್ತೇವೆ. ಇಲ್ಲಿಯವರೆಗೆ ಯಾರೂ ಮುಂದೆ ಬಂದಿಲ್ಲ ಎಂದರು.

ಕಾವೇರಿ ವಿಚಾರದಲ್ಲಿ ರಾಜಕೀಯ ಸರಿಯಲ್ಲ

ಕಾವೇರಿ ನೀರಿನ ವಿಚಾರದಲ್ಲಿ ಸತ್ಯಾಂತ ಮರೆಮಾಚಿ ರಾಜಕೀಯ ಮಾಡಬಾರದು. ಬೆಂಗಳೂರು ಬಂದ್ ಶಾಂತಿಯುತವಾಗಿ ಆಚರಿಸಲು ನಮ್ಮದೇನೂ ತಕರಾರು ಇಲ್ಲ. ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ತೊಂದರೆಯಾಗದಂತೆ ಮಾಡಬೇಕು ಎಂದರು.

ಕಾವೇರಿ ನದಿ ನೀರಿನ ವಿಚಾರದಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ, ಕಾವೇರಿ ನೀರು ಸಲಹಾ ಸಮಿತಿ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದೇವು. ನಾವೇನೂ ತಾಂತ್ರಿಕ ತಜ್ಞರಲ್ಲವೆಂದು ಹೇಳಿ ನೀರು ಬಿಡಲು ಹೇಳಿದೆ. ಮೇಕೆದಾಟು ಯೋಜನೆ ವಿಚಾರದಲ್ಲಿ ಸುಪ್ರೀಂಕೋರ್ಟ್ ಮುಕ್ತ ಮನಸ್ಸಿನಿಂದ ಇರುವ ಕಾರಣ ನಮಗೆ ಅನುಕೂಲ ಆಗಬಹುದು ಎಂದು ಹೇಳಿದರು.

ಮೇಕೆದಾಟು ಯೋಜನೆಯಿಂದ 67 ಟಿಎಂಸಿ ನೀರು ಸಿಗಲಿದೆ. ಇದರಿಂದ ಕುಡಿಯುವ ನೀರು, ವಿದ್ಯುತ್ ಉತ್ಪಾದನೆಗೆ ನೆರವಾಗಲಿದೆ. ಕೋರ್ಟ್ ಯೋಜನೆ ಬಗ್ಗೆ ಒಲವು ತೋರಿದಂತೆ ಕಂಡಿರುವುದರಿಂದ ಕರ್ನಾಟಕಕ್ಕೆ ಅನುಕೂಲವಾಗಲಿದೆ ಎಂದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎರಡು ಬಾರಿ ಆಡಳಿತ ಮಾಡಿದವರು. ಕಾನೂನಾತ್ಮಕ ವಿಚಾರಗಳು ಅವರಿಗೂ ಗೊತ್ತಿದೆ. ಹೀಗಿದ್ದರೂ, ರಾಜಕೀಯದ ಮಾತುಗಳನ್ನಾಡುತ್ತಾರೆ ಎಂದು ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net