

ಕರೊನಾ ನಿರ್ವಹಣೆ ವಿಚಾರದಲ್ಲಿ ಆಡಳಿತ-ಪ್ರತಿಪಕ್ಷಗಳ ಕಿತ್ತಾಟ ತಾರಕಕ್ಕೇರಿದ್ದು, ಗುರುವಾರ ಮತ್ತೊಂದು ಸುತ್ತಿನ ಪರಸ್ಪರ ವಾಗ್ದಾಳಿ ನಡೆದಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ಕರೆದು ಕರೊನಾ ನಿರ್ವಹಣೆ ವಿಚಾರದಲ್ಲಿ ಸುಮಾರು 2 ಸಾವಿರ ಕೋಟಿ ರೂ. ಹಗರಣವಾಗಿದೆ ಎಂದು ಆರೋಪಿಸಿ ಚಿವುಟಿದ್ದಾರೆ. ಅದಕ್ಕೆ ಪ್ರತಿಯಾಗಿ ತಕ್ಷಣ ಸುದ್ದಿಗೋಷ್ಠಿ ಕರೆದ ಡಿಸಿಎಂ ಅಶ್ವತ್ಥನಾರಾಯಣ ಹಾಗೂ ಆರು ಸಚಿವರು ಸಮಜಾಯಿಷಿಯ ಪಂಚ್ ನೀಡಿದ್ದಾರೆ.
ಬೆಂಗಳೂರು: ಕರೊನಾ ಹೆಸರಿನಲ್ಲಿ ರಾಜ್ಯ ಸರ್ಕಾರ 4 ತಿಂಗಳಲ್ಲಿ 4,167 ಕೋಟಿ ರೂ. ಖರ್ಚು ಮಾಡಿದೆ. ಅದರಲ್ಲಿ 2 ಸಾವಿರ ಕೋಟಿ ರೂ. ಸಚಿವರು ಹಾಗೂ ಅಧಿಕಾರಿಗಳ ಜೇಬಿಗೆ ಹೋಗಿದ್ದು, ಕೂಡಲೇ ಸರ್ಕಾರ ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಹಾಗೂ ಅಧಿವೇಶನ ಕರೆಯಬೇಕೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಕರೊನಾ ನಿರ್ವಹಣೆ ಹೆಸರಿನಲ್ಲಿ ರಾಜ್ಯ ಸರ್ಕಾರ ಭ್ರಷ್ಟಾಚಾರ ನಡೆಸಿದೆ. ಸರ್ಕಾರ ಪ್ರತಿ ಪೈಸೆ ಖರ್ಚಿಗೂ ಜನರಿಗೆ ಲೆಕ್ಕ ಕೊಡಬೇಕು ಎಂದರು.
ಡಿಸಿಎಂ, ಆರೋಗ್ಯ ಸಚಿವರು 3 ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿ, ಕರೊನಾ ಉಪಕರಣಗಳ ಖರೀದಿಗೆ 324 ಕೋಟಿ ರೂ. ಮಾತ್ರ ಖರ್ಚು ಮಾಡಲಾಗಿದೆ ಎಂದಿದ್ದಾರೆ. ದುಬಾರಿ ದರಗಳಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಕೆಲ ಸಾಮಗ್ರಿಗಳು ಬರಬೇಕಿದ್ದರೂ ಒಪ್ಪಂದದಿಂದಾಗಿ ಹಣ ಪಾವತಿಸ ಬೇಕಾಗುತ್ತದೆ. ಸಚಿವರು ಆರೋಗ್ಯ ಇಲಾಖೆಯಲ್ಲಿ ಪಾವತಿಸಿದ ಹಣದ ಬಗ್ಗೆ ಮಾತ್ರ ಹೇಳಿದ್ದು, ಪಾವತಿಸಬೇಕಾದ್ದರ ಬಗ್ಗೆ ಬಾಯ್ಬಿಟ್ಟಿಲ್ಲ ಎಂದರು.
ಮುಚ್ಚಿಟ್ಟಿದ್ದು ಏಕೆ?: ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಯ ಅರೆಬರೆ ಉತ್ತರ ಬಿಟ್ಟರೆ ಈ ವರೆಗೆ ಬೇರೆ ಇಲಾಖೆಗಳಿಗೆ ಬರೆದ ಪತ್ರಗಳಿಗೆ ಉತ್ತರ ಬಂದಿಲ್ಲ. ಸರ್ಕಾರ ಪ್ರಾಮಾಣಿಕವಾಗಿದ್ದರೆ, ಮುಚ್ಚಿಡುವ ಯತ್ನವೇಕೆೆ? ನಾನು ಮಾಹಿತಿ ಸಂಗ್ರಹಿಸಿದರೆ ಸುಳ್ಳು ಎನ್ನುತ್ತೀರಿ. ಹಾಗಾದರೆ ನೀವೇ ಸತ್ಯ ಬಹಿರಂಗ ಮಾಡಿ ಎಂದು ಆಡಳಿತ ಪಕ್ಷಕ್ಕೆ ಸಿದ್ದರಾಮಯ್ಯ ಸವಾಲು ಎಸೆದಿದ್ದಾರೆ.
ಹೇಳುವುದೊಂದು...
ಬಿ.ಎಲ್. ಸಂತೋಷ್ ಸ್ವದೇಶಿ, ಸ್ವಾವಲಂಬನೆ ಎಂದು ಭಾಷಣ ಮಾಡುತ್ತಾರೆ. ಅವರದೇ ಸರ್ಕಾರ ಚೀನಾದಿಂದ 3 ಲಕ್ಷ ಪಿಪಿಇ ಕಿಟ್ ಖರೀದಿಸಿದೆ. ದೇಶದ ಸೈನಿಕರು ಸತ್ತರೂ ಇವರು ಅವರಿಂದ ಕಿಟ್ ಖರೀದಿಸುತ್ತಾರೆ. ಇವರು ಹೇಳುವುದೊಂದು, ಮಾಡುವುದೊಂದು ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.
ಕೋವಿಡ್-19 ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಸೋಂಕಿತರ ಹೆಣದ ಮೇಲೆ ಹಣ ಮಾಡಲು ಸರ್ಕಾರ ಹೊರಟಿದೆ. ಮುಖ್ಯಮಂತ್ರಿಗಳೇ.. ಇದನ್ನು ನೋಡಿಕೊಂಡು ನಾವು ಸುಮ್ಮನಿರಬೇಕೇ? ಕೋಟ್ಯಂತರ ರೂಪಾಯಿ ಸಾಲ ಪಡೆದಿದ್ದೀರಿ. ಹಾಗಾದರೆ ಕೇಂದ್ರದ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಏನಾಯ್ತು? ರಾಜ್ಯಕ್ಕೆ ಕೇಂದ್ರದ ಕೊಡುಗೆ ಏನು? 21 ದಿನದಲ್ಲಿ ಕರೊನಾ ತೊಡೆದು ಹಾಕುತ್ತೇವೆಂದು ಮಹಾಭಾರತ ಉಲ್ಲೇಖಿಸಿ ಹೇಳಿದ್ದು, ಈಗ ಇವರನ್ನು ಕಲಿಯುಗದ ಕೌರವರ ಲೂಟಿ ಎಂದು ಕರೆಯೋಣವೇ? | ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ
ಸಿದ್ದರಾಮಯ್ಯ-ಡಿಕೆಶಿ ಪ್ರಶ್ನೆಗಳು
ಹಳೇ ಪಕ್ಷ, ಆಡಳಿತ ಪಕ್ಷ ಕೆಸರೆರಚಾಟ ನಿಲ್ಲಿಸಬೇಕು. ಕರೊನಾ ನಿಗ್ರಹಿಸುವುದಕ್ಕೆ ನಮ್ಮ ಬೆಂಬಲ, ನಿಮ್ಮ ಕ್ಷುಲ್ಲಕ ನಡವಳಿಕೆಗಳಿಗಲ್ಲ. ಅಕ್ರಮ ನಿಜವೇ ಆಗಿದ್ದರೆ ಅದು ಆಡಳಿತ ಪಕ್ಷದ ಮನುಷ್ಯತ್ವ ಹೀನ ಕೃತ್ಯ. ಕೇವಲ ಸುದ್ದಿಯಲ್ಲಿರಬೇಕು ಎಂಬ ಕಾರಣಕ್ಕೆ ಹಳೇ ರಾಷ್ಟ್ರೀಯ ಪಕ್ಷದ ನಾಯಕರು ಆರೋಪಿಸುತ್ತಿದ್ದರೆ ಅದು ಅವರ ರಾಜಕೀಯ ದಾಹದ ಪ್ರತೀಕ. | ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ
ಸರ್ಕಾರದ ಖರ್ಚುಗಳ ವಿವರ...
ಸಲಕರಣೆಗಳ ಖರೀದಿ: 506 ಕೋಟಿ ರೂ. ತುರ್ತು ಅಗತ್ಯ, ಬಾಧಿತರಿಗೆ ಪರಿಹಾರ: 1,611.11 ಕೋಟಿ ರೂ. ಕರೊನಾ ನಿರ್ವಹಣೆಗೆ ಮಾರ್ಚ್ನಿಂದ ಈವರೆಗೆ ಒಟ್ಟು ವೆಚ್ಚ: 2,118.27 ಕೋಟಿ ರೂ. (ಜಿಲ್ಲಾ ಆಡಳಿತ, ಆರೋಗ್ಯ, ವೈದ್ಯಕೀಯ ಶಿಕ್ಷಣ, ಪೊಲೀಸ್, ಕಾರಾಗೃಹ, ಬಿಬಿಎಂಪಿ ಖರ್ಚು-ವೆಚ್ಚಗಳು ಒಟ್ಟು ವ್ಯಯವಾದ ಮೊತ್ತ)
ಇಲಾಖೆವಾರು ವಿಂಗಡಣೆ:
ಚೀನಾದಿಂದ ವೆಂಟಿಲೇಟರ್ ಆಮದು ಮಾಡಿಕೊಳ್ಳಿರಿ ಎಂದು ಆವಾಗ ಸದನದಲ್ಲಿ ಒತ್ತಾಯಿಸಿದವರು, ಈಗ ಅಲ್ಲಿಂದ ತರಿಸಿಕೊಂಡಿದ್ದೇಕೆ? ಎಂದು ಕೇಳುತ್ತಿದ್ದಾರೆ. ಸ್ಪರ್ಧಾತ್ಮಕ ಬೆಲೆಯಲ್ಲಿ ಅದನ್ನು ಖರೀದಿ ಮಾಡಿದ್ದರೂ ದುಬಾರಿಯಾಯಿತು ಎಂದು ಹೇಳುತ್ತಿದ್ದಾರೆ. 2019ರ ಜನವರಿಯಲ್ಲಿ 21 ಲಕ್ಷ ರೂ.ಗೆ 9 ವೆಂಟಿಲೇಟರ್, 15 ಲಕ್ಷ ರೂ.ಗೆ 2 ಹಂತದಲ್ಲಿ 28 ಮತ್ತು 9 ವೆಂಟಿಲೇಟರ್ ಖರೀದಿಸಲಾಗಿದೆ. ಆವಾಗ ಚಂದ್ರಲೋಕದಿಂದ ತಂದರೇ ಅಥವಾ ಕರೊನಾ ಕಷ್ಟ ಕಾಲವಿತ್ತೇ? | ಆರ್.ಅಶೋಕ್ ಕಂದಾಯ ಸಚಿವ
ಕರೊನಾ ನಿರ್ವಹಣೆಯಲ್ಲಿ ನಯಾಪೈಸೆಯೂ ದುರ್ಬಳಕೆಯಾಗಿಲ್ಲ. ಪರಿಕರಗಳ ಖರೀದಿಯೂ ಸೇರಿ ಈವರೆಗೆ ಖರ್ಚಾಗಿರುವುದೇ 2,118.27 ಕೋಟಿ ರೂ. ಮಾತ್ರ. ಇನ್ನು 2000 ಕೋಟಿ ರೂ. ಅಕ್ರಮ ಎಲ್ಲಿಂದ? ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಪ್ರತಿಪಕ್ಷದ ಆರೋಪದ ಬೆನ್ನಿಗೇ ಸುದ್ದಿಗೋಷ್ಠಿ ಕರೆದ ಡಿಸಿಎಂ ಡಾ. ಅಶ್ವತ್ಥನಾರಾಯಣ್, ಸಚಿವರಾದ ಆರ್. ಅಶೋಕ್, ಬಿ. ಶ್ರೀರಾಮುಲು, ಬಸವರಾಜ ಬೊಮ್ಮಾಯಿ, ಡಾ.ಕೆ. ಸುಧಾಕರ್, ಶಿವರಾಮ ಹೆಬ್ಬಾರ್ ಕಾಂಗ್ರೆಸ್ನ ಆರೋಪ ಸುಳ್ಳಿನ ಕಂತೆ ಎಂದು ದಾಖಲೆ ಸಹಿತ ವಾಗ್ದಾಳಿ ನಡೆಸಿದರು. ದೀರ್ಘಾವಧಿ ಆಡಳಿತ ನಡೆಸಿ, ಸಾವಿರಾರು ಹಗರಣಗಳನ್ನೆಸಗಿ ಲೂಟಿ ಹೊಡೆದವರು, ತುರ್ತು ಆರೋಗ್ಯ ಪರಿಸ್ಥಿತಿಗೆ ಸ್ಪಂದಿಸುವ ಬದಲಿಗೆ ಜನರಲ್ಲಿ ವಿಷಬೀಜ ಬಿತ್ತಿ, ದಿಕ್ಕು ತಪ್ಪಿಸಲು ಮುಂದಾಗಿದ್ದಾರೆ ಎಂದು ಹರಿಹಾಯ್ದರು. ಈಗ ಜನರ ಜೀವ-ಜೀವನ ರಕ್ಷಣೆಯೇ ಮುಖ್ಯ. ಪ್ರತಿಪಕ್ಷಗಳು ಸೇರಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡು ಹೋಗೋಣ ಎಂಬುದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಇಚ್ಛೆ. ಆದರೆ ಪ್ರತಿಪಕ್ಷ ಇದನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಕಿಡಿಕಾರಿದರು. ಆರೋಗ್ಯ ಇಲಾಖೆ ಈಗಾಗಲೇ ಎಲ್ಲ ಲೆಕ್ಕಪತ್ರ ಕೊಟ್ಟ ಬಳಿಕವೂ ಮತ್ತೆ ಸರ್ಕಾರದ ಮೇಲೆ ದಾಖಲೆರಹಿತ ಆಪಾದನೆ ಹೊರಿಸಲಾಗಿದೆ. ಮಾನವೀಯತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿರುವ ಸರ್ಕಾರಕ್ಕೆ ಬೆನ್ನು ತಟ್ಟುವುದು ಬೇಡ, ಬೆನ್ನಿಗೆ ಇರಿಯುವ ಕೆಲಸ ಮಾಡಬಾರದು ಎಂದು ಸಚಿವರು ಕುಟುಕಿದರು.
ಪ್ರತಿಪಕ್ಷ ನಾಯಕರಿಗೆ ಪ್ರಸ್ತಾವನೆ, ಅನುಮೋದನೆ, ಖರ್ಚು, ಮಂಜೂರು, ಗೊತ್ತಿಲ್ಲದಿದ್ದರೆ ಹೇಗೆ? ವೈದ್ಯಕೀಯ ಕಾಲೇಜುಗಳನ್ನು ಮೇಲ್ದರ್ಜೆಗೆ ಏರಿಸಲು 815 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಅದನ್ನೇ ವೆಚ್ಚ ಎಂದಿದ್ದು ನಾಚಿಕೆಗೇಡು. | ಡಾ.ಕೆ.ಸುಧಾಕರ್ ವೈದ್ಯಕೀಯ ಶಿಕ್ಷಣ ಸಚಿವ ಕಾಂಗ್ರೆಸ್ನಲ್ಲಿ ಲೀಡರ್ಗಿರಿಗೆ ಪೈಪೋಟಿ ನಡೆದಿದೆ. ಸುಳ್ಳು ಆರೋಪಗಳಿಗೆ ತನಿಖೆ ಮದ್ದಲ್ಲ. ಅಮಾನವೀಯ, ಕೀಳುಮಟ್ಟದ ರಾಜಕಾರಣ, ಕರೊನಾ ಬೆಂಕಿಯಲ್ಲಿ ರೊಟ್ಟಿ ಸುಟ್ಟುಕೊಳ್ಳುವ ಪ್ರಯತ್ನವಿದು. | ಬಸವರಾಜ ಬೊಮ್ಮಾಯಿ ಗೃಹ ಸಚಿವ ಕರೊನಾ ಕೆಲಸ ಬಿಟ್ಟು ಲೆಕ್ಕ ಒಪ್ಪಿಸುವು ದನ್ನೇ ಮಾಡಬೇಕೇ? ಸದನದಲ್ಲಿ ಎಲ್ಲದಕ್ಕೂ ಉತ್ತರಿಸಲು ಸರ್ಕಾರ ಸಿದ್ಧವಿದೆ. ಹಾಗೇ ಅವರ ಅವ್ಯವಹಾರಗಳ ಲೆಕ್ಕವನ್ನೂ ಬಿಚ್ಚಿಡುತ್ತೇವೆ. | ಡಾ.ಸಿ.ಎನ್.ಅಶ್ವತ್ಥನಾರಾಯಣ ಉಪ ಮುಖ್ಯಮಂತ್ರಿ