ಹಾಸನ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ

k.s.anand- congress Kadur
ಕೆ.ಎಸ್.ಆನಂದ್
Published on

ಕಡೂರು: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ. ಶ್ರೇಯಸ್ ಮೇಲಿನ ಅಭಿಮಾನ ಮತ್ತು ಪ್ರಜ್ವಲ್ ಅವರ ಜನ ವಿರೋಧಿ ಅಲೆಯಿಂದ ಈ ಬಾರಿ ಚುನಾವಣೆ ಜನಪರ ಮತ್ತು ಜನವಿರೋಧಿ ನೀತಿ ನಡುವೆ ನಡೆಯಲಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಪಟ್ಟಣಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ 18ರಿಂದ 20 ಸ್ಥಾನ ಪಡೆಯುವುದು ನಿಶ್ಚಿತ. ಚುನಾವಣೆ ನಂತರ ಜೆಡಿಎಸ್ ಧೂಳೀಪಟವಾದರೂ ಅಚ್ಚರಿಯಿಲ್ಲ. ಕಡೂರು ಕ್ಷೇತ್ರದಲ್ಲಿ ಶ್ರೇಯಸ್ ಪಟೇಲ್‌ಗೆ ಹೆಚ್ಚು ಮತಗಳು ದೊರೆಯುವ ವಿಶ್ವಾಸವಿದೆ ಎಂದರು.
ಪ್ರಬುದ್ದ ರಾಜಕಾರಣಿ ವೈ.ಎಸ್.ವಿ.ದತ್ತ ಕೋಮುವಾದಿ ಪಕ್ಷದ ಬಿಜೆಪಿ ಶಾಲು ಹಾಕಿಕೊಳ್ಳುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಪದೇ ಪದೇ ಕೋಮುವಾದಿ ಪಕ್ಷ ವಿರೋಧಿಸುತ್ತಿದ್ದ ಅವರು ಈಗ ತಾವೇ ಕೋಮುವಾದಿಯಾದರೆ ಎಂಬ ಪ್ರಶ್ನೆ ಎದುರಾಗಿದೆ. ಮೈತ್ರಿಯಾಗಿದ್ದರೂ ಜೆಡಿಎಸ್ ಚಿಹ್ನೆ ಪರವಾಗಿ ಬಿಜೆಪಿ ಕಾರ್ಯಕರ್ತರು ದುಡಿಯುತ್ತಾರೆ ಎಂಬ ಖಾತ್ರಿಯಿಲ್ಲ ಎಂದು ಹೇಳಿದರು.
ಕಾಂಗ್ರೆಸ್‌ನ ಐದು ಗ್ಯಾರಂಟಿ ಯೋಜನೆಗಳ ಯಶಸ್ಸು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪೂರಕವಾಗಲಿದೆ. ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜನರನ್ನು ತಲುಪಿಲ್ಲ ಎನ್ನುವ ವಿರೋಧ ಪಕ್ಷದವರು ತಮ್ಮ ಕ್ಷೇತ್ರದಲ್ಲಿಯೇ ಸಮೀಕ್ಷೆ ನಡೆಸಿ ವಾಸ್ತವಾಂಶ ಅರಿಯಲಿ. ಈ ಬಾರಿ ಹಾಸನ ಕ್ಷೇತ್ರ ಹೊಸತನಕ್ಕೆ ಮುನ್ನುಡಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net