

ಬಳ್ಳಾರಿ: ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಇಲ್ಲಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಮುನ್ನಡೆ ಸಾಧಿಸಿದೆ.
ಬಿಜೆಪಿ ವಿರೋಧ ಪಕ್ಷದ ಸ್ಥಾನಕ್ಕೆ ಕೂರುವಲ್ಲಿ ಸೀಮಿತವಾಗಿದೆ. ಇನ್ನೂ ಜೆಡಿಎಸ್ ಸ್ಪರ್ಧೆ ಮಾಡಿದ ಆರು ವಾರ್ಡ್‌ಗಳಲ್ಲಿ ಒಂದರಲ್ಲಿಯೂ ಗೆಲ್ಲದೇ ಶೂನ್ಯ ಸಾಧನೆ ಮಾಡಿದೆ. ಒಟ್ಟು ಕಾಂಗ್ರೆಸ್ 21, ಬಿಜೆಪಿ 13 ಮತ್ತು ಪಕ್ಷೇತರರು ಐವರು ಗೆಲ್ಲುವ ಮೂಲಕ ಮಹಾನಗರ ಪಾಲಿಕೆ ಪ್ರವೇಶ ಮಾಡಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ಅಧಿಕಾರಿ ಉಳಿಸಿಕೊಳ್ಳಬೇಕೆಂಬ ಕಾಂಗ್ರೆಸ್‌ನ ಹಠ ಕೈಗೂಡಿದ್ದು, ಸಚಿವರಾದ ಶ್ರೀರಾಮುಲು, ಆನಂದ ಸಿಂಗ್ ಮತ್ತು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರೆಡ್ಡಿ ಅವರೊಂದಿಗೆ ಅಬ್ಬರದ ಪ್ರಚಾರ ನಡೆಸಿದ್ದ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ.
ಕಾಂಗ್ರೆಸ್‌ನಿಂದ ಟಿಕೆಟ್ ಸಿಗದೆ ಪಕ್ಷೇತರರಾಗಿ ಸ್ಪರ್ಧಿಸಿದ್ದ 3ನೇ ವಾರ್ಡ್‌ನ ಪ್ರಭಂಜನಕುಮಾರ್, 15ನೇ ವಾರ್ಡ್‌ನ ನೂರ ಅಹ್ಮದ್, 17ನೇ ವಾರ್ಡ್‌ನ ಕವಿತಾ ಕೆ.ಹೊನ್ನಪ್ಪ, 32ನೇ ವಾರ್ಡ್‌ನ ಮಂಜುಳಾ, 35ನೇ ವಾರ್ಡ್‌ನ ವಿ.ಶ್ರೀನಿವಾಸಲು ಅತ್ಯಧಿಕ ಮತಗಳಿಂದ ಗೆದ್ದಿದ್ದಾರೆ. ಈ ಐದು ವಾರ್ಡ್‌ಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವಿನ ದಡ ಮುಟ್ಟಲು ಸಾಧ್ಯವಾಗದೆ ಪರದಾಡಿದ್ದಾರೆ.
ಶಾಸಕರ ಪುತ್ರ, ಮಾಜಿ ಸಂಸದರ ಪುತ್ರಿಗೆ ಸೋಲು
ಬಳ್ಳಾರಿ ಪಾಲಿಕೆ ಚುನಾವಣೆಯಲ್ಲಿ ಹೈ ವೋಲ್ಟೇಜ್ ಕ್ಷೇತ್ರವೆಂದೇ ಪರಿಗಣಿತವಾಗಿದ್ದ ನಗರದ 18ನೇ ವಾರ್ಡ್ ಮತ್ತು 39ನೇ ವಾರ್ಡ್‌ನಲ್ಲಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಪುತ್ರ ಶ್ರವಣಕುಮಾರ್ ಹಾಗೂ ಬಿಜೆಪಿಯ ವಾಜಿ ಸಂಸದ ಸಣ್ಣ ಫಕೀರಪ್ಪ ಅವರ ಮಗಳು ಉವಾದೇವಿಗೆ ಸೋಲಾಗಿದೆ. 18ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮುಖಂಡ ಮೂಲಂಗಿ ರವಿಯವರ ಪುತ್ರ ಮೂಲಂಗಿ ನಂದೀಶ್ 128ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 39ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಮುಖಂಡ ಜಗನ್ನಾಥ ಪತ್ನಿ ಶಶಿಕಲಾ 3003 ಮತಗಳೊಂದಿಗೆ ಗೆಲುವು ಕಂಡಿದ್ದಾರೆ. 4ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನಿಂದ 22ವರ್ಷದ ಯುವತಿ ಚುನಾಯಿತಳಾಗಿದ್ದಾಳೆ.