

ಮೈಸೂರು: ಹೊಂದಾಣಿಕೆ ರಾಜಕಾರಣದ ಕುರಿತು ಮಾತನಾಡುವ ಸಂಸದ ಪ್ರತಾಪ್ ಸಿಂಹ 2014ರಲ್ಲಿ ಹೇಗೆ ಗೆಲುವು ಸಾಧಿಸಿದರು? ಅವರ ಗೆಲುವಿಗೆ ಯಾರು ಬೆಂಬಲ ನೀಡಿದರು? ಯಾವ ಪಕ್ಷದವರ ಕಾಲು ಹಿಡಿದುಕೊಂಡರು? 2019ರಲ್ಲಿ ಹೇಗೆ ಗೆಲುವು ಸಾಧಿಸಿದರು ಎಂಬುದನ್ನು ಬಹಿರಂಗ ಪಡಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆಗ್ರಹಿಸಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಹೊಂದಾಣಿಕೆಯ ರಾಜಕಾರಣ ಮಾಡುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ಆರೋಪಿಸಿದ್ದಾರೆ. ಹೊಂದಾಣಿಕೆ ಮಾಡಿಕೊಂಡ ಬಿಜೆಪಿ ನಾಯಕರ ಹೆಸರನ್ನು ಪ್ರತಾಪ್ ಸಿಂಹ ಬಹಿರಂಗ ಪಡಿಸಲಿ. 2018ರ ವಿಧಾನಸಭಾ ಚುನಾವಣೆ ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಪತ್ನಿ ಅರ್ಪಿತಾ ಚುನಾವಣಾ ಪ್ರಚಾರ ನಡೆಸಿದರು. ಆದರೆ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅವರು ಏತಕ್ಕೆ ಚುನಾವಣಾ ಪ್ರಚಾರ ನಡೆಸಲಿಲ್ಲ? ಪ್ರತಾಪ್ ಸಿಂಹ ಅಡ್ಜಸ್ಟ್‌ಮೆಂಟ್ ರಾಜಕಾರಣ ಮಾಡಿರುವುದೇ ಇದಕ್ಕೆ ಕಾರಣ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಚುನಾವಣಾ ಪ್ರಚಾರ ನಡೆಸಲು ಹೆಚ್ಚು ಆಸಕ್ತಿ ತೋರದೆ ಇರಲು ಕಾರಣವೇನು? ವರುಣ ಕ್ಷೇತ್ರದಲ್ಲಿ ಹೆಚ್ಚು ಪ್ರಚಾರ ಮಾಡಲು ಕಾರಣ ಏನು? ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಾಪ್ ಸಿಂಹ ಹೊಂದಾಣಿಕೆಯ ರಾಜಕಾರಣ ಮಾಡಿದರಾ ಎಂಬುದನ್ನು ಬಹಿರಂಗ ಪಡಿಸಬೇಕು. ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರತಾಪ್ ಸಿಂಹ ಕಾರ್ಯ ಏನು? ಮೈಸೂರು ವಿಶ್ವವಿದ್ಯಾಲಯದಲ್ಲಿ ಬ್ಲಾೃಕ್‌ಮೇಲ್ ಮಾಡುವ ಕಾರ್ಯವನ್ನು ಅವರು ಮಾಡುತ್ತಿದ್ದಾರೆ ಆರೋಪಿಸಿದರು.
2024ರ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ರಾಜಕೀಯ ಜೀವನ ಅಂತ್ಯಗೊಳ್ಳುತ್ತದೆ. ನಿಮ್ಮನ್ನು ಸೋಲಿಸುವ ಕೆಲಸವನ್ನು ಬಿಜೆಪಿಯವರೇ ಮಾಡುತ್ತಾರೆ. ನಿಮ್ಮ ಜತೆಗೆ ಯಾವ ಒಬ್ಬ ನಾಯಕರೂ ಬರಲ್ಲ. ಪಿರಿಯಾಪಟ್ಟಣ, ಚಾಮುಂಡೇಶ್ವರಿ, ಹುಣಸೂರು ಭಾಗಕ್ಕೆ ಹೋಗಿ ಸುದ್ದಿಗೋಷ್ಠಿ ನಡೆಸಿ ನೋಡೋಣ, ಅಲ್ಲಿ ಹೋದ ತಕ್ಷಣ ನಿಮ್ಮ ಕಾರ್ಯಕರ್ತರು ನಿಮಗೆ ಹೊಡೆಯುತ್ತಾರೆ. ಮಡಿಕೇರಿಗೆ ಪ್ರತಾಪ್ ಸಿಂಹ ಯಾವಾಗ ಬರುತ್ತಾರೆ ಅಂತ ಮಾಜಿ ಶಾಸಕರಾದ ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಕಾದು ಕುಳಿತಿದ್ದಾರೆ. ಅದೇ ರೀತಿ ಮೈಸೂರಿನಲ್ಲಿ ಮಾಜಿ ಶಾಸಕ ಎಲ್. ನಾಗೇಂದ್ರ ಕಾಯುತ್ತಿದ್ದಾರೆ. ಹೊಂದಾಣಿಕೆ ರಾಜಕೀಯ ಮಾಡುತ್ತಿರುವ ಪ್ರತಾಪ್ ಸಿಂಹ ನಿಮಗೆ ಇವರೆಲ್ಲ ಚಳಿ ಬಿಡಿಸುತ್ತಾರೆ ಎಂದು ಎಚ್ಚರಿಸಿದರು.
ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿರುವುದು ರಾಜ್ಯದ ದುತಂತ. ಸಂಸದ ಪ್ರತಾಪ್ ಸಿಂಹ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಮಾಜಿ ಸಚಿವ ಆರ್. ಅಶೋಕ್ ಕಾಂಗ್ರೆಸ್ ಪಕ್ಷವನ್ನು ವಿರುದ್ಧ ವಿನಾಕಾರಣ ಟೀಕಿಸುತ್ತಿದ್ದಾರೆ. ಚುನಾವಣೆ ಸೋತ ದಿನದಿಂದ ಕಾಂಗ್ರೆಸ್ ವಿರುದ್ಧ ದಾಳಿ ನಡೆಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಘೋಷಿಸಿದ ಪ್ರಕಾರ 10 ಕೆ.ಜಿ. ಅಕ್ಕಿ ಕೊಡಲಿಲ್ಲ ಅಂದರೆ ಪ್ರತಿಭಟನೆ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಎಚ್ಚರಿಸುತ್ತಿದ್ದಾರೆ. ನಿಮಗೆ ನಾಚಿಕೆ ಆಗಬೇಕು. ಈಚೆಗೆ ಬಂದರೆ ಜನರು ನಿಮಗೆ ಕ್ಯಾಕರಿಸಿ ಉಗಿತಾರೆ. ಗ್ಯಾರಂಟಿ ಯೋಜನೆ ಜಾರಿ ಮಾಡಲು ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕಾಗಿಲ್ಲ. ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ಬಡ ಬಗ್ಗರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ. ಬೇರೆ ಬೇರೆ ರಾಜ್ಯದಲ್ಲಿ ನಾವು ಅಕ್ಕಿ ಖರೀದಿ ಮಾಡುತ್ತೇವೆ. ಅದಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿದೆ. ವಿದ್ಯುತ್ ದರ ಹೆಚ್ಚಾಗಿದೆ ಅಂತ ಬಿಜೆಪಿಯವರು ನಮ್ಮ ಮೇಲೆ ಸುಳ್ಳು ಹೇಳುತ್ತಿದ್ದಾರೆ. ದರ ಏರಿಕೆ ಆಗಿರುವುದು ಬಿಜೆಪಿಯವರ ಅಧಿಕಾರದಲ್ಲಿದ್ದಾಗ ಎಂದರು.