

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಾಂಗ್ರೆಸ್ ಸರ್ಕಾರ ತನ್ನ ಅವೈಜ್ಞಾನಿಕ ನೀತಿ ಹಾಗೂ ಅಸಮರ್ಥ ಆಡಳಿತದಿಂದ ರಾಜ್ಯವನ್ನು ಆರ್ಥಿಕ ನಾಶದತ್ತ ತಳ್ಳುತ್ತಿದೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಟೀಕಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಾಂಗ್ರೆಸ್ ಸರ್ಕಾರ ಅವೈಜ್ಞಾನಿಕ ಯೋಜನೆಗಳಿಗೆ ಹಣ ಒದಗಿಸಲು ಕೇವಲ 12 ವಾರಗಳಲ್ಲಿ 2.48 ಲಕ್ಷ ಕೋಟಿ ರೂ. ಸಾಲ ಪಡೆಯುವ ಮೂಲಕ ತನ್ನ ಅಸಮರ್ಥತೆ ಪ್ರದರ್ಶಿಸಿದೆ. ಈ ಹಣ ಎಲ್ಲಿ ಹೋಗುತ್ತಿದೆ? ಕೈಗಾರಿಕೆಗಳಿಗಂತೂ ಅಲ್ಲ. ಏಕೆಂದರೆ ಅವೆಲ್ಲ ಬೇರೆ ರಾಜ್ಯಗಳಿಗೆ ಪಲಾಯನವಾಗುತ್ತಿವೆ. ಅಭಿವೃದ್ಧಿಗಳಿಗೆ ಎನ್ನಲು ರಾಜ್ಯದಲ್ಲಿ ಅಂತಹ ಅಭಿವೃದ್ಧಿಗಳೇನೂ ಕಾಣಿಸುತ್ತಿಲ್ಲ. ಬದಲಾಗಿ ಕಾಂಗ್ರೆಸ್ಸಿನ ದುರಾಡಳಿತದಿಂದ ರಾಜ್ಯದ ಪ್ರತಿಯೊಬ್ಬ ಪ್ರಜೆ ದಿನೇ ದಿನೇ ಬೇಸತ್ತು ಹೋಗಿರುವುದು ಸ್ಪಷ್ಟವಾಗಿದೆ. ಸರ್ಕಾರ ಬಾಕಿ ಉಳಿಸಿಕೊಂಡಿರುವ ಮೊತ್ತ ರಾಜ್ಯದ ಒಟ್ಟು ಉತ್ಪಾದನೆಯ ಶೇ. 24 ಕ್ಕಿಂತ ಜಾಸ್ತಿಯಾಗಿದೆ. ಹೊಸ ಸಾಲದ ಅರ್ಧದಷ್ಟು ಹಣ ಹಳೇ ಸಾಲಗಳ ತೆರವಿಗೆ ವಿನಿಯೋಗಿಸುತ್ತಿರುವುದು ನಾಚಿಕೆಗೇಡು ಎಂದು ಸರ್ಕಾರದ ವಿರುದ್ಧ ಕಿಡಿಕಾರಿರುವ ಬೆಲ್ಲದ, ಇದು ಕರ್ನಾಟಕದ ಆರ್ಥಿಕತೆಗೆ ಟೈಮ್ ಬಾಂಬ್ ಇದ್ದಂತೆ ಎಂದು ಎಚ್ಚರಿಸಿದ್ದಾರೆ.