ರಾಜ್ಯಪಾಲರ ವಿರುದ್ಧ ಬೀದಿಗಿಳಿದ ಕಾಂಗ್ರೆಸ್

19 ckm 2
ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅವಕಾಶ ನೀಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಗಾಯತ್ರಿ ಶಾಂತೇಗೌಡ, ರೇಖಾ ಹುಲಿಯಪ್ಪಗೌಡ, ಮಹಡಿಮನೆ ಸತೀಶ್, ಎಚ್.ಎಚ್.ದೇವರಾಜ್, ಡಾ.ಡಿ.ಎಲ್.ವಿಜಯ್‌ಕುಮಾರ್, ಎಂ.ಎಲ್.ಮೂರ್ತಿ, ಎಚ್.ಪಿ.ಮಂಜೇಗೌಡ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅವಕಾಶ ನೀಡಿರುವುದನ್ನು ಖಂಡಿಸಿ ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಶನಿವಾರ ಸಖರಾಯಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರದ ಏಜೆಂಟರAತೆ ರಾಜ್ಯಪಾಲರು ವರ್ತಿಸುತ್ತಿದ್ದಾರೆ. ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಬೇಕು ಎಂಬ ಕಾರಣದಿಂದ ಕೇಂದ್ರ ಸರ್ಕಾರ ರಾಜ್ಯಪಾಲರ ಮೂಲಕ ಪ್ರಯತ್ನ ಪಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ೪೦ ವರ್ಷಗಳ ರಾಜಕೀಯ ಜೀವನದಲ್ಲಿ ಒಂದೂ ಕಪ್ಪುಚುಕ್ಕಿ ಅಂಟಿಸಿಕೊAಡಿಲ್ಲದAತಹ ಸ್ವಚ್ಚ ರಾಜಕಾರಣಿ. ಇಂಥವರನ್ನು ಅಧಿಕಾರದಿಂದ ಇಳಿಸಲು ರಾಜ್ಯಪಾಲರ ಮೂಲಕ ಬಿಜೆಪಿ-ಜೆಡಿಎಸ್ ಷಡ್ಯಂತ್ರ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
೫ ಜನಪರ ಗ್ಯಾರಂಟಿ ಯೋಜನೆಗಳ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನ ೧೩೬ ಸ್ಥಾನಗಳನ್ನು ನೀಡಿ ಜನಾದೇಶದ ಆಶೀರ್ವಾದ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿ ಅಧಿಕಾರ ನಡೆಸುತ್ತಿದ್ದಾರೆ. ಇದನ್ನು ಸಹಿಸದ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಕುತುಂತ್ರ ರಾಜಕಾರಣದಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು.
ದೇಶದ ವಿವಿಧ ರಾಜ್ಯಗಳಲ್ಲಿ ಬಿಜೆಪಿಯೇತರ ಮುಖ್ಯಮಂತ್ರಿಗಳ ವಿರುದ್ಧ ಕೇಂದ್ರಸರ್ಕಾರ ಹಸ್ತಕ್ಷೇಪ ಮಾಡುತ್ತ ಪಿತೂರಿ ಮಾಡುತ್ತಿದೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿಲ್ಲ. ಇವರ ಬಗ್ಗೆ ಆರೋಪ ಮಾಡಿರುವ ಬಿಜೆಪಿ-ಜೆಡಿಎಸ್ ನಡೆ ಕುರಿತು ರಾಜ್ಯದ ಜನ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಸಿದ್ದರಾಮಯ್ಯನವರ ಜನಪರ ಕಾರ್ಯಕ್ರಮಗಳು ಹಾಗೂ ಸಂವಿಧಾನದ ಆಶಯಗಳಿಗೆ ಪೂರಕವಾಗಿರುವ ಆಡಳಿತದಿಂದ ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಸಿದ್ದರಾಮಯ್ಯನವರ ಪತ್ನಿ ಪಾರ್ವತಮ್ಮನವರಿಗೆ ಅವರ ಸಹೋದರ ಅರಿಶಿನ-ಕುಂಕುಮಕ್ಕೆ ಕೊಟ್ಟ ಉಡುಗೊರೆಯ ಬಗ್ಗೆ ಎಚ್.ಡಿ ಕುಮಾರಸ್ವಾಮಿ, ಬಿ.ವೈ ವಿಜಯೇಂದ್ರ ಮತ್ತು ತಂಡ ಪ್ರಶ್ನೆ ಮಾಡುತ್ತಿದೆ ಎಂದು ದೂರಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರೇಖಾಹುಲಿಯಪ್ಪಗೌಡ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತೇಜೋವಧೆ ಮಾಡಲು ಕೇಂದ್ರಸರ್ಕಾರ ಅಧಿಕಾರ ದುರುಪಯೋಗಪಡಿಸಿಕೊಂಡು ರಾಜ್ಯಪಾಲರ ಮೂಲಕ ಅಧಿಕಾರದಿಂದ ಇಳಿಸಲು ಸಂಚು ನಡೆಸುತ್ತಿದೆ ಎಂದು ಆರೋಪಿಸಿದರು.
ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ಹಿಂದೆ ಶಾಸಕರಾಗಿದ್ದ ಸಿ.ಟಿ ರವಿಯವರ ಕೈವಾಡವಿದೆ ಎಂಬುದನ್ನು ಮರೆಮಾಚಲು ಈಗ ಸಿ.ಎಂ ಸಿದ್ದರಾಮಯ್ಯ ವಿರುದ್ಧ ರಾಜೀನಾಮೆ ಹೇಳಿಕೆ ನೀಡುತ್ತಿರುವುದು ಖಂಡನೀಯ ಎಂದರು.
ಅಸ್ತಿತ್ವದಲ್ಲೇ ಇಲ್ಲದ ಆಂಜನೇಯ ವಿದ್ಯಾಸಂಸ್ಥೆ ಟ್ರಸ್ಟ್ ಹೆಸರಿನಲ್ಲಿ ಸಿ.ಟಿ ರವಿ ಪತ್ನಿ ಹೆಸರಿಗೆ ೪ ನಿವೇಶನಗಳನ್ನು ಪಡೆದಿರುವುದು ಬಹಿರಂಗವಾಗಿದ್ದರೂ ತಾನು ಕಳ್ಳ, ಪರರ ನಂಬ ಎಂಬAತೆ ಸಿ.ಟಿ ರವಿ ವರ್ತಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಕೆಪಿಸಿಸಿ ವಕ್ತಾರ ಎಚ್.ಎಚ್ ದೇವರಾಜ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ೫೦ ವರ್ಷಗಳಿಂದ ರಾಜ್ಯದಲ್ಲಿ ಸ್ವಚ್ಚ, ಸಕ್ರಿಯ ರಾಜಕಾರಣ ಮಾಡುತ್ತಿರುವ ಏಕೈಕ ಮುಖ್ಯಮಂತ್ರಿಯಾಗಿದ್ದಾರೆ. ಜೊತೆಗೆ ರಾಜ್ಯಕಂಡ ಅಪರೂಪದ ನಾಯಕರಾಗಿದ್ದಾರೆ. ಅವರು ಕೇವಲ ಹಿಂದುಳಿದ ವರ್ಗದ ನಾಯಕರಲ್ಲ. ಬದಲಿಗೆ ಎಲ್ಲ ವರ್ಗ, ಜಾತಿ, ಎಲ್ಲಾ ಧರ್ಮದ ನಾಯಕರಾಗಿ ಆಡಳಿತ ನಡೆಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ರಾಜಕಾರಣಿಗಳು ನೈತಿಕತೆ ಇಟ್ಟುಕೊಂಡು ಮಾತನಾಡಬೇಕು. ಭ್ರಷ್ಟಾಚಾರ ಮಾಡಿರುವವರು ಭ್ರಷ್ಟಾಚಾರದ ಬಗ್ಗೆ ಮಾತನಾಡಬಾರದು. ಈಗಾಗಲೇ ಬಿಜೆಪಿಯ ಸಿ.ಟಿ.ರವಿ, ಆರ್.ಅಶೋಕ್, ಬಿ.ವೈ ವಿಜಯೇಂದ್ರ, ಅಶ್ವಥ್‌ನಾರಾಯಣ ಸೇರಿದಂತೆ ಎಲ್ಲಾ ಮುಖಂಡರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಎಂಬAತಾಗಿದೆ ಎಂದು ಆರೋಪಿಸಿದರು.
ಇದಕ್ಕೂ ಮುನ್ನ ಬ್ಲಾಕ್ ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಸಖರಾಯಪಟ್ಟಣ ಪ್ರಮುಖ ಬೀದಿಗಳಲ್ಲಿ ರಾಜ್ಯಪಾಲರ ಶವಯಾತ್ರೆ ನಡೆಸಿ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಡಾ. ಡಿ.ಎಲ್ ವಿಜಯ ಕುಮಾರ್, ಎಂ.ಎಲ್ ಮೂರ್ತಿ, ರವೀಶ್‌ಬಸಪ್ಪ, ಎಚ್.ಪಿ ಮಂಜೇಗೌಡ, ಮಹಡಿಮನೆ ಸತೀಶ್, ಕೆ.ಎಸ್.ಶಾಂತೇಗೌಡ, ಎತ್ತಿನಮನೆ ತ್ರಿಭುವನ್, ಮಧು ಸಿ.ಸಿ, ಎತ್ತಿನಮನೆ ಸಚಿನ್, ಪ್ರಕಾಶ್ ರೈ, ಅಪ್ಪು, ಗಣೇಶ್, ನವೀನ್, ಕೆ.ಭರತ್, ಪ್ರಸಾದ್ ಅಮೀನ್, ಎನ್.ಡಿ.ಚಂದ್ರಪ್ಪ, ಕೆಂಗೇಗೌಡ, ಸೌಂದರ್ಯ ಜಗದೀಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net