ಕಾಂಗ್ರೆಸ್ ಅಧಿಕಾರಕ್ಕೆ ಬರುವ ಗ್ಯಾರಂಟಿ ಇಲ್ಲ

Congress to power coming guarantee no Belgaum
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ವಕ್ತಾರ ಎಂ.ಬಿ.ಝಿರಲಿ ಮಾತನಾಡಿದರು. ಎಫ್.ಎಸ್.ಸಿದ್ದನಗೌಡರ, ಶರತ ಪಾಟೀಲ ಇತರರಿದ್ದರು.
Published on

ಬೆಳಗಾವಿ: ಕಾಂಗ್ರೆಸ್ ಅಧಿಕಾರಕ್ಕೆ ಬರುವ ಗ್ಯಾರಂಟಿ ಇಲ್ಲ. ಗ್ಯಾರಂಟಿ ಕಾರ್ಡ್ ತೋರಿಸಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಬಿ. ಝಿರಲಿ ಹೇಳಿದರು.

ನಗರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜಿಪಿಯ ಬಗ್ಗೆ ಭ್ರಷ್ಟಾಚಾರ ಆರೋಪ ಮಾಡುವ ಕಾಂಗ್ರೆಸ್ 2ಜಿ ಸ್ಪೆಕ್ಟರಮ್, ಕಾಮನ್ ವೆಲ್ತ್ ಗೇಮ್, ಪಿಎಸ್‌ಐ ಹಗರಣ ಸೇರಿ 28 ಭ್ರಷ್ಟಾಚಾರ ಪ್ರಕರಣಗಳಲ್ಲಿ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದಾರೆ. ಬಿಜೆಪಿ ಕರ್ನಾಟಕದಲ್ಲಿ ಲೋಕಾಯುಕ್ತವನ್ನು ಗಟ್ಟಿಗೊಳಿಸಿದೆ. ಆದ್ದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿದೆ ಎಂದರು.

ಲಿಂಗಾಯತರ ವಿರುದ್ಧವಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ ಮಾತನಾಡಿದ್ದಾರೆಂದು ಸುಳ್ಳು ಹಬ್ಬಿಸಲಾಗಿತ್ತು. ಈ ಬಗ್ಗೆ ದೂರು ದಾಖಲಾಗಿದ್ದು, ತಪ್ಪಿತಸ್ಥರನ್ನು ಬಂಧಿಸಲಾಗಿದೆ. ಈ ರೀತಿ ಕೃತ್ಯವೆಸಗಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಲಿಂಗಾಯತರು ಪ್ರಜ್ಞಾವಂತ ಪ್ರಜೆಗಳಿದ್ದಾರೆ. ಯಾರದೇ ಮಾತಿಗೆ ಮರುಳಾಗದೆ ಬಿಜೆಪಿ ಜತೆಗಿರುತ್ತಾರೆ ಎಂದರು.

ರಾಜ್ಯದಲ್ಲಿ ಮೋದಿ ನಡೆಸಿರುವ ರೋಡ್ ಶೋ ನಿಂದ ಅಭೂತಪೂರ್ವ ಬೆಂಬಲ ದೊರೆತಿದೆ. ಜನರ ಪ್ರೀತಿ, ವಿಶ್ವಾಸ ನೋಡಿದರೆ ಈ ಬಾರಿ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಸುಳ್ಳು ಸುದ್ದಿಗಳನ್ನು ಹರಿಬಿಡುವ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಆದರೆ, ನಾಡಿನ ಜನ ಪ್ರಜ್ಞಾವಂತರಿದ್ದಾರೆ. ಯಾವುದು ಸತ್ಯ, ಯಾವುದು ಸುಳ್ಳು ಎಂಬುದನ್ನು ಅರಿತಿದ್ದಾರೆ. ದೇಶದಲ್ಲಿ ಡಬಲ್ ಇಂಜಿನ್ ಸರ್ಕಾರ ಆಡಳಿತದಲ್ಲಿದ್ದರೆ ಅಭಿವೃದ್ಧಿ ಸಾಧ್ಯ ಎಂದು ಜನ ಈಗಾಗಲೇ ತೀರ್ಮಾನ ಮಾಡಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದರು. ಎಫ್.ಎಸ್.ಸಿದ್ದನಗೌಡರ, ಶರತ್ ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net