ಹರೀಶ್ ಪೂಂಜ ಕ್ಷಮೆ ಯಾಚನೆಗೆ ಗಡುವು ಮಾನನಷ್ಟ ಮೊಕದ್ದಮೆ ದ.ಕ. ಜಿಲ್ಲಾ ಕಾಂಗ್ರೆಸ್ ಎಚ್ಚರಿಕೆ

27_mn Harish Kumar K (2)
Published on

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ 24 ಕೊಲೆ ಆರೋಪ ಹೊರಿಸಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಎರಡು ದಿನಗಳೊಳಗೆ ಕ್ಷಮೆ ಯಾಚಿಸದಿದ್ದರೆ ಸಿವಿಲ್ ಮತ್ತು ಕ್ರಿಮಿನಲ್ ಎರಡೂ ರೀತಿಯ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.


ಸುಳ್ಳು ಆರೋಪ ಹೊರಿಸಿರುವ ಹರೀಶ್ ಪೂಂಜ ಅವರ ವಿರುದ್ಧ ಈಗಾಗಲೇ ಕೆಲವು ದೂರು ದಾಖಲಾಗಿವೆ. ಶರತ್ ಮಡಿವಾಳ, ಪ್ರವೀಣ್ ನೆಟ್ಟಾರು ಕೊಲೆಗಳನ್ನು ಯಾರು ಮಾಡಿಸಿದ್ದು ಎನ್ನುವುದನ್ನು ಹಿಂದು ಕಾರ್ಯಕರ್ತರೇ ಹೇಳುತ್ತಿದ್ದಾರೆ. ಹೀಗಿದ್ದರೂ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಕಳೆದ ಮೂರು ಮುಕ್ಕಾಲು ವರ್ಷ ಬಿಜೆಪಿ ಸರ್ಕಾರವೇ ರಾಜ್ಯದಲ್ಲಿತ್ತು. ಸಿದ್ದರಾಮಯ್ಯ ಕೊಲೆ ಮಾಡಿದ್ದರೆ ಯಾಕೆ ತನಿಖೆ ನಡೆಸಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.


ಶಾಸಕ ಪೂಂಜ ಚುನಾವಣೆಗೆ ಹಣದ ಹೊಳೆ ಹರಿಸಿದ್ದು, 30- 40 ಕೋಟಿ ರೂ. ಖರ್ಚು ಮಾಡಿದ್ದಾರೆ. ಅಲ್ಲದೆ ಚುನಾವಣೆ ಸಂದರ್ಭ ಅನೇಕ ಅಕ್ರಮಗಳನ್ನು ಎಸಗಿದ್ದಾರೆ. ಅವರ ಪರವಾಗಿ ಬೆಳ್ತಂಗಡಿ ಪ.ಪಂ. ಉಪಾಧ್ಯಕ್ಷ ಹಣ ಹಂಚುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಎಫ್‌ಐಆರ್ ದಾಖಲಾಗಿದೆ ಎಂದು ಆರೋಪಿಸಿದರು.


ಕಾಂಗ್ರೆಸ್ ಹಿಂದು ವಿರೋಧಿ ಎಂದು ಬಿಂಬಿಸಲು ಬಿಜೆಪಿ ನಿರಂತರ ಪ್ರಯತ್ನಿಸುತ್ತಿದೆ. ಆದರೆ ನಾವು ಯಾವತ್ತೂ ಹಿಂದು ವಿರೋಧಿಗಳು ಆಗಿರಲಿಲ್ಲ. ಪುತ್ತೂರಿನಲ್ಲಿ ಹಿಂದು ಯುವಕರ ಮೇಲೆ ಹಲ್ಲೆ ನಡೆಸಿದ್ದು ಯಾರು, ನಿಜವಾದ ಹಿಂದು ವಿರೋಧಿಗಳು ಯಾರು ಎನ್ನುವುದು ಈಗ ಎಲ್ಲರಿಗೂ ಗೊತ್ತಾಗಿದೆ. ಬಿಜೆಪಿಯ ನಕಲಿ ಹಿಂದುತ್ವವನ್ನು ಜನರು ಈಗಾಗಲೇ ತಿರಸ್ಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ದಕ್ಷಿಣ ಕನ್ನಡದಲ್ಲೂ ಬಿಜೆಪಿಯ ಡೋಂಗಿ ಹಿಂದುತ್ವದಿಂದ ಜನರು ಹೊರಬಂದು ಬುದ್ಧಿ ಕಲಿಸಲಿದ್ದಾರೆ ಎಂದರು.


ಸಂವಿಧಾನ ವಿರೋಧಿಯಾಗಿ ಬಿಜೆಪಿ ಬದಲಾಯಿಸಿರುವ ಶಾಲಾ ಪಠ್ಯವನ್ನು ಮರು ಪರಿಷ್ಕರಣೆ ಮಾಡಲು ಸಿಎಂ ಮತ್ತು ಡಿಸಿಎಂ ಅವರಿಗೆ ಮನವಿ ಸಲ್ಲಿಸಿದ್ದೇನೆ. ಪಠ್ಯ ಪರಿಷ್ಕರಣೆ ಮುಂದಿನ ದಿನಗಳಲ್ಲಿ ಆಗಲಿದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಮನೋರಾಜ್, ಶಾಲೆಟ್ ಪಿಂಟೊ, ಟಿ.ಕೆ. ಸುಧೀರ್, ಸಂತೋಷ್ ಕುಮಾರ್ ಶೆಟ್ಟಿ, ಜಯಶೀಲ ಅಡ್ಯಂತಾಯ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net