ಸಾವಿರ ಬೈಕ್‌ನಲ್ಲಿ ಕಾಂಗ್ರೆಸ್ ತಿರಂಗ ಯಾತ್ರೆ

kaup-vinayakumar sorake EX MLA 3
Published on

ಉಡುಪಿ: ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಕಾಪು ದಕ್ಷಿಣ ವಲಯ ಬ್ಲಾಕ್ ಮತ್ತು ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆ.13 ಮತ್ತು 14ರಂದು ಒಂದು ಸಾವಿರಕ್ಕೂ ಅಧಿಕ ಬೈಕ್ ಸವಾರರು ತ್ರಿವರ್ಣ ಧ್ವಜ ಹಿಡಿದು ತಿರಂಗ ಯಾತ್ರೆ ನಡೆಸಲಿದ್ದಾರೆ ಎಂದು ಮಾಜಿ ಸಚಿವ ವಿಜಯಕುಮಾರ್ ಸೊರಕೆ ತಿಳಿಸಿದರು.

ಆ. 13ರಂದು 3 ಗಂಟೆಗೆ ಹೆಜಮಾಡಿಯಿಂದ ಆರಂಭಗೊಳ್ಳುವ ಯಾತ್ರೆಗೆ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ, ಮಾಜಿ ಸಚಿವ ಅಭಯಚಂದ್ರ ಜೈನ್ ಚಾಲನೆ ನೀಡಲಿದ್ದಾರೆ. ಸಾಯಂಕಾಲ 5 ಗಂಟೆಗೆ ಉದ್ಯಾವರದಲ್ಲಿ ಯಾತ್ರೆ ಸಮಾಪನಗೊಳ್ಳಲಿದೆ. ಆ. 14ರಂದು 1.30ಕ್ಕೆ ಕುಕ್ಕೆಹಳ್ಳಿ ಜೈ ಹಿಂದ್ ಶಾಲಾ ಮೈದಾನದಿಂದ ಆರಂಭವಾಗುವ ಯಾತ್ರೆ ಅಲೆವುರು ನೆಹರೂ ಕ್ರೀಡಾಂಗಣದಲ್ಲಿ ಕೊನೆಗೊಳ್ಳಲಿದೆ ಎಂದರು.

ಕೆಪಿಸಿಸಿ ಸೂಚನೆ ಮೇರೆಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದವರನ್ನು ಸ್ಮರಿಸುವುದು, ಶಾಂತಿ ಸಾಮರಸ್ಯ, ಸೌಹಾರ್ದತೆ ಕಾಪಾಡುವುದು, ಸಂವಿಧಾನ ರಕ್ಷಣೆಯ ಸಂಕಲ್ಪದೊಂದಿಗೆ ಜಿಲ್ಲೆಯಾದ್ಯಂತ ಈಗಾಗಲೇ 78 ಕಿ. ಮೀ. ಪಾದಯಾತ್ರೆ ನಡೆಸಲಾಗಿದೆ. ಹರ್ ಘರ್ ತಿರಂಗ ಅಭಿಯಾನಕ್ಕೆ ಕಾಂಗ್ರೆಸ್ ಬೆಂಬಲ ನೀಡಲಿದೆ. ಎಲ್ಲಾ ಮನೆಗಳಲ್ಲೂ ತ್ರಿವರ್ಣ ಧ್ವಜ ರಾರಾಜಿಸುವ ಜೊತೆಗೆ ಧ್ವಜ ನಿಯಮ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು. ಮುಖಂಡರಾದ ಉದ್ಯಾವರ ನಾಗೇಶ ಕುಮಾರ್, ಅಲೆವೂರು ಹರೀಶ್ ಕಿಣಿ, ಚರಣ್ ವಿಠಲ್, ನವೀನ್ ಸಾಲಿಯಾನ್, ಸಂತೋಷ್ ಕುಲಾಲ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net