

ಬೀದರ್: ಜಿಲ್ಲಾ ಪಂಚಾಯಿತಿ ಆಡಳಿತರೂಢ ಕಾಂಗ್ರೆಸ್ ನೊಳಗೆ ಎದ್ದಿರುವ ಭಿನ್ನಮತ ಕೊನೆಗೂ ಶಮನವಾಗಿಲ್ಲ. ಹೀಗಾಗಿ ಶುಕ್ರವಾರ ಅಧ್ಯಕ್ಷೆ ಗೀತಾ ಚಿದ್ರಿ, ಉಪಾಧ್ಯಕ್ಷ ಲಕ್ಷ್ಮಣರಾವ ಬುಳ್ಳಾ ವಿರುದ್ಧ ಕರೆದ ಅವಿಶ್ವಾಸ ಸಭೆಯಲ್ಲಿ ಭಿನ್ನರಿಗೆ ಜಯ ಸಿಗುವುದು ಖಚಿತವಾಗಿದೆ. ಕಾಂಗ್ರೆಸ್ ಆಡಳಿತ ಖತಂ ಆದ ಬೆನ್ನಲ್ಲೇ ಬಿಜೆಪಿಗೆ ಅಧಿಕಾರ ಭಾಗ್ಯ ಒಲಿಯಲಿರುವುದು ಜಿಲ್ಲೆ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಆಡಳಿತರೂಢ ಕಾಂಗ್ರೆಸ್ ಸದಸ್ಯರೇ ಬಿಜೆಪಿ ಜತೆ ಕೈಜೋಡಿಸಿ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸಕ್ಕೆ ಮುಂದಾಗಿದ್ದಾರೆ. ಈ ವಿಷಯ ಕಳೆದೊಂದು ವಾರದಿಂದ ಕಾಂಗ್ರೆಸ್ ಮುಖಂಡರಿಗೆ ಇರಿಸು-ಮುರಿಸು ತಂದಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತವರು ಜಿಲ್ಲೆ ಇದು. ಖಂಡ್ರೆ ಸೇರಿ ಮೂವರು ಶಾಸಕರು, ಮೂವರು ವಿಧಾನ ಪರಿಷತ್ ಸದಸ್ಯರು, ಅನೇಕ ಮುಖಂಡರಿದ್ದರೂ ಬಿಕ್ಕಟ್ಟು ಬಗೆಹರಿಸಲು ಸಾಧ್ಯವಾಗಿಲ್ಲ. ಹಲವು ಸದಸ್ಯರು ಚರ್ಚೆಗೆ ಆಹ್ವಾನಿಸಿದರೂ ಸೊಪ್ಪು ಹಾಕದೆ ಪಕ್ಷದ ಮುಖಂಡರಿಗೇ ಸೆಡ್ಡು ಹೊಡೆದು ನಿಂತಿರುವುದು ವಿಚಿತ್ರವೆನಿಸಿದೆ. ಈ ಮಧ್ಯೆ ಕಾಂಗ್ರೆಸ್ ಆಂತರಿಕ ಕಚ್ಚಾಟದ ಲಾಭ ಪಡೆಯಲು ಸ್ಕೆಚ್ ಹಾಕಿರುವ ಬಿಜೆಪಿ, ಅಧ್ಯಕ್ಷ ಸ್ಥಾನ ಅಲಂಕರಿಸಿ ಜಿಪಂ ಗದ್ದುಗೆಗೇರುವ ಹೊಸ್ತಿಲಲ್ಲಿದೆ.
ಜಿಪಂ 34 ಸದಸ್ಯ ಬಲ ಹೊಂದಿದೆ. ಸಂತಪುರ ಕ್ಷೇತ್ರದ ಬಿಜೆಪಿ ಸದಸ್ಯ ಅನೀಲ ಗುಂಡಪ್ಪ ನಿಧನ ಹೊಂದಿದ್ದರಿಂದ ಈ ಸಂಖ್ಯೆ 33ಕ್ಕಿಳಿದಿದೆ. ಕಾಂಗ್ರೆಸ್ 19 ಸದಸ್ಯರೊಂದಿಗೆ ಸ್ಪಷ್ಟ ಬಹುಮತ ಹೊಂದಿತ್ತು. ಆದರೆ ನಂತರದ ಬೆಳವಣಿಗೆಗಳಲ್ಲಿ ಈ ಪೈಕಿ ಐವರನ್ನು ಪಕ್ಷದಿಂದ ಉಚ್ಚಾಟಿಸಿದ್ದರಿಂದ ಇವರ ಬಲ 14ಕ್ಕೆ ಕುಸಿದಿದೆ. ಬಿಜೆಪಿ 11, ಜೆಡಿಎಸ್ 3 ಸದಸ್ಯರನ್ನು ಹೊಂದಿದೆ. ಒಟ್ಟು 29 ಸದಸ್ಯರು ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಪತ್ರಕ್ಕೆ ಸಹಿ ಹಾಕಿದ್ದಾರೆ. ಇದರಲ್ಲಿ ಉಚ್ಚಾಟಿತ ಐವರು ಸೇರಿ ಕಾಂಗ್ರೆಸ್ 15, ಬಿಜೆಪಿ 11, ಜೆಡಿಎಸ್ನ 3 ಸದಸ್ಯರಿದ್ದಾರೆ. ಈ ಸದಸ್ಯರ ಪತ್ರದ ಮೇರೆಗೆ ಶುಕ್ರವಾರ (23ರಂದು) ಮಧ್ಯಾಹ್ನ 3ಕ್ಕೆ ಜಿಪಂ ಸಭಾಂಗಣದಲ್ಲಿ ಅವಿಶ್ವಾಸ ಮಂಡನೆ ವಿಶೇಷ ಸಭೆ ಕರೆಯಲಾಗಿದೆ. ಕಾಂಗ್ರೆಸ್ ಮುಖಂಡರ ಸಂಧಾನ ಯತ್ನ ಫಲ ನೀಡದ ಕಾರಣ ಸ್ವಪಕ್ಷೀಯರ ಬಂಡಾಯದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರಿಬ್ಬರೂ ಕುರ್ಚಿಯಿಂದ ಕೆಳಗಿಳಿಯುವುದು ಪಕ್ಕಾ ಎನಿಸಿದೆ.
ಅವಿಶ್ವಾಸ ಸಭೆ ಕರೆಯುವಂತೆ ಪ್ರಾದೇಶಿಕ ಆಯುಕ್ತರಿಗೆ ಬರೆದ ಪತ್ರಕ್ಕೆ ಸದಸ್ಯರಾದ ವಿಜಯಕುಮಾರ ಪಾಟೀಲ್, ಮಂಜುಳಾ ಸ್ವಾಮಿ, ಅಫ್ರೋಜ್ ಖಾನ್, ಜಯಶ್ರೀ ರಾಠೋಡ್, ಉಷಾ ನಿಟ್ಟೂರಕರ್, ಬಾಬುಸಿಂಗ್ ಹಜಾರಿ, ಅಂಬಾದಾಸ ಕೋರೆ, ರೇಖಾಬಾಯಿ, ಸುಧೀರ್ ಕಾಡಾದಿ, ರಾಜಶೇಖರ ಮೇತ್ರೆ, ಆನಂದ ಪಾಟೀಲ್, ರವೀಂದ್ರರೆಡ್ಡಿ, ಸುನೀತಾ ರಾಸೂರ್, ನಿರ್ಮಲಾ ಮಾನೆಗೋಪಾಲ್, ಅಣ್ಣಾರಾವ ರಾಠೋಡ್, ಅಮರಪಾಲಿ ಹಲಗೆ, ಸುನೀತಾ ಸಗರ್, ಗುಂಡುರೆಡ್ಡಿ, ಪ್ರಿಯಾ ಠಾಕೂರ್, ಪ್ರಕಾಶ ಪಾಟೀಲ್, ಭಾರತಬಾಯಿ, ಬಾಬುರಾವ, ಮಹ್ಮದ್ ಫಿರೋಜ್ ಖಾನ್, ಮೀನಾ ಚವ್ಹಾಣ್, ಸಂಧ್ಯಾರಾಣಿ ನರೋಟೆ, ತಾರಾಬಾಯಿ ರಾಠೋಡ್, ಶಕುಂತಲಾ ಬೆಲ್ದಾಳೆ, ಸುರೇಖಾ ಭೋಸ್ಲೆ, ಮಾರುತಿ ಚವ್ಹಾಣ್ ಸಹಿ ಹಾಕಿದ್ದಾರೆ. ಇವರಲ್ಲಿ ಕೆಲವರು ಕೊನೆಯ ಹಂತದಲ್ಲಿ ಅತ್ತಿತ್ತ ಆದರೂ ಕನಿಷ್ಠ 23 ಸದಸ್ಯರು ಅವಿಶ್ವಾಸದ ಪರ ನಿಲ್ಲಲಿದ್ದಾರೆ ಎಂಬ ಮಾಹಿತಿ ವಿಜಯವಾಣಿಗೆ ಲಭ್ಯವಾಗಿದೆ.
ಅವಿಶ್ವಾಸ ನಿರ್ಣಯ ಅಂಗೀಕಾರವಾಗಲು ಎರಡನೇ ಮೂರು ಭಾಗ (ಟು ಥಡ್೯) ಸದಸ್ಯರ ಬೆಂಬಲ ಬೇಕು. ಅಂದರೆ 33 ಸದಸ್ಯ ಬಲದಲ್ಲಿ ಈ ಸಂಖ್ಯೆ 22 ಆಗುತ್ತದೆ. ಸದ್ಯ ಇದಕ್ಕಿಂತ ಇಬ್ಬರು ಹೆಚ್ಚು ಸದಸ್ಯರು ಬಂಡಾಯದ ಟೀಮ್ನಲ್ಲಿದ್ದಾರೆ ಎಂದು ಹೇಳಲಾಗಿದೆ. ಮೂರ್ನಾಲ್ಕು ದಿನಗಳಿಂದ ಇವರೆಲ್ಲ ಬೇರೆ ಜಿಲ್ಲೆ, ರಾಜ್ಯದ ಪ್ರವಾಸದಲ್ಲಿದ್ದಾರೆ. ಶುಕ್ರವಾರ ಮಧ್ಯಾಹ್ನ 3ಕ್ಕೆ ನೇರವಾಗಿ ಜಿಪಂ ಸಭಾಂಗಣಕ್ಕೆ ಬರಲಿದ್ದಾರೆ. ಅಧ್ಯಕ್ಷ-ಉಪಾಧ್ಯಕ್ಷರನ್ನು ಕೆಳಗಿಳಿಸುವುದು ನಮ್ಮೆಲ್ಲರ ಪಕ್ಷಾತೀತ ನಿರ್ಧಾರ. ಇದು ಯಶಸ್ವಿ ಆಗುವುದು ಖಚಿತ ಎನ್ನುತ್ತಾರೆ ಜಿಪಂ ಪ್ರತಿಪಕ್ಷ ನಾಯಕ ಸುಧೀರ್ ಕಾಡಾದಿ.
ವಿರೋಧಿಗಳ ಮೈತ್ರಿ
ಅವಿಶ್ವಾಸ ನಿರ್ಣಯ ಅಂಗೀಕಾರ ನಂತರ ಜಿಪಂನಲ್ಲಿ ಕಾಂಗ್ರೆಸ್-ಬಿಜೆಪಿ ಮೈತ್ರಿ ಆಡಳಿತ ಅಧಿಕಾರಕ್ಕೆ ಬರಲಿದೆ. ಜಿಪಂ ಅವಧಿ ಇನ್ನೂ ಐದು ತಿಂಗಳು ಮಾತ್ರ ಬಾಕಿ ಉಳಿದಿದೆ. ಅಧ್ಯಕ್ಷೆ ಗೀತಾ ಚಿದ್ರಿ ಹಾಗೂ ಉಪಾಧ್ಯಕ್ಷ ಲಕ್ಷ್ಮಣರಾವ ಬುಳ್ಳಾ ಕಾರ್ಯವೈಖರಿಗೆ ಬೇಸತ್ತು ಆಡಳಿತರೂಢರು, ಪ್ರತಿಪಕ್ಷದವರು ಕೈಮಿಲಾಯಿಸಿ ಅವಿಶ್ವಾಸ ಮಂಡಿಸಿದ್ದಾರೆ. ಇದು ಅನಾಯಾಸ ಬಿಜೆಪಿ ಕೈಗೆ ಅಧಿಕಾರ ಕೊಡುತ್ತಿದೆ. ಅಧ್ಯಕ್ಷ ಸ್ಥಾನ ಎಸ್ಟಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಗೀತಾ ಚಿದ್ರಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರೆ, ಬಿಜೆಪಿಯಲ್ಲಿ ಮಂಠಾಳ ಕ್ಷೇತ್ರದ ನಿರ್ಮಲಾ ಮಾನೆಗೋಪಾಲ್ ಮಾತ್ರ ಈ ವರ್ಗದ ಮಹಿಳಾ ಸದಸ್ಯರಿದ್ದು, ಗದ್ದುಗೆ ಭಾಗ್ಯ ಒಲಿದು ಬರಲಿದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಇದ್ದುದ್ದರಿಂದ ಯಾರೂ ಸ್ಪರ್ಧಿಸಬಹುದು. ಆದರೆ ಗಾದಗಿ ಕ್ಷೇತ್ರದ ಕಾಂಗ್ರೆಸ್ ಉಚ್ಚಾಟಿತ ಸದಸ್ಯ ವಿಜಯಕುಮಾರ ಪಾಟೀಲ್ ಈ ಸ್ಥಾನ ಅಲಂಕರಿಸುವುದು ಖಚಿತವಾಗಿದೆ.
ಕೋಟ್೯ನಲ್ಲೂ ಸಿಗದ ತಡೆ
ಅವಿಶ್ವಾಸ ಸಭೆಗೆ ತಡೆ ನೀಡುವಂತೆ ಅಧ್ಯಕ್ಷ-ಉಪಾಧ್ಯಕ್ಷರು ಕಲಬುರಗಿ ಹೈಕೋಟ್೯ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಆದರೆ ಏಕಸದಸ್ಯ ಪೀಠ ತಡೆಯಾಜ್ಞೆ ನಿರಾಕರಿಸಿ ಅರ್ಜಿ ವಜಾಗೊಳಿಸಿದೆ. ಇದನ್ನು ಪ್ರಶ್ನಿಸಿ ದ್ವಿಸದಸ್ಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಪೀಠ ಸಹ ಅವಿಶ್ವಾಸ ಸಭೆಗೆ ತಡೆ ನೀಡಿಲ್ಲ. ಆದರೆ 30 ತಿಂಗಳ ಅವಧಿಯೊಳಗೆ ಅವಿಶ್ವಾಸ ಸಭೆ ನಡೆಸಬೇಕೋ? ಬೇಡವೋ ಎಂಬ ಬಗ್ಗೆ ಸರ್ಕಾರದ ಕಾಯ್ದೆ ಮತ್ತು ಆದೇಶ ಕುರಿತು ಸ್ಪಷ್ಟನೆ ಕೇಳಿದೆ. ಅವಿಶ್ವಾಸ ಸಭೆ ಮಾಡಬಹುದು, ಆದರೆ ಸರ್ಕಾರದಿಂದ ಈ ಕುರಿತ ವಿಷಯ ಸ್ಪಷ್ಟವಾದ ನಂತರವೇ ಅವಿಶ್ವಾಸ ಸಭೆಯ ನಿರ್ಣಯವನ್ನು ಅಧಿಕೃತವಾಗಿ ಘೋಷಿಸಿ ಜಾರಿಗೆ ತರಬಹುದು ಎಂದು ನಿರ್ದೇಶನ ನೀಡಿದೆ ಎಂದು ತಿಳಿದುಬಂದಿದೆ.
ರಕ್ಷಣೆ ಕೊಡಿ ಎಂದ ಸದಸ್ಯರು
ವಿಜಯಪುರ, ಕಲಬುರಗಿಯಲ್ಲಿ ಬಿಡಾರ ಹೂಡಿದ್ದ 24ಕ್ಕೂ ಹೆಚ್ಚು ಸದಸ್ಯರು ಏಕಕಾಲಕ್ಕೆ ಶುಕ್ರವಾರ ಮಧ್ಯಾಹ್ನ 2ರ ಹೊತ್ತಿಗೆ ಬೀದರ್ ಜಿಪಂಗೆ ಬರಲಿದ್ದಾರೆ ಎಂದು ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ. ಅವಿಶ್ವಾಸ ಸಭೆ ಹಿನ್ನೆಲೆಯಲ್ಲಿ ಜಿಪಂ ಸುತ್ತ ಬಿಗಿ ಪೊಲೀಸ್ ಭದ್ರತೆಗೆ ಎಸ್ಪಿ ನಾಗೇಶ್ ಕ್ರಮಕೈಗೊಂಡಿದ್ದಾರೆ. ಪೊಲೀಸ್ ರಕ್ಷಣೆ, ಎಸ್ಕಾಟ್೯ ಸಹ ಕೇಳಿದ 24 ಸದಸ್ಯರು.