ಸಂಶೋಧನಾರ್ಥಿಗಳ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ

IMG-20221205-WA0020.jpg
Published on

ಕನ್ನಡ ವಿವಿಯಲ್ಲಿ ಮುಂದುವರಿದ ಅಹೋರಾತ್ರಿ ಧರಣಿ

ಹೊಸಪೇಟೆ: ಇಲ್ಲಿನ ಕನ್ನಡ ವಿಶ್ವವಿದ್ಯಾಲಯದಲ್ಲಿ ಫೆಲೋಶಿಪ್ ಬಿಡುಗಡೆಗೆ ಆಗ್ರಹಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಸೋಮವಾರ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಬೆಂಬಲ ಸೂಚಿಸಿದರು.
ಸೋಮವಾರ ಮಧ್ಯಾಹ್ನ ಕನ್ನಡ ವಿವಿ ಕ್ಯಾಂಪಸ್‌ಗೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಕೆಲಕಾಲ ಧರಣಿ ನಡೆಸಿ, ಸಂಶೋಧನಾರ್ಥಿಗಳ ಸಮಸ್ಯೆ ಆಲಿಸಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಉಗ್ರಪ್ಪ, ಕನ್ನಡ ವಿಶ್ವವಿದ್ಯಾಲಯ ಕುಲಪತಿಗಳ ಅಪ್ಪ, ಹಣಕಾಸು ವಿಭಾಗದವರ ಆಸ್ತಿಯೂ ಅಲ್ಲ. ಸಾರ್ವಜನಿಕರ ದುಡ್ಡಿನಿಂದ ಕಟ್ಟಿರುವ ವಿಶ್ವವಿದ್ಯಾಲಯ. ವಿವಿಯಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳು ದೊರೆಯುತ್ತಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಬಿಡುಗಡೆಯಾದ ಫೆಲೋಶಿಪ್ ವಿತರಿಸದೇ, ಅನ್ಯ ಕಾಮಗಾರಿಗಳಿಗೆ ಬಳಕೆ ಮಾಡುತಿರುವುದು ಅಕ್ಷಮ್ಯ ಎಂದು ಕಿಡಿಕಾರಿದರು.
೪೭ ತಿಂಗಳಿಂದ ಸಂಶೋಧನಾರ್ಥಿಗಳು ಫೆಲೋಶಿಪ್ ಇಲ್ಲದೇ, ಆರ್ಥಿಕ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳು, ಆಡಳಿತ ಮಂಡಳಿಗೆ ಕಾಳಜಿ ಇಲ್ಲವೇ. ಅವರ ಫೆಲೋಶಿಪ್‌ಗಿಂದ ಕೆರೆ, ಕಾಂಪೌಂಡ್ ಗೋಡೆಗಳ ನಿರ್ಮಾಣ ಅಗತ್ಯವೇ ಎಂದು ಪ್ರಶ್ನಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಉಪ ಕುಲಸಚಿವ ಎ.ವೆಂಕಟೇಶ, ಸಮಾಜ ಕಲ್ಯಾಣ ಇಲಾಖೆಯಿಂದ ಬಿಡುಗಡೆಯಾಗಿರುವ ೩ ಕೋಟಿ ರೂ. ಅನುದಾನದಲ್ಲಿ ವಿತರಣೆಗೆ ಕ್ರಮ ವಹಿಸಲಾಗುವುದು ಆದರೆ, ಮುಖ್ಯಮಂತ್ರಿಗಳ ವಿವೆಚನಾನಿಧಿಯಡಿ ಬಿಡುಗಡೆಯಾದ ೧೧ ಕೋಟಿ  ರೂ. ಬಗ್ಗೆ ಮಾಹಿತಿ ಎಂದರು.
ಅವರ ಮಾತಿನಿಂದ ಅಸಮಾಧಾನಗೊಂಡ ಉಗ್ರಪ್ಪ, ಈ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯುತ್ತೇವೆ. ಅದಕ್ಕೂ ಸ್ಪಂದನೆ ದೊರೆಯದಿದ್ದರೆ, ನಿಮ್ಮೊಂದಿಗೆ ಹೋರಾಟಕ್ಕೆ ಧುಮ್ಮುಕ್ಕುತ್ತೇವೆ ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ರಾಜಶೇಖರ ಹಿಟ್ನಾಳ್, ಕುರಿ ಶಿವಮೂರ್ತಿ, ಗುಜ್ಜಲ ನಾಗರಾಜ, ವಿನಾಯಕ ಶೆಟ್ಟರ್, ನಿಂಬಗಲ್ ರಾಮಕೃಷ್ಣ, ಪತ್ರೇಶ ಹಿರೇಮಠ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net