

ಗುಂಡ್ಲುಪೇಟೆ: ಪಟ್ಟಣದಲ್ಲಿ ಮೇ 26ರಂದು ಆಯೋಜಿಸಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಭೀಮೋತ್ಸವಕ್ಕೆ ಕಾಂಗ್ರೆಸ್ ಮುಖಂಡರ ಸಂಪೂರ್ಣ ಬೆಂಬಲವಿದೆ ಎಂದು ರಾಘವಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಆರ್.ಡಿ.ಉಲ್ಲಾಸ್ ತಿಳಿಸಿದರು.
ಬಾಬಾ ಸಾಹೇಬರ ಜಯಂತಿಯನ್ನ ಹಬ್ಬವನ್ನಾಗಿ ಆಚರಿಸುವ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಉಪಸ್ಥಿತರಿರಲಿದ್ದಾರೆ ಎಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಮಾಡ್ರಹಳ್ಳಿ ಸುಭಾಷ್ ಮಾತನಾಡಿ, ಮೇ 26 ಅದ್ದೂರಿ ಭೀಮೋತ್ಸವಕ್ಕೆ ರೂಪುರೇಷೆ ಸಿದ್ಧಪಡಿಸಲಾಗಿದೆ. ಬಾಬಾಸಾಹೇಬರ ಭಾವಚಿತ್ರ ಮೆರವಣಿಗೆಗೆ ಆನೆಯನ್ನು ಕರೆತರಲು ಎಲ್ಲ ವ್ಯವಸ್ಥೆ ಮಾಡಲಾಗಿದೆ. ಹಬ್ಬ ಪಟ್ಟಣದಲ್ಲಿ ನವಮೆರುಗು ನೀಡಲಿದೆ. ಮಹಾನ್ ನಾಯಕನ ಸ್ಮರಣಾ ಹಬ್ಬದಂದು ಪಕ್ಷಾತೀತವಾಗಿ ಎಲ್ಲ ಕಾರ್ಯಕರ್ತರು ಮುಖಂಡರು, ಪ್ರಗತಿಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಸಹಮತ ವ್ಯಕ್ತಪಡಿಸಿವೆ. ಭೀಮೋತ್ಸವ ಕಾರ್ಯಕ್ರಮಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ಅನುಯಾಯಿಗಳು ಸೇರುವ ನಿರೀಕ್ಷೆ ಇದೆ. ಮೈಸೂರು ಸಂಸದ ಯದುವೀರ್, ಚಾಮರಾಜನಗರ ಸಂಸದ ಸುನೀಲ್ ಬೋಸ್, ಮಾಜಿ ಶಾಸಕ ನಿರಂಜನ್ ಕುಮಾರ್, ಇತರ ಗಣ್ಯಮಾನ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.