ಹರಿಹರದಲ್ಲಿ ವಾಲ್ಮೀಕಿ ಸಮುದಾಯದ ಸಭೆಯಲ್ಲಿ ಗದ್ದಲ

Hrr18Valmeki 4
Published on

ಹರಿಹರ: ಜಾತಿ ಗಣತಿಯಲ್ಲಿ ಜಾತಿ ಹೆಸರು ನಮೂದಿಸುವುದು, ಪರಿಶಿಷ್ಟ ಪಂಗಡ ವರ್ಗದಲ್ಲಿ ಇತರೆ ಜಾತಿಯವರನ್ನು ಸೇರಿಸಲು ಸರ್ಕಾರದ ನಡೆ ಮತ್ತು ಸುಳ್ಳು ಜಾತಿ ಪ್ರಮಾಣ ಪತ್ರ ತಡೆಯುವ ಕುರಿತು ನಿರ್ಣಯಿಸಲು ತಾಲೂಕಿನ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಆವರಣದಲ್ಲಿ ಗುರುವಾರ ಕರೆದಿದ್ದ ವಾಲ್ಮೀಕಿ ಸಮುದಾಯದವರ ಸಭೆಯಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು.

ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಜಿಲ್ಲಾವಾರು ಮುಖಂಡರ ಅಭಿಪ್ರಾಯ ಪಡೆದ ನಂತರ ಸಮುದಾಯದ ಮುಖಂಡ ಹಾಗೂ ಬಿಜೆಪಿ ಎಸ್​ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತ ಅವರು ಮಾತನಾಡುವ ವೇಳೆ ಕಾಂಗ್ರೆಸ್ ಪಕ್ಷ ವಾಲ್ಮೀಕಿ ಸಮುದಾಯದ ಮುಖಂಡರ ವಿರುದ್ಧ ಮಾಡಿದ ಅನ್ಯಾಯದ ವಿರುದ್ಧ ವಿಷಯಗಳನ್ನು ಪ್ರಸ್ತಾಪಿಸಿದರು. ಆಗ ವೇದಿಕೆಯಲ್ಲಿದ್ದ ಕಾಂಗ್ರೆಸ್ ಸಂಸದ ಮಾಜಿ ಸಚಿವ ಇ. ತುಕಾರಾಂ ಹಾಗೂ ಕಾಂಗ್ರೆಸ್ ಬೆಂಬಲಿಗರು ತಕರಾರು ವ್ಯಕ್ತಪಡಿಸಿ ಮಾತು ನಿಲ್ಲಿಸಲು ಒತ್ತಾಯಿಸಿದರು.

ಆಗ ಸಭೆಯಲ್ಲಿ ಕೆಲ ಸಮಯ ಗೊಂದಲ ಸೃಷ್ಟಿಯಾಯಿತು ಮತ್ತು ಅನೇಕ ಸಭಿಕರು ವೇದಿಕೆಯನ್ನೇರಿದರು. ಕೆಲವರು ಬಂಗಾರು ಹನುಮಂತ ಅವರಿಗೆ ಮಾತನಾಡಿ ಎಂದರೆ ಇನ್ನೂ ಕೆಲವರು ರಾಜಕೀಯ ಮಾತನಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆರಳೆಣಿಕೆಯಷ್ಟಿದ್ದ ಪೊಲೀಸರಿಗೆ ಜನರನ್ನು ನಿಯಂತ್ರಿಸಲಾಗಲಿಲ್ಲ. ಆದ್ದರಿಂದ ಆಯೋಜಕರು ಜನರನ್ನು ವೇದಿಕೆಯಿಂದ ತಳ್ಳಿ ಕೆಳಗಿಳಿಸಬೇಕಾಯಿತು. ಕೊನೆಗೆ ಪ್ರಸನ್ನಾನಂದ ಶ್ರೀಗಳು, ಸಮುದಾಯದ ಮುಖಂಡರು ಹರಸಾಹಸ ಪಟ್ಟು ವೇದಿಕೆಯನ್ನು ಖಾಲಿ ಮಾಡಿಸಿ, ಶಾಂತತೆ ಮೂಡುವಂತೆ ಮಾಡಿದರು.

ಈಚೆಗೆ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ಸಿಎಂ ಸಿದ್ದರಾಮಯ್ಯ ಕುರಿತು ಮಾಡಿದ ಟೀಕೆ, ಲೋಕಸಭಾ ಚುನಾವಣಾ ಖರ್ಚಿಗೆ ಕಾಂಗ್ರೆಸ್ ಪಕ್ಷವು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಸಿಕೊಂಡು ಸಚಿವ ನಾಗೇಂದ್ರ ಅವರ ತಲೆದಂಡ ಮಾಡಿಸಿದ್ದು, ಸಮುದಾಯದ ಇನ್ನೊಬ್ಬ ಸಚಿವ ಕೆ.ಎನ್. ರಾಜಣ್ಣ ಅವರ ತಲೆದಂಡದ ವಿಷಯ ಪ್ರಸ್ತಾಪಿಸಿದ್ದು ಕಾಂಗ್ರೆಸ್ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಯಿತು.

ತುಕಾರಾಮ್ ಮೈಕ್ ಬಳಿ ಬಂದು, ಇದು ರಾಜಕೀಯ ವೇದಿಕೆಯಲ್ಲ, ನಾವೂ ರಾಜಕೀಯ ಮಾತನಾಡಿದರೆ ಬಹಳಷ್ಟಿದೆ ಎಂದರು. ಕೊನೆಗೆ ಸಭೆ ಶಾಂತವಾದಾಗ ಬಂಗಾರು ಹನುಮಂತ, ಇ. ತುಕಾರಾಂ, ಇತರೆ ಮುಖಂಡರು ಮತ್ತು ಶ್ರೀಗಳು ಮಾತನಾಡಿದರು.

ಸಭೆಯ ಸಾನ್ನಿಧ್ಯವಹಿಸಿದ್ದ ಪ್ರಸನ್ನಾನಂದ ಶ್ರೀಗಳು ಮಾತನಾಡಿ, 3 ನಿರ್ಣಯ ಮಂಡಿಸಿ ಸಭೆಯ ಒಪ್ಪಿಗೆ ಪಡೆದರು.

1. ಜಾತಿ ಗಣತಿಯಲ್ಲಿ ಜಾತಿ ಕಾಲಂನಲ್ಲಿ ನಾಯಕ ಎಂದು ಬರೆಸುವುದು. ಉಪಜಾತಿ ಕಾಲಂನಲ್ಲಿ ನಾಯಕ ವಾಲ್ಮೀಕಿ, ಬೇಡರ್, ಬೇಡ, ನಾಯಕ ತಳವಾರ್, ನಾಯಕ ಪರಿವಾರ ಇಂತಹ ನಾಯಕ ಜಾತಿಯನ್ನು ಗುರುತಿಸುವ ಪರ್ಯಾಯ ಪದಗಳಲ್ಲಿ ಒಂದನ್ನು ನಮೂದಿಸುವುದು.

2. ಎಸ್​ಟಿ ವರ್ಗಕ್ಕೆ ಬೇರೆ ಜಾತಿಗಳನ್ನು ಸೇರಿಸುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ. ಮೊದಲ ಹಂತವಾಗಿ ಸೆ.25 ರಂದು ರಾಜ್ಯಾದ್ಯಂತ ತಹಸೀಲ್ದಾರರು, ಜಿಲ್ಲಾಧಿಕಾರಿಯವರಿಗೆ ಈ ಕುರಿತು ಮನವಿ ಅರ್ಪಣೆ, 2ನೇ ಹಂತವಾಗಿ ಅ.7 ರಂದು ವಾಲ್ಮೀಕಿ ಜಯಂತಿಯಂದು ಶಾಸಕರು, ಸಚಿವರಿಗೆ ಮನವಿ ನೀಡುವುದು, ನಂತರದಲ್ಲಿ ಬೀದಿಗಿಳಿದು ಹೋರಾಟ ಮಾಡುವುದು.

3. ಎಸ್​ಸಿ ಮತ್ತು ಎಸ್​ಟಿ ವರ್ಗದ ಸುಳ್ಳು ಜಾತಿ ಪ್ರಮಾಣಪತ್ರ ತಡೆಯುವುದು, ಈ ಕುರಿತು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು.

ದೇವದುರ್ಗ ಶಾಸಕಿ ಕರೆಮ್ಮ ನಾಯಕ್, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಗೊಲ್ಲಪಲ್ಲಿ ವರದಾನೇಶ್ವರ ಶ್ರೀಗಳು, ಸಮುದಾಯದ ಮುಖಂಡರಾದ ಜಿ.ಟಿ. ಚಂದ್ರಶೇಖರ್, ಪಿ. ವೀರಣ್ಣ, ಶ್ರೀನಿವಾಸ್ ದಾಸಕರಿಯಪ್ಪ, ಮೃತ್ಯುಂಜಯ, ವೆಂಕಟರಾಮ್ ಈಶ್ವರ್, ಹೊದಿಗೆರೆ ರಮೇಶ್, ಕರಿಬಸಪ್ಪ ಬಾವಿಕಟ್ಟೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net