ಯರಗನಾಳು ಸಂಘದಲ್ಲಿ ಕಾಂಗ್ರೆಸ್ ಬೆಂಬಲಿತರು ಮೇಲುಗೈ

ಯರಗನಾಳು ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ವಿಜೇತರಾದವರನ್ನು ಶಾಸಕ ಕೆ.ಎಂ. ಶಿವಲಿಂಗೇಗೌಡ ಅಭಿನಂದಿಸಿದರು.
ಯರಗನಾಳು ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ವಿಜೇತರಾದವರನ್ನು ಶಾಸಕ ಕೆ.ಎಂ. ಶಿವಲಿಂಗೇಗೌಡ ಅಭಿನಂದಿಸಿದರು.
Published on

ಗಂಡಸಿ: ಸತತ 25 ವರ್ಷಗಳಿಂದ ಅವಿರೋಧ ಆಯ್ಕೆ ಮೂಲಕ ಆಡಳಿತ ಮಂಡಳಿ ರಚನೆ ಮಾಡಿಕೊಳ್ಳುತ್ತಿದ್ದ ಹೋಬಳಿಯ ಯರಗನಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಲ್ಲಿ ಸೀಟು ಹಂಚಿಕೆ ಸಂಬಂಧ ಈ ಬಾರಿ ಒಮ್ಮತ ಮೂಡದ ಕಾರಣ ಭಾನುವಾರ ಆಡಳಿತ ಮಂಡಳಿಗೆ ಚುನಾವಣೆ ನಡೆಯಿತು.

ಚುನಾವಣೆ ಸುಸೂತ್ರವಾಗಿ ನಡೆದು ಸಂಜೆ 4 ಗಂಟೆಗೆ ಪ್ರಾರಂಭವಾದ ಮತ ಎಣಿಕೆ ಕಾರ್ಯ ರಾತ್ರಿ 8 ಗಂಟೆಗೆ ಮುಕ್ತಾಯವಾಯಿತು. 11 ಸದಸ್ಯರ ಬಲ ಸಂಘದಲ್ಲಿ 11 ಸ್ಥಾನಗಳಲ್ಲೂ ಕಾಂಗ್ರೆಸ್ ಬೆಂಬಲಿತರಾದ ಮಿಥುನ್, ಅಣ್ಣೇಗೌಡ, ಕಾಂತರಾಜು, ಜಗದೀಶ್, ದೇವಮ್ಮ, ದೇಶೆಟ್ಟಿ ಗೌಡ, ಡಿ.ಎಲ್. ನಂಜೇಶ, ವಸಂತ ಕುಮಾರಿ, ವಿಷ್ಣುವರ್ಧನಚಾರಿ, ಶಿವಲಿಂಗೇಗೌಡ, ಹನುಮೇಗೌಡ ಜಯಗಳಿಸಿದರು. ಆ ಮೂಲಕ ಸಂಘದ ಆಡಳಿತ ಮಂಡಳಿಯ ಅಧಿಕಾರವನ್ನು ಕಾಂಗ್ರೆಸ್ ಬೆಂಬಲಿತರು ತಮ್ಮದಾಗಿಸಿಕೊಂಡರು. ಜಾತ್ಯತೀತ ಜನತಾದಳ ಬೆಂಬಲಿತರು 1 ಸ್ಥಾನವನ್ನೂ ಗೆಲ್ಲಲಾಗದೆ ಹೀನಾಯ ಸೋಲು ಅನುಭವಿಸಿದರು.

ನೂತನ ಸದಸ್ಯರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಕೆ.ಎಂ.ಶಿವಲಿಂಗೇಗೌಡ, ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ತಾಳಲಾರದೆ ಸಾಲ ಪಡೆದ ರೈತ ಕುಟುಂಬ ಊರು ತೊರೆಯುವಂತಾಗಿದೆ. ಕೆಲವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಫೈನಾನ್ಸ್ ಅಟ್ಟಹಾಸಕ್ಕೆ ಸರ್ಕಾರ ಸದ್ಯದಲ್ಲೇ ಬ್ರೇಕ್ ಹಾಕಲಿದೆ ಎಂದರು.

ಸರ್ಕಾರಿ ಬ್ಯಾಂಕ್‌ಗಳು ಇರುವುದೇ ರೈತರಿಗೆ ಸಾಲ ನೀಡುವುದಕ್ಕಾಗಿ. ರೈತರು ಸಾಲ ಕೇಳಿದರೆ ಇಲ್ಲಸಲ್ಲದ ಕಾರಣ ಕೇಳಿ ಸತಾಯಿಸುವ ಮೂಲಕ ರೈತರನ್ನು ವಂಚಿಸಲಾಗುತ್ತಿದೆ. ರೈತ ದೇಶದ ಬೆನ್ನೆಲುಬು ಎಂಬುದನ್ನು ಮನಗೊಂಡು ಮನಮೋಹನ್ ಸಿಂಗ್ ಸರ್ಕಾರ ವಿಶ್ವ ಬ್ಯಾಂಕ್‌ನಿಂದ ಸಾಲದ ರೂಪದಲ್ಲಿ ತರುತ್ತಿದ್ದ ಮೊತ್ತದಲ್ಲಿ ಶೇ.63 ಭಾಗ ರೈತಾಪಿ ವರ್ಗದ ಕೃಷಿ ಚಟುವಟಿಕೆಗಳಿಗೆ ಸ್ಥಳೀಯ ಸಹಕಾರ ಬ್ಯಾಂಕ್‌ಗಳ ಮೂಲಕ ಸಾಲದ ರೂಪದಲ್ಲಿ ನೀಡುತ್ತಿತ್ತು. ಈಗ ಅಧಿಕಾರದಲ್ಲಿರುವ ಕೇಂದ್ರ ಸರ್ಕಾರ ಶೇ.63ರ ಬದಲು ಶೇ.33 ಸಾಲ ನೀಡುತ್ತಿದೆ ಎಂದರು.

ಬ್ಲಾಕ್ ಕಾಂಗ್ರೆಸ್‌ಅಧ್ಯಕ್ಷ ಕುಶಾಲ್ಕುಮಾರ್ (ಮೆಟ್ರೋ ಬಾಬು) ಗ್ರಾಪಂ ಮಾಜಿ ಅಧ್ಯಕ್ಷ ಯರಗನಾಳು ಮಲ್ಲೇಶ್, ತಾಪಂ ಮಾಜಿ ಸದಸ್ಯ ಪೂರ್ಣಚಂದ್ರ ( ಆಗ್ರೋ ಬಾಬು ) ಎಪಿಎಂಸಿ ಮಾಜಿಸದಸ್ಯ ರಾಮಚಂದ್ರು, ತಾಪಂ ಮಾಜಿ ಸದಸ್ಯ ಈಶ್ವರಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಮಧು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net