

ಯಳಂದೂರು: ತಾಲೂಕಿನ ದೊಡ್ಡ ಗ್ರಾಮ ಪಂಚಾಯಿತಿಯಾಗಿರುವ ಗೌಡಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ವಸಂತ ಚಿನ್ನಸ್ವಾಮಿ ಜಯ ಸಾಧಿಸಿದರು.
9 ಗ್ರಾಮಗಳನ್ನೊಳಗೊಂಡ ಈ ಪಂಚಾಯಿತಿ ಸ್ಥಾನವು ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿತ್ತು. ಈ ಹಿಂದೆ ಅಧ್ಯಕ್ಷರಾಗಿದ್ದ ಎನ್.ಗಾಯತ್ರಿ ರಾಜೀನಾಮೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಈ ಪಂಚಾಯಿತಿಗೆ ಚುನಾವಣೆ ನಿಗದಿಯಾಗಿತ್ತು. 19 ಸದಸ್ಯರು ಇರುವ ಈ ಪಂಚಾಯಿತಿಯಲ್ಲಿ ಇಲ್ಲಿನ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ವಸಂತ ಚಿನ್ನಸ್ವಾಮಿಗೆ 12 ಮತಗಳು ಲಭಿಸಿದರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಉಮಾ ಅವರಿಗೆ 7 ಮತಗಳು ಬಂದವು. ಹೀಗಾಗಿ ಚುನಾವಣಾಧಿಕಾರಿಯಾಗಿದ್ದ ಸಿಡಿಪಿಒ ಸಕಲೇಶ್ವರ್ ಅವರು ವಸಂತ ಚಿನ್ನಸ್ವಾಮಿ ಜಯ ಗಳಿಸಿರುವುದಾಗಿ ಅಧಿಕೃತವಾಗಿ ಘೋಷಿಸಿದರು.
ಬೆಂಬಲಿಗರ ಹರ್ಷೋದ್ಘಾರ: ಪ್ರತಿಷ್ಠಿತ ಗ್ರಾಮ ಪಂಚಾಯಿತಿಗಾಗಿರುವ ಗೌಡಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷಗಾದಿಯ ಮೇಲೆ ಕಣ್ಣಿಟ್ಟಿದ್ದ ಕಾಂಗ್ರೆಸ್ ಬೆಂಬಲಿತ ಕಾರ್ಯಕರ್ತತರು ವಸಂತ ಜಯ ಗಳಿಸಿದ ಹಿನ್ನೆಲೆಯಲ್ಲಿ ರಸ್ತೆಯಲ್ಲೇ ಪಟಾಕಿ ಸಿಡಿಸಿ, ಸಿಹಿ ಹಂಚಿ ಪಕ್ಷದ ಪರ ಘೋಷಣೆಗಳನ್ನು ಕೂಗುವ ಮೂಲಕ ಹರ್ಷೋದ್ಘಾರ ವ್ಯಕ್ತಪಡಿಸಿದರು.
ನೂತನ ಅಧ್ಯಕ್ಷೆ ವಸಂತ ಚಿನ್ನಸ್ವಾಮಿ ಮಾತನಾಡಿ, ಗೌಡಹಳ್ಳಿ ಗ್ರಾಮ ಪಂಚಾಯಿತಿ ತಾಲೂಕಿನ ದೊಡ್ಡ ಪಂಚಾಯಿತಿಯಾಗಿದೆ. ಇಲ್ಲಿಗೆ 9 ಗ್ರಾಮಗಳ ಒಳಪಡುತ್ತವೆ. ಪ್ರತಿ ಗ್ರಾಮಗಳಲ್ಲೂ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲ ಸಮಸ್ಯೆಗಳ ನಿವಾರಣೆಗೆ ನಾನು ಪ್ರಥಮ ಆದ್ಯತೆ ನೀಡುತ್ತೇನೆ ಎಂದರು.
ಗ್ರಾಪಂ ಉಪಾಧ್ಯಕ್ಷ ಆರ್.ರಘು ಸದಸ್ಯರಾದ ವಿ.ಅಶ್ವಿನಿ, ಚಂದ್ರಶೇಖರ್, ಎಂ.ಚಿನ್ನಸ್ವಾಮಿ, ಎಂ.ಶಿವಮಲ್ಲು, ಉಮಾ, ಎಸ್.ಪುಷ್ಪಾ, ಬಿ.ನಂದಿನಿ, ನೀಲವೇಣಿ, ಶಿವಣ್ಣನಾಯಕ್, ಆರ್.ನಾಗರಾಜು, ಆರ್.ಪ್ರಭುಸ್ವಾಮಿ, ಎನ್.ಮಮತಾ, ಎನ್.ಗಾಯತ್ರಿ, ರಾಜೇಶ್ವರಿ, ಎನ್.ಉಮೇಶ್ ಜಿಪಂ ಮಾಜಿ ಸದಸ್ಯ ವಡಗೆರೆದಾಸ್, ಗ್ರಾಪಂ ಮಾಜಿ ಅಧ್ಯಕ್ಷ ರವಿ, ಕಾಂಗ್ರೆಸ್ ಯುವ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೇಂದ್ರ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಯರಿಯೂರು ಪ್ರಕಾಶ್, ಗೌಡಹಳ್ಳಿ ರಾಜೇಶ್, ಶಂಭುಲಿಂಗಪ್ಪ, ಸಿದ್ದಲಿಂಗೇಗೌಡ, ನಾಗೇಂದ್ರಪ್ಪ, ಪಂಜು, ಬಸವರಾಜು, ರಾಜೇಶ್ ಪಿಡಿಒ ಶಿವಕುಮಾರ್ ಸೇರಿದಂತೆ ಅನೇಕರು ಇದ್ದರು.