

ತುಮಕೂರು: ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯದ (ಇಡಿ) ವಿಚಾರಣೆ ಮೂಲಕ ಕೇಂದ್ರ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದಲ್ಲಿ ಮೌನ ಪ್ರತಿಭಟನೆ ನಡೆಸಲಾಯಿತು.
ಇಡಿ ದುರ್ಬಳಕೆ ಬಗ್ಗೆ ಪ್ಲೇಕಾರ್ಡ್‌ಗಳನ್ನು ಹಿಡಿದು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಎಐಸಿಸಿ ಮತ್ತು ಕೆಪಿಸಿಸಿ ಕರೆಯ ಮೇರೆಗೆ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ ನೇತೃತ್ವದಲ್ಲಿ ಪಕ್ಷದ ಪದಾಧಿಕಾರಿಗಳು ಮೌನ ಪ್ರತಿಭಟನೆ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ರಾಮಕೃಷ್ಣ, ಬೆಲೆ ಹೆಚ್ಚಳ, ನಿರುದ್ಯೋಗ ಸಮಸ್ಯೆ, ಆರ್ಥಿಕ ಕುಸಿತದಂತಹ ವಿಷಯಗಳಿಂದ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯುವ ಉದ್ದೇಶದಿಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇಡಿ ಮೂಲಕ ಸೋನಿಯಗಾಂಧಿ ಅವರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದರು.
ಪೆಟ್ರೋಲ್, ಡೀಸೆಲ್ ದರ ಹೆಚ್ಚಳದ ಫಲವಾಗಿ ಅಡುಗೆ ಎಣ್ಣೆ, ಅಡುಗೆ ಅನಿಲ, ಅಕ್ಕಿ ಸೇರಿ ಆಹಾರ ಪದಾರ್ಥಗಳ ಬೆಲೆ ದುಬಾರಿಯಾಗಿದೆ. ಬಡವರು,ಕೂಲಿ ಕಾರ್ಮಿಕರು ಬದುಕುವುದೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಜನಸಾಮಾನ್ಯರ ನೆರವಿಗೆ ಬರಬೇಕಾದ ಸರ್ಕಾರವು ಆಹಾರ ಪದಾರ್ಥಗಳ ಮೇಲು ಜಿಎಸ್‌ಟಿ ವಿಧಿಸಿ, ಗಾಯದ ಮೇಲೆ ಬರೆ ಎಳೆದಿದೆ. ಈ ವಿಚಾರಗಳಲ್ಲಿ ಎಲ್ಲಿ ಜನರು ಹಾಗೂ ವಿಪಕ್ಷಗಳು ತಿರುಗಿ ಬೀಳುತ್ತಾರೋ ಎಂಬ ಹೆದರಿಕೆಯಿಂದ ಕಾಂಗ್ರೆಸ್ ಮುಖಂಡರ ವಿರುದ್ದ ಇಡಿ, ಐಟಿ, ಸಿಬಿಐನಂತಹ ತನಿಖಾ ಸಂಸ್ಥೆಗಳನ್ನು ಸರ್ಕಾರ ಅಸ್ತ್ರವಾಗಿ ಬಳಕೆ ಮಾಡುತ್ತಿದೆ. ಇದರ ವಿರುದ್ಧ ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮೌನ ಪ್ರತಿಭಟನೆ ನಡೆಸುತಿದ್ದಾರೆ ಎಂದರು.
ಅನಗತ್ಯ ಕಿರುಕುಳ: ಕಳೆದ ಎರಡು ದಿನಗಳಿಂದ ಸೋನಿಯಾಗಾಂಧಿ ಅವರನ್ನು ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ಯಾವುದೇ ಮಾಹಿತಿ ಇಲ್ಲ. ಪ್ರಜಾಸತ್ತಾತ್ಮಕ ವಿಚಾರಣೆಗೆ ನಮ್ಮ ತಗಾದೆ ಇಲ್ಲ. ಅನಗತ್ಯ ಕಿರುಕುಳ ನೀಡುತ್ತಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಮಾಜಿ ಶಾಸಕ ಎಸ್.ರಫೀಕ್ ಅಹ್ಮದ್ ಹರಿಹಾಯ್ದರು. ಪ್ರತಿಭಟನೆಯಲ್ಲಿ ಶಿವಾಜಿ, ಶ್ರೀನಿವಾಸ ಕುಮಾರ್, ನಟರಾಜಶೆಟ್ಟಿ, ಸುವರ್ಣಾದೇವಿ, ಕೃಷ್ಣಪ್ಪ, ಡಾ.ಇಂತಿಯಾಜ್ ಅಹ್ಮದ್, ಸಂಜೀವಕುಮಾರ್, ಮರಿಚನ್ನಮ್ಮ, ಕೆಂಪಣ್ಣ, ಕುಮಾರಸ್ವಾಮಿ ಉಪಸ್ಥಿತರಿದ್ದರು.